Advertisement

ಹಣ ಪಡೆದು ಹಕ್ಕುಪತ್ರ ನೀಡದ ವಿಎ: ಆಕ್ರೋಶ

07:45 AM Aug 06, 2017 | |

ಉಪ್ಪಿನಂಗಡಿ: 94ಸಿ ಹಕ್ಕುಪತ್ರ ನೀಡುತ್ತೇನೆ ಎಂದು ಬಜತ್ತೂರು ಗ್ರಾಮಕರಣಿಕರು ಹಲವು ಮಂದಿ ಯಿಂದ ಹಣ ಪಡೆದುಕೊಂಡಿದ್ದಾರೆ, ಆದರೆ ಹಣವೂ ಇಲ್ಲ, ಹಕ್ಕುಪತ್ರವೂ ಈ ತನಕ ಸಿಗಲಿಲ್ಲ ಎಂದು ಸಭೆಯ ಲ್ಲಿದ್ದ ಬಜತ್ತೂರು ಗ್ರಾಮಸ್ಥರು ಆರೋಪಿಸಿ, ನಮಗೂ ಹಕ್ಕುಪತ್ರ ನೀಡಬೇಕು ಎಂದು ಅಹವಾಲು ಮಂಡಿಸಿದ ಘಟನೆ ಜನಸಂಪರ್ಕ ಸಭೆಯಲ್ಲಿ  ನಡೆಯಿತು.

Advertisement

ಶಾಸಕಿ ಶಕುಂತಳಾ ಅಧ್ಯಕ್ಷತೆಯಲ್ಲಿ  ಶನಿವಾರ ಉಪ್ಪಿನಂಗಡಿಯಲ್ಲಿ ನಡೆದ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಈ ಆರೋಪ ವ್ಯಕ್ತವಾಗಿ, ಶಾಸಕರು ಬಜತ್ತೂರು ಗ್ರಾಮಕರಣಿಕರು ಯಾರು ಎಂದು ಪ್ರಶ್ನಿಸಿದರು, ಆದರೆ ಸಭೆಯಲ್ಲಿ ಆರೋಪಿತ ಗ್ರಾಮಕರಣಿಕ ಇರದ ಬಗ್ಗೆ ಶಾಸಕರೂ ಅಸಮಾಧಾನ ವ್ಯಕ್ತಪಡಿಸಿ, ಫ‌ಲಾನುಭವಿಗಳನ್ನು ಈ ರೀತಿ ಯಾಕೆ ಪ್ರಾಣ ತಿನ್ನುತ್ತಿದ್ದೀರಿ? ಫ‌ಲಾನುಭವಿಗೆ ನ್ಯಾಯ ಒದಗಿಸಿಕೊಡಿ ಎಂದು ಶಾಸಕರು ತಹಶೀಲ್ದಾರ್‌ ಅನಂತ ಶಂಕರರಿಗೆ ಸೂಚನೆ ನೀಡಿದರು.

ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್‌ ಕುಮಾರ್‌ ಮಾತನಾಡಿ, ಬಜತ್ತೂರು ಗ್ರಾಮಕರಣಿಕ ಸುನಿಲ್‌ ಅವರು 94/ಸಿ ಹಕ್ಕುಪತ್ರ ನೀಡುತ್ತೇನೆ ಎಂದು ಹೇಳಿಕೊಂಡು ಗ್ರಾಮದಲ್ಲಿ ಒಬ್ಬೊಬ್ಬರಿಂದ 5 ಸಾವಿರ ರೂ. ಪಡೆದುಕೊಂಡಿದ್ದಾರೆ. ಹಣ ಪಡೆದುಕೊಂಡು 6 ತಿಂಗಳು ಕಳೆಯಿತು. ಆದರೆ ಈ ತನಕ ಯಾರಿಗೂ ಹಕ್ಕುಪತ್ರ ಸಿಕ್ಕಿಲ್ಲ ಎಂದು ಸಭೆಯ ಗಮನ ಸೆಳೆದರು.

ಅದಲ್ಲದೆ ಈ ವ್ಯಕ್ತಿ ಈ ರೀತಿ ಹಣ ಪಡೆದುಕೊಂಡಿ ದ್ದಲ್ಲದೆ, ಗ್ರಾಮಸ್ಥರೊಂದಿಗೆ ಆ ಹಣದಲ್ಲಿ ಗ್ರಾ.ಪಂ. ಅಧ್ಯಕ್ಷರಿಗೂ ಪಾಲು ಇದೆ ಎಂದು ಹೇಳಿಕೊಂಡಿದ್ದಾರೆ. ಗ್ರಾಮಕರಣಿಕರು ಈ ರೀತಿಯಾಗಿ ಮೋಸ ಮಾಡುತ್ತಿ ದ್ದಾರೆ ಮತ್ತು ಗ್ರಾಮಸ್ಥರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫ‌ಲಾನುಭವಿಯಿಂದ ಹಣ ಪಡೆಯುವಾಗ ಸರಕಾರಕ್ಕೆ ಕಟ್ಟುವುದಕ್ಕೆ ಇದೆ ಎಂದು ಹೇಳಿಕೊಂಡಿದ್ದಾರೆ, ಆದರೆ ಸರಕಾರಕ್ಕೆ 3,800 ರೂ. ಕಟ್ಟಬೇಕು, ಆದರೆ ಗ್ರಾಮಕರಣಿಕ ಸುನಿಲ್‌ ಈ ಹಣವನ್ನೂ ಕಟ್ಟಿರುವುದಿಲ್ಲ, ಬಹಳಷ್ಟು ಮಂದಿ ಸಾಲ ಮಾಡಿ ಹಣಕೊಟ್ಟಿದ್ದಾರೆ, ಅದರಲ್ಲೂ ಓರ್ವ ವಿಧವೆಯಿಂದಲೂ ಹಣ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

Advertisement

ಇದರಿಂದ ಆಕ್ರೋಶಿತರಾದ ಶಾಸಕರು ಕೆಲವೊಂದು ಅಧಿಕಾರಿಗಳು ಕನಿಷ್ಠ ಮಾನವೀಯತೆ ತೋರದೆ ಜನರನ್ನು ಪೀಡಿಸುತ್ತಿದ್ದಾರೆ. ಇದರಲ್ಲಿ ಗ್ರಾಮಕರಣಿಕ ಸುನಿಲ್‌ ಮೊದಲಿಗರು, ಸುನಿಲ್‌ ಹೆಸರಿನಲ್ಲಿ ಎಷ್ಟು ಮಂದಿ ಗ್ರಾಮಕರಣಿಕರು ಇದ್ದಾರೆ? ನಮಗೆ ಸುನಿಲ್‌ ಹೆಸರಿನ ಗ್ರಾಮಕರಣಿಕರ ಬಗ್ಗೆಯೇ ದೂರು ಬರುತ್ತಿದೆ ಎಂದರು. 

ಆಗ ಗ್ರಾಮಸ್ಥರು ಕಳೆದ ಜನಸಂಪರ್ಕ ಸಭೆಯಲ್ಲಿಯೂ ಅವರ ಬಗ್ಗೆ ದೂರು ಬಂದಿತ್ತು ಎಂದರು. ಫ‌ಲಾನುಭವಿಗಳಿಗೆ ತೊಂದರೆ ಕೊಡದೆ ಹಕ್ಕುಪತ್ರ ವಿತರಣೆಗೆ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್‌ಗೆ ಶಾಸಕರು ಸೂಚನೆ ನೀಡಿದರು.

ಉಪ್ಪಿನಂಗಡಿ ಗಾಂಧಿಪಾರ್ಕ್‌ ಬಳಿ ಇದ್ದ ಅಪಾಯಕಾರಿ ಒಣಗಿದ ಮರವೊಂದು ಬಿದ್ದು, ಅವುಗಳು ವಿದ್ಯುತ್‌ ಕಂಬದ ಮೇಲೆ ಬಿದ್ದುದರಿಂದಾಗಿ 6 ವಿದ್ಯುತ್‌ ಕಂಬ ತುಂಡಾಗಿ ಬಿದ್ದಿವೆ. 2 ದಿನಗಳಿಂದ ಉಪ್ಪಿನಂಗಡಿ ಪರಿಸರದಲ್ಲಿ ವಿದ್ಯುತ್‌ ಇಲ್ಲ, ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ಇದಕ್ಕೆಲ್ಲ ಕಾರಣ ಅರಣ್ಯ ಇಲಾಖೆಯವರ ಕಾರ್ಯವೈಖರಿ ಎಂದು ತಾಲೂಕು ಕೆಡಿಪಿ ಸದಸ್ಯ ಅಶ್ರಫ್ ಬಸ್ತಿಕ್ಕಾರ್‌ ಸಭೆಗೆ ತಿಳಿಸಿದರು.

ಆಗ ಸಭೆಯಲ್ಲಿದ್ದ ಗ್ರಾಮಸ್ಥರು ಈ ಹಿಂದೆಯೇ ಅದನ್ನು ತೆರವು ಮಾಡಬೇಕಿತ್ತು. ಮಾಡಿಲ್ಲ, ಇದೀಗ ಈ ರೀತಿಯ ಸಮಸ್ಯೆ ತಂದೊಡ್ಡಿದೆ ಎಂದರು. ಆಗ ಅಶ್ರಫ್ ಬಸ್ತಿಕ್ಕಾರ್‌ ಮಾತು ಮುಂದುವರಿಸಿ, ಒಂದೂವರೆ ವರ್ಷದ ಹಿಂದೆ ಈ ಮರದ ಅಪಾಯದ ಬಗ್ಗೆ ತಿಳಿಸಲಾಗಿತ್ತು. ರಸ್ತೆ ಕಾಮಗಾರಿ ಉದ್ಘಾಟನೆ ವೇಳೆ ಆ ಮರ ಇದ್ದ ಬಗ್ಗೆ ತಮ್ಮ ಬಳಿ ಗ್ರಾಮಸ್ಥರು ದೂರು ನೀಡಿದ್ದರು. ತತ್‌ಕ್ಷಣ ತಾವು ವಲಯ ಅರಣ್ಯಾಧಿಕಾರಿಗೆ ಕರೆ ಮಾಡಿ ಮರ ತೆರವು ಬಗ್ಗೆ ತಿಳಿಸಿದ್ದೆ. ಆದರೂ ತೆರವು ಮಾಡಿರಲಿಲ್ಲ, ಇದೀಗ ಸಮಸ್ಯೆಗೆ ಕಾರಣವಾಗಿದೆ ಎಂದರು. ಆಗ ಶಾಸಕರು ಅರಣ್ಯ ಇಲಾಖೆ ಅಧಿಕಾರಿಯನ್ನು ಕರೆದರು, ಆದರೆ ಸಭೆಯಲ್ಲಿ ಅರಣ್ಯ ಇಲಾಖೆ ಸಿಬಂದಿ ಯಾರೂ ಇರಲಿಲ್ಲ, ಆಗ ಶಾಸಕರು  ಯಾವೆಲ್ಲ ಇಲಾಖೆಯವರು ಸಭೆಗೆ ಬಂದಿಲ್ಲ, ಅಂತಹ ಇಲಾಖೆ ಬಗ್ಗೆ ವಿವರ ಕೊಡಿ, ಅವರ ವಿರುದ್ಧ ಕ್ರಮಕ್ಕೆ ಬರೆಯುತ್ತೇನೆ ಎಂದರು.

ಹಕ್ಕುಪತ್ರ ವಿತರಣೆ
ಸಭೆಯಲ್ಲಿ ಶಾಸಕರು 150 ಮಂದಿಗೆ 94/ಸಿ ಹಕ್ಕುಪತ್ರ ವಿತರಿಸಿದರು. ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಸದಸ್ಯೆ ಉಷಾ ಅಂಚನ್‌, ಗ್ರಾಮ ಪಂ. ಅಧ್ಯಕ್ಷ ಕೆ. ಅಬ್ದುಲ್‌ ರಹಿಮಾನ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್‌ ಉಪಸ್ಥಿತರಿದ್ದರು.
ಜಿಲ್ಲಾ  ಕೆಡಿಪಿ ಸದಸ್ಯ ಯು.ಕೆ. ಅಯ್ಯೂಬ್‌, ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣರಾವ್‌ ಅರ್ತಿಲ, ಗ್ರಾ.ಪಂ. ಸದಸ್ಯ ಯು.ಕೆ. ಇಬ್ರಾಹಿಂ, ಗ್ರಾಮಸ್ಥರಾದ ಮಹಮ್ಮದ್‌ ಕೆಂಪಿ ಮಾತನಾಡಿದರು. ಗ್ರಾಮಸ್ಥರಾದ ಜಯಂತ ಪೊರೋಳಿ, ಅಬ್ಟಾಸ್‌ ಬಸ್ತಿಕ್ಕಾರ್‌ ಉಪಸ್ಥಿತರಿದ್ದರು.ಉಪ್ಪಿನಂಗಡಿ ಉಪ ತಹಶೀಲ್ದಾರ್‌ ಸದಾಶಿವ ನಾಯ್ಕ ಸ್ವಾಗತಿಸಿ, ಗ್ರಾಮಕರಣಿಕ ರಮಾನಂದ ಚಕ್ಕಡಿ ವಂದಿಸಿದರು. ಕಂದಾಯ ನಿರೀಕ್ಷಕ ಪ್ರಸನ್ನ ಪಕ್ಕಳ  ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next