ವಾಡಿ (ಚಿತ್ತಾಪುರ) : ತಂದೆ ಜತೆಗೆ ಹಾಸುಗಲ್ಲು ಗಣಿಗೆ ಹೋದ ಬಾಲಕನೋರ್ವ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪುರಸಭೆ ವ್ಯಾಪ್ತಿಯ ಬಸವನಗುಡಿ ಬಡಾವಣೆ ಪ್ರದೇಶದಲ್ಲಿ ಸಂಭವಿಸಿದೆ.
ಬಸವನಗುಡಿ ಬಡಾವಣೆ ನಿವಾಸಿ ಮಂಗೇಶ ಮಿಥುನ್ ಜಾಧವ (8) ಮೃತ ಬಾಲಕ. ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ.
ಇಂದು(ಶುಕ್ರವಾರ, ಆಗಸ್ಟ್ 20) ಬೆಳಗ್ಗೆ ಎಂದಿನಂತೆ ಕೂಲಿ ಕೆಲಸಕ್ಕಾಗಿ ಕಲ್ಲು ಗಣಿಗೆ ತೆರಳಿದ ಕಾರ್ಮಿಕ ಮಿಥುನ್ ಜತೆಗೆ ಆತನ ಮಗ ಮಂಗೇಶ ಕೂಡ ಹೋಗಿದ್ದಾನೆ. ಸತತ ಮಳೆಯಿಂದ ಅಪಾರ ಪ್ರಮಾಣದ ನೀರು ತುಂಬಿಕೊಂಡ ಗಣಿಯಲ್ಲಿ ಹಾಸುಗಲ್ಲು ಕತ್ತರಿಸುವ ಯಂತ್ರದ ವಿದ್ಯುತ್ ಕೇಬಲ್ ಮುಳಿಗಿತ್ತು ಎನ್ನಲಾಗಿದ್ದು, ಅದನ್ನು ಹೊರ ತೆಗೆಯಲು ಬಾಲಕನ ತಂದೆ ನೀರಿಗಿಳಿದಿದ್ದಾರೆ. ಗಣಿ ತ್ಯಾಜ್ಯದ ರಾಶಿಯಲ್ಲಿ ಕುಳಿತಿದ್ದ ಬಾಲಕ ಮಂಗೇಶ ಕಾಲುಜಾರಿ ಅದೇ ನೀರಿಗೆ ಬಿದ್ದಿದ್ದಾನೆ.
ಇದನ್ನೂ ಓದಿ : ಹುಣಸೂರನ್ನು ಜಿಲ್ಲೆಯನ್ನಾಗಿಸಲು ಹೋರಾಟ ನಡೆಸುತ್ತೇವೆ: ಶಾಸಕ ಎಚ್.ಪಿ.ಮಂಜುನಾಥ್
ನೀರಿನಲ್ಲಿ ಮುಳುಗಿದ್ದವನನ್ನು ರಕ್ಷಣೆ ಮಾಡಿ ಹೊರ ತಂದರೂ ಬಾಲಕ ಬದುಕುಳಿಯಲಿಲ್ಲ. ಹೆತ್ತ ಕರುಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಸ್ಥಳಕ್ಕೆ ಭೇಟಿನಿಡಿದ ವಾಡಿ ಠಾಣೆ ಪಿಎಸ್ ಐ ವಿಜಯಕುಮಾರ ಭಾವಗಿ ಹಾಗೂ ಸಿಬ್ಬಂದಿ, ವಾಡಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಿದ್ದಾರೆ. ಈ ಕುರಿತು ವಾಡಿ ಪೋಲಿಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.
ಜೀವ ಬಲಿ ಕೇಳುವ ಗಣಿ : ಸಿಮೆಂಟ್ ನಗರಿ ವಾಡಿ (ಜಂಕ್ಷನ್) ಪಟ್ಟಣದ ಬಸವನಗುಡಿ ಪ್ರದೇಶ ಮತ್ತು ಲಕ್ಷ್ಮೀಪುರವಾಡಿ ವ್ಯಾಪ್ತಿಯಲ್ಲಿರುವ ಅಸುರಕ್ಷಿತ ಹಲವು ಕಲ್ಲು ಗಣಿಗಳಲ್ಲಿ ಇದಕ್ಕೂ ಮೊದಲು ಕೆಲವರು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಗಣಿ ಕಾರ್ಮಿಕರು ಕೆಲಸ ಮಾಡುವಾಗ ಅಪಘಾತಕ್ಕೀಡಾಗಿ ಸಾವಿಗೀಡಾದರೆ, ಶೇಖರಣೆಯಾದ ಗಣಿ ನೀರಿನಲ್ಲಿ ಬಟ್ಟೆ ತೊಳೆಯಲು ಹೋದ ಬಾಲಕೀಯರು ಕಾಲು ಜಾರಿ ಬಿದ್ದುಮೃತಪಟ್ಟ ಉದಾಹರಣೆಗಳಿವೆ. ಪದೇಪದೆ ಇಂಥಹ ದುರ್ಘಟನೆಗಳು ಸಂಭವಿಸುತ್ತಿರುವುದು ಸ್ಥಳೀಯರಲ್ಲಿ ಆಂತಕ ಮೂಡಿದೆ.
ಅಸುರಕ್ಷಿತ ಗಣಿ ತಾಣಗಳಿಗೆ ಭದ್ರತೆ ಒದಗಿಸದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಹುಣಸೂರನ್ನು ಜಿಲ್ಲೆಯನ್ನಾಗಿಸಲು ಹೋರಾಟ ನಡೆಸುತ್ತೇವೆ: ಶಾಸಕ ಎಚ್.ಪಿ.ಮಂಜುನಾಥ್