Advertisement
24-6-2015ರಂದು ಪಟ್ಟಣ ಪಂಚಾಯತ್ ಆಡಳಿತ ಅಸ್ತಿತ್ವಕ್ಕೆ ಬಂದಿದ್ದು, 6 ವರ್ಷಗಳ ಬಳಿಕವೂ ಇನ್ನೂ ಅನೇಕ ಹುದ್ದೆಗಳೇ ಭರ್ತಿಯಾಗಿಲ್ಲ! ಮುಖ್ಯಾಧಿಕಾರಿ ಹುದ್ದೆ ಮಾತ್ರ ಭರ್ತಿಯಾಗಿದ್ದು, ಕಂದಾಯ ಅಧಿಕಾರಿ, ಎಂಜಿನಿಯರ್, ಆರೋಗ್ಯಾಧಿಕಾರಿ ಇತ್ಯಾದಿ ಹುದ್ದೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿಲ್ಲ. ಕಂದಾಯ ಅಧಿಕಾರಿ, ಎಂಜಿನಿಯರ್ ಹುದ್ದೆಗೆ ನೇಮಕವಾಗಿದ್ದರೂ ಅವರಿಬ್ಬರಿಗೂ ಬೇರೆ ಕಡೆ ಡೆಪ್ಯುಟೇಶನ್ ಮಾಡಲಾಗಿದೆ. ಪರಿಣಾ ಮವಾಗಿ ಸ್ಥಳೀಯರು ತೊಂದರೆಗೊಳಗಾಗಿದ್ದಾರೆ.
Related Articles
Advertisement
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಗುರುತಿಸಬಹುದಾದ ಪ್ರಮುಖ ಸಾಧನೆಗಳು: ಕಾಸರಗೋಡು, ಕನ್ಯಾನ, ಪುಣಚದಿಂದ ಆಗಮಿಸುವವರಿಗೆ ಅರಮನೆ ರಸ್ತೆಯಿಂದ ಪುತ್ತೂರು ರಸ್ತೆಗೆ ತೆರಳಲು ಬೈಪಾಸ್ ರಸ್ತೆ ನಿರ್ಮಾಣ, ಚಂದಳಿಕೆ ಮಾಡತ್ತಡ್ಕ ರಸ್ತೆ ಅಭಿವೃದ್ಧಿ, ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವತ್ಛ ಭಾರತ, ಬೀದಿದೀಪ, ನಗರೋತ್ಥಾನ ಯೋಜನೆ ಅನುಷ್ಠಾನ, ಕುಡಿಯುವ ನೀರಿಗಾಗಿ 38 ಕೊಳವೆ ಬಾವಿ ನಿರ್ಮಾಣ ಮತ್ತಿತರ ಯೋಜನೆಗಳು ಪೂರ್ಣಗೊಂಡಿವೆ. ಕಸ ಸಾಗಾಟಕ್ಕೆ ವಾಹನಗಳನ್ನು ಖರೀದಿಸಲಾಗಿದೆ. ಅಂತರ್ಜಲ ಸಮೃದ್ಧಿಗೆ ಪ್ರತೀ ವರ್ಷವೂ ಮಳೆ ನಿಂತ ಬಳಿಕ 7 ಅಣೆಕಟ್ಟೆ ನಿರ್ಮಾಣ ಮಾಡುತ್ತಿರುವುದರಿಂದ ವಿಟ್ಲಕ್ಕೆ ನೀರಿನ ಟ್ಯಾಂಕರ್ ಬಂದಿಲ್ಲ. 1.20 ಕೋಟಿ ರೂ. ಅನುದಾನ ಸಮಗ್ರ ಕುಡಿಯುವ ನೀರು ಯೋಜನೆಗೆ ಡಿಪಿಆರ್ ಆಗಿದೆ. ಮೇಗಿನಪೇಟೆ ಪಣೆಮಜಲು ಸಂಪರ್ಕ ರಸ್ತೆ ಮತ್ತು ಪಳಿಕೆ 2 ಕೋಟಿ ರೂ. ವೆಚ್ಚದ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ನಡೆಯುತ್ತಿದೆ.
ಮುತುವರ್ಜಿ :
2015ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಅವರ ವಿಶೇಷ ಮುತುವರ್ಜಿಯಿಂದ ವಿಟ್ಲ ಗ್ರಾ.ಪಂ. ಮೇಲ್ದರ್ಜೆಗೇರಿತು. ಆದರೆ ಆರಂಭಿಕ ವ್ಯವಸ್ಥೆಯಲ್ಲಿ ಎಡರು ತೊಡರುಗಳಿದ್ದವು. ಒಂದು ವರ್ಷದ ಬಳಿಕ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಿತು. ಒಟ್ಟು 18 ಸ್ಥಾನಗಳ ಪೈಕಿ 12 ಬಿಜೆಪಿ ಮತ್ತು 6 ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು.
ಆಗಬೇಕಾಗಿರುವ ಕಾಮಗಾರಿಗಳು:
ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಾಣ ವಾಗಬೇಕಾಗಿದೆ. ಪ್ರಮುಖ ನೀರಾವರಿ ವ್ಯವಸ್ಥೆಯಾಗಬೇಕಾಗಿದೆ. ತೆರಿಗೆ, ನೀರಿನ ತೆರಿಗೆ, ಕಟ್ಟಡ ತೆರಿಗೆ, ವ್ಯಾಪಾರ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಬೇಕಾಗಿದೆ. ಕಟ್ಟಡ ಬಾಡಿಗೆ, ಸಂತೆ ಏಲಂ ಇತ್ಯಾದಿಗಳ ಮೂಲಕ ಸ್ವಂತ ಆದಾಯ ಹೆಚ್ಚಿಸಬೇಕಾಗಿದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪೇಟೆ ರಸ್ತೆ ಮತ್ತು ಅನೇಕ ಹಳ್ಳಿ ರಸ್ತೆಗಳ ಅಭಿವೃದ್ಧಿಯಾಗಬೇಕಾಗಿದೆ. ವಿಟ್ಲದ ಮಂಗಳವಾರ ಸಂತೆಗೆ ಸೂಕ್ತ ವ್ಯವಸ್ಥೆಯಾಗಬೇಕಿದೆ. ಪಾರ್ಕಿಂಗ್, ನೋ ಪಾರ್ಕಿಂಗ್ ವ್ಯವಸ್ಥೆಯನ್ನು ಗುರುತಿಸಬೇಕಾಗಿದೆ.
-ಉದಯಶಂಕರ್ ನೀರ್ಪಾಜೆ