ಬೆಂಗಳೂರು: ರಾಜ್ಯದ ಬಹುತೇಕ ಸರ್ಕಾರಿ ಪದವಿಪೂರ್ವ ಕಾಲೇಜುಗಳು ಪ್ರಾಂಶುಪಾಲರಿಲ್ಲದೇ ನಡೆಯುತ್ತಿವೆ. ಸುಮಾರು 543 ಹುದ್ದೆ ಖಾಲಿಯಿದ್ದು, ವರ್ಗಾವಣೆ ಕೌನ್ಸೆಲಿಂಗ್ ಮೂಲಕ ಭರ್ತಿ ಮಾಡಲು ಅಥವಾ ಸರಿಹೊಂದಿಸಲು ಪಿಯು ಶಿಕ್ಷಣ ಇಲಾಖೆ ಮುಂದಾಗಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದಲೂ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರ ಹುದ್ದೆ ಖಾಲಿಯಾಗಿಯೇ ಉಳಿದಿದೆ.
ಖಾಲಿ ಇರುವ ಹುದ್ದೆಗಳನ್ನು ವರ್ಗಾವಣೆ ಕೌನ್ಸೆಲಿಂಗ್ ಮೂಲಕ ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ನಿಗದಿತ ದಿನಾಂಕದೊಳಗೆ ಖಾಲಿ ಹುದ್ದೆಯ ಮಾಹಿತಿಯನ್ನು ಅಪ್‌ಡೇಟ್ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಿಸಿದೆ. ಹುದ್ದೆ ಖಾಲಿ ಇದ್ದೂ ಅಪ್‌ಡೇಟ್ ಮಾಡದೇ ಇದ್ದರೆ ಅಥವಾ ವಿಳಂಬ ನೀತಿ ಅನುಸರಿಸಿದರೆ, ಜಿಲ್ಲಾ ಉಪನಿರ್ದೇಶಕರೇ ಇದಕ್ಕೆ ನೇರ ಹೊಣೆಯಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದೆ.
ಬೆಂಗಳೂರು ದಕ್ಷಿಣದಲ್ಲಿ 4, ಬೆಂಗಳೂರು ಉತ್ತರದಲ್ಲಿ 6, ಗ್ರಾಮಾಂತರದಲ್ಲಿ 4, ರಾಮನಗರದಲ್ಲಿ 11, ಬಳ್ಳಾರಿಯಲ್ಲಿ 9, ಚಿಕ್ಕೊಡಿಯಲ್ಲಿ 19, ಬೆಳಗಾವಿಯಲ್ಲಿ 22, ಬಾಗಲಕೋಟೆಯಲ್ಲಿ 28, ವಿಜಯಪುರದಲ್ಲಿ 23, ಬೀದರ್‌ನಲ್ಲಿ 10, ದಾವಣಗೆರೆಯಲ್ಲಿ 16, ಚಿತ್ರದುರ್ಗ ಹಾಗೂ ಚಿಕ್ಕಮಗಳೂರಿನಲ್ಲಿ ತಲಾ 11, ಗದಗದಲ್ಲಿ 22, ಹಾವೇರಿಯಲ್ಲಿ 23, ಧಾರವಾಡದಲ್ಲಿ 14, ಕಲಬುರಗಿಯಲ್ಲಿ 21,
ಯಾದಗಿರಿಯಲ್ಲಿ 18, ಹಾಸನದಲ್ಲಿ 47, ಚಿಕ್ಕಬಳ್ಳಾಪುರದಲ್ಲಿ 3, ಕೋಲಾರದಲ್ಲಿ 16, ಚಾಮರಾಜನಗರ 9, ಮೈಸೂರಿನಲ್ಲಿ 20, ಮಂಡ್ಯದಲ್ಲಿ 30, ದಕ್ಷಿಣ ಕನ್ನಡದಲ್ಲಿ 20, ಕೊಪ್ಪಳದಲ್ಲಿ 15, ರಾಯಚೂರಿನಲ್ಲಿ 32, ಉತ್ತರ ಕನ್ನಡದಲ್ಲಿ 24, ಉಡುಪಿ 11, ಶಿವಮೊಗ್ಗ 10, ತುಮಕೂರು 18 ಹಾಗೂ ಕೊಡಗು ಜಿಲ್ಲೆಯಲ್ಲಿ 7 ಹುದ್ದೆ ಸೇರಿದಂತೆ 534 ಪ್ರಾಂಶುಪಾಲರ ಹುದ್ದೆಗಳು ಖಾಲಿಯಿವೆ.
ಹೊಸ ನೇಮಕಾತಿ ಇಲ್ಲದೆ, ವರ್ಗಾವಣೆ ಕೌನ್ಸೆಲಿಂಗ್ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗಿದೆ. ಇದರಿಂದ ಖಾಲಿ ಇರುವ ಹುದ್ದೆಗಳ ಸಂಖ್ಯೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಾಗುತ್ತಿದೆ. ಹಾಸನ, ಮಂಡ್ಯ, ರಾಯಚೂರು, ಹಾವೇರಿ, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ವಿಜಯಪುರ, ಬಾಗಲಕೋಟೆ ಮತ್ತು ಬೆಳವಾಗಿ ಮೊದಲಾದ ಜಿಲ್ಲೆಗಳ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರ ಕೊರತೆ ಹೆಚ್ಚಿದೆ.
ಸರ್ಕಾರಿ ಶಾಲೆ ದುರಸ್ತಿಗೆ 530 ಕೋಟಿ ಬಿಡುಗಡೆ
ಶಿವಮೊಗ್ಗ: ಸರಕಾರಿ ಶಾಲೆಗಳ ಆಸ್ತಿಪಾಸ್ತಿಗಳನ್ನು ಶಾಲೆಗಳ ಹೆಸರಿಗೆ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕೆ. ಸುರೇಶ್ ಕುಮಾರ್ ತಿಳಿಸಿದರು. ಶನಿವಾರ ಸಾಗರ ತಾಲೂಕಿನ ಚದರವಳ್ಳಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ಶಾಲೆಗಳ ಆಕರ್ಷಣೆ ಕಡಿಮೆ ಮಾಡಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವ ವಾತಾವರಣ ಸೃಷ್ಟಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಶಾಲೆಗಳ ದುರಸ್ತಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿ 530 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಸೆಪ್ಟೆಂಬರ್‌ನಿಂದ ನವೆಂಬರ್ ಒಳಗಾಗಿ ಆಯೋಜಿಸಲು ಸೂಚನೆ ನೀಡಲಾಗುವುದು ಎಂದರು.