ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಸಂಸದ ರವಿ ಕಿಶನ್ ಅವರ ಸ್ಟುಡಿಯೋದಲ್ಲಿ ಕೆಮರಾ ಮ್ಯಾನ್ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಬುಧವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಾಗ್ದಾಳಿ ನಡೆಸಿದ್ದಾರೆ.
“ಮಿಮಿಕ್ರಿ” ಘಟನೆಯ ಕುರಿತು ವಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿ, ”ಚುನಾಯಿತ ಪ್ರತಿನಿಧಿಗಳು ವಿದೂಷಕರಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ನೂರು ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದು ಹೇಳಲಾಗುತ್ತದೆ ಮತ್ತು ಅದರ ನಾಯಕ ಮಿಮಿಕ್ರಿ ಮಾಡುವ ವ್ಯಕ್ತಿಯ ವಿಡಿಯೋ ಮಾಡುತ್ತಿದ್ದಾರೆ. ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ರೈತನ ಮಗ ಮತ್ತು ಜಾಟ್ ಸಮುದಾಯದ ನಾಯಕನ ಅವಮಾನ ವನ್ನು ದೇಶದ ಜನರು ಸಹಿಸಿಕೊಳ್ಳಬೇಕೇ” ಎಂದು ನಡ್ಡಾ ಪ್ರಶ್ನಿಸಿದರು.
”ಜನರು ಚರ್ಚೆಗೆ ನಾಯಕರನ್ನು ಸಂಸತ್ತಿಗೆ ಕಳುಹಿಸುತ್ತಾರೆ. ಆದರೆ ಅವರು ಚರ್ಚೆ ಮಾಡುವ ಬದಲು ವಿದೂಷಕರಂತೆ ವರ್ತಿಸುತ್ತಿದ್ದಾರೆ. ಅವರು ಮಿಮಿಕ್ರಿಯನ್ನು ಮಾಡುತ್ತಿದ್ದಾರೆ. ನಾನು ನಮ್ಮ ಸಂಸದ ರವಿ ಕಿಶನ್ ಜಿ ಅವರನ್ನು ಗೋರಖ್‌ಪುರದಲ್ಲಿ ಭೇಟಿ ಮಾಡಿದ್ದೇನೆ, ಅವರು ತಮ್ಮ ಭೋಜ್‌ಪುರಿ ಸ್ಟುಡಿಯೋದಲ್ಲಿ ಕೆಮರಾ ಮ್ಯಾನ್ ಹುದ್ದೆ ಖಾಲಿ ಇದೆ ಎಂದು ಹೇಳಿದ್ದಾರೆ. ಪರೀಕ್ಷೆಯನ್ನು ನೀಡಿದರೆ, ಅವರನ್ನು ಹುದ್ದೆಗೆ ಪರಿಗಣಿಸಬಹುದು”ಎಂದು ನಡ್ಡಾ ಅವರು ರಾಹುಲ್ ವಿರುದ್ಧ ವ್ಯಂಗ್ಯವಾಡಿದರು.
”ಧನ್ಕರ್ ರೈತನ ಮಗ ಮತ್ತು ಹಿಂದುಳಿದ ವರ್ಗಗಳ ನಾಯಕ. ರಾಹುಲ್ ಗಾಂಧಿಗೆ ಈ ಸಮಯದಲ್ಲಿ ಒಬಿಸಿ ನೆನಪಿಲ್ಲ. ಅವರು ‘ಪಿಚ್ಡಾ ‘ ಎಂದು ಮಾತನಾಡುತ್ತಿದ್ದರು. ರೈತನ ಮಗ, ಒಬಿಸಿಯನ್ನು ಪ್ರತಿನಿಧಿಸುವ ಜಾಟ್ ಸಮುದಾಯದವರನ್ನು ಅವಮಾನಿಸಲಾಗಿದೆ, ಗೇಲಿ ಮಾಡಲಾಗುತ್ತಿದೆ.ಇಂತಹವರನ್ನು ಭಾರತ ಸಹಿಸಿಕೊಳ್ಳುತ್ತದೆಯೇ? ಇಂತಹವರಿಗೆ ರಾಜಕೀಯದಲ್ಲಿ ಸ್ಥಾನವಿರಬೇಕೇ?” ಎಂದು ಕಿಡಿ ಕಾರಿದರು.
ಸಂಸದರ ಅಮಾನತಿನ ವಿರುದ್ಧ ಸಂಸತ್ತಿನ ಮೆಟ್ಟಿಲುಗಳ ಮೇಲೆ ಮಂಗಳವಾರ ಪ್ರತಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅವರನ್ನು ಅಪಹಾಸ್ಯ ಮಾಡುತ್ತಿದ್ದ ವೇಳೆ, ರಾಹುಲ್ ಗಾಂಧಿ ಅವರು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರು. ಆ ಬಳಿಕ ತೀವ್ರ ರಾಜಕೀಯ ಗದ್ದಲ ಏರ್ಪಟ್ಟಿತ್ತು.