Advertisement
ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ ಬಿ. ಹೆಗ್ಡೆ ಅವರು ದಿ| ವಿ. ಟಿ. ಹೆಗ್ಡೆ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ನುಡಿನಮನ ಸಲ್ಲಿಸಿ, ಸಹೃದಯತೆ, ಪ್ರೀತಿ ವಿಶ್ವಾಸಗಳಿಂದ ಸದಾ ಬೆರೆತು, ಸದಾ ಹೆಗ್ಗಡೆ ಸಮಾಜದ ಉನ್ನತಿಯನ್ನು ಬಯಸಿದ ವಿ. ಟಿ. ಹೆಗ್ಡೆ ಅವರು ಮುಂಬಯಿ ಮಹಾನಗರದಲ್ಲಿ ಸಮಾಜದ ಮಿತ್ರರನ್ನು ಒಂದುಗೂಡಿಸಿ ಹೆಗ್ಗಡೆ ಸೇವಾ ಸಂಘ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲು ಕಾರಣೀಭೂತರಾಗಿದ್ದರು. ಅಲ್ಲದೆ ಸಂಸ್ಥೆಯ ಶ್ರೇಯೋಭಿವೃದ್ದಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಸಂಸ್ಥೆಯ ಉನ್ನತ ಹುದ್ದೆ ಅಧ್ಯಕ್ಷೀಯ ಪದವಿಯನ್ನು ಅಲಂಕರಿಸಿ ಉತ್ತಮ ಸಮಾಜಮುಖೀ ಕಾರ್ಯಕ್ರಮಗಳನ್ನು ಮಾಡಿ ಐರೋಲಿಯಲ್ಲಿ ನಿರ್ಮಿತಗೊಂಡ ಹೆಗ್ಗಡೆ ಭವನ ಇದರ ಸಭಾ ಭವನವನ್ನು ಅವರ ಪತ್ನಿ ದಿ| ಜಯಂತಿ ಹೆಗ್ಡೆ ಅವರ ಸವಿನೆನಪಿಗಾಗಿ ನಿರ್ಮಿಸಿ ಅದರಿಂದ ಸಮಾಜ ಮುಖೀ ಕಾರ್ಯಕ್ರಮಗಳನ್ನು ನೀಡಲು ಸಹಕರಿಸಿದ ಒಬ್ಬ ನಿಜವಾದ ಸಮಾಜ ಪ್ರೇಮಿಯಾಗಿ ಯುವ ಪೀಳಿಗೆಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
Related Articles
Advertisement
ಮಾಜಿ ಅಧ್ಯಕ್ಷ ರತ್ನಾಕರ ಹೆಗ್ಡೆ ಅವರು ಮಾತನಾಡಿ, ಇಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಸಿದ್ಧಾಂತವನ್ನು ರೂಪಿಸಿಕೊಂಡ ಸಮಾಜದ ನಾಯಕ ಅವರಾಗಿದ್ದಾರೆ ಎಂದರು. ಎಲ್. ಸಿ. ಹೆಗ್ಡೆ ಅವರು ಮಾತನಾಡಿ, ಅನೇಕ ವರ್ಷಗಳಿಂದ ಅವರೊಂದಿಗೆ ಸಂಘಟನೆಯೊಂದಿಗೆ ಸೇವೆ ಮಾಡುವ ಭಾಗ್ಯ ನನಗೆ ದೊರೆತಿದೆ. ಸಮಾಜ ಸೇವೆಯ ಪಾಠವನ್ನು ಅವರಿಂದ ನಾನು ಕಲಿತಿದ್ದೇನೆ ಎಂದರು.
ದಿ| ವಿ. ಟಿ. ಹೆಗ್ಡೆ ಅವರ ಪುತ್ರ ದಿನೇಶ್ ಹೆಗ್ಡೆ ಅವರು ಮಾತನಾಡಿ, ತಂದೆಗಿಂತಲೂ ಓರ್ವ ಉತ್ತಮ ಗುರುವಿನಂತೆ ನಮಗೆ ಮಾರ್ಗದರ್ಶನ ನೀಡಿ ನಮ್ಮನ್ನು ಬೆಳೆಸಿದ್ದಾರೆ. ಅವರಂತಹ ತಂದೆ ನನ್ನ ಪಾಲಿಗೆ ದೊರೆತದ್ದು ಪೂರ್ವ ಜನ್ಮದ ಪುಣ್ಯದ ಫಲವಾಗಿದೆ ಎಂದು ಹೇಳಿದರು.
ಹೆಗ್ಗಡೆ ಸೇವಾ ಸಂಘ ಮುಂಬಯಿ ಗೌರವಾಧ್ಯಕ್ಷ ಸಂಜೀವ ಪಿ. ಹೆಗ್ಡೆ, ಉಪಾಧ್ಯಕ್ಷರಾದ ಬಿ. ಗೋಪಾಲ್ ಹೆಗ್ಡೆ, ಜಯರಾಮ ಹೆಗ್ಡೆ, ಕಾರ್ಯದರ್ಶಿ ಶಂಕರ್ ಆರ್. ಹೆಗ್ಡೆ, ಕೋಶಾಧಿಕಾರಿ ರಮೇಶ್ ಎಂ. ಹೆಗ್ಡೆ, ಜತೆ ಕಾರ್ಯದರ್ಶಿ ರವಿ ಎಸ್. ಹೆಗ್ಡೆ, ಜತೆ ಕೋಶಾಧಿಕಾರಿ ಚಂದ್ರಶೇಖರ ಬಿ. ಹೆಗ್ಡೆ, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಯುವ ವಿಭಾಗ, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯ ಬಾಂಧವರು ಉಪಸ್ಥಿತರಿದ್ದು, ದಿ| ವಿ. ಟಿ. ಹೆಗ್ಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಚಿತ್ರ-ವರದಿ: ಸುಭಾಷ್ ಶಿರಿಯಾ