Advertisement

18ರಂದು ವಿಟಿಯು ವಿದ್ಯಾರ್ಥಿಗಳ ಪ್ರತಿಭಟನೆ

10:34 AM Aug 15, 2017 | Team Udayavani |

ಕಲಬುರಗಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಇಂಜಿನಿಯರಿಂಗ್‌ ಫಲಿತಾಂಶ ವಿಳಂಬ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆ. 18ರಂದು ರಾಜ್ಯವ್ಯಾಪಿ ಕರೆ ಮೇರೆಗೆ ನಗರದಲ್ಲಿ ಬೃಹತ್‌ ಪ್ರತಿಭಟನಾ ರಯಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿ, ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಜೇಷನ್‌ ಸಂಚಾಲಕ
ಹಣಮಂತ ಎಸ್‌.ಎಚ್‌. ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11:00ಕ್ಕೆ
ನಗರದ ಆರ್‌ಟಿಒ ಕ್ರಾಸ್‌ನಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದವರೆಗೆ ರ್ಯಾಲಿ ನಡೆಯಲಿದೆ. ರ್ಯಾಲಿಯಲ್ಲಿ ನಗರದ ವಿವಿಧ ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ವಿಟಿಯು ಇಂಜಿನಿಯರಿಂಗ್‌ ಫಲಿತಾಂಶ 5 ತಿಂಗಳ ವಿಳಂಬದ ನಂತರ ಪ್ರಕಟಗೊಂಡಿದೆ. ಅದೂ ಸಾವಿರಾರು ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ. ಅವರಲ್ಲಿ ಹಲವು ವಿದ್ಯಾರ್ಥಿಗಳ ಫಲಿತಾಂಶ ಅವರು ಪರೀಕ್ಷೆ ಎದುರಿಸಬೇಕಾದ ದಿನವೇ ಹೊರಬಂದಿದೆ. ಇನ್ನೂ ಕೆಲವು ವಿದ್ಯಾರ್ಥಿಗಳು ಒಂದೇ ದಿನ ಎರಡು ಪರೀಕ್ಷೆ ಎದುರಿಸಬೇಕಾದ ಸ್ಥಿತಿ ಇತ್ತು. ಪರೀಕ್ಷೆ ದಿನದವರೆಗೂ
ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಉತ್ತೀರ್ಣ, ಎಷ್ಟು ವಿಷಯಗಳ ಪರೀಕ್ಷೆಗಳಿಗೆ ತಯಾರು ಮುಂತಾದ ಪ್ರಶ್ನೆಗಳು ಕಾಡುತ್ತಿದ್ದವು. ಲಾಸ್ಟ್‌ ಸೆಮಿಸ್ಟರ್‌ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳು ಕೇವಲ 50 ದಿನಗಳ ಅಂತರದಲ್ಲಿ 16ರಿಂದ 20 ವಿಷಯಗಳ ಪರೀಕ್ಷೆ ಬರೆಯುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಕೂಡಲೇ 2010ರ ಸ್ಕೀಮ್‌ನ ವಿದ್ಯಾರ್ಥಿಗಳಿಗೆ ಇಯರ್‌ ಬ್ಯಾಕ್‌ ಮತ್ತು ಕ್ರಿಟಿಕಲ್‌ ಇಯರ್‌ ಬ್ಯಾಕ್‌ ವ್ಯವಸ್ಥೆ ತೆಗೆದುಹಾಕಬೇಕು. ಸಿಬಿಸಿಎಸ್‌ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಬೇಕು. ಸಿಬಿಸಿಎಸ್‌ ವಿದ್ಯಾರ್ಥಿಗಳು ಅನುತ್ತೀರ್ಣರಾದ ವಿಷಯಗಳಲ್ಲಿ ಗಳಿಸಿರುವ ಅಂಕ ಪ್ರಕಟಿಸುವಂತೆ ಆಗ್ರಹಿಸಿದ ಅವರು, ಈ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯವ್ಯಾಪಿ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳು ಹೋರಾಟ ರೂಪಿಸುತ್ತಿದ್ದು, ಆ ನಿಮಿತ್ತ ಆಗಸ್ಟ್‌ 18ರಂದು ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಹ ಸಂಚಾಲಕ ಶಿವಕುಮಾರ ಸೊನ್ನ, ಅಭಯಾ ದಿವಾಕರ್‌, ಸಿಂಗೆ, ಶಶಿ, ದಿಗಂಬರ
ಸುದ್ದಿಗೋಷ್ಠಿಯಲ್ಲಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next