ಬೆಂಗಳೂರು: “ಮೂರು ತಿಂಗಳು ಮೌನವಾಗಿರಿ, ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ವಿಧಾನಸಭೆ ಚುನಾವಣೆ ಕೆಲಸದಲ್ಲಿ ತೊಡಗಿಕೊಳ್ಳಿ ಎಂದು ವರಿಷ್ಠರು ಸೂಚಿಸಿದ್ದಾರೆ ಅದರಂತೆ ನಾನು ವಹಿಸಿರುವ ಕೆಲಸ ಮಾಡಿಕೊಂಡು ಹೋಗುತ್ತೇನೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರ ಜತೆಗಿನ ಚರ್ಚೆ ಸಮಾಧಾನ ತಂದಿದೆ. ಏನು ಹೇಳಬೇಕೋ ಹೇಳಿದ್ದೇನೆ. ನನ್ನ ಕೆಲಸ ನಾನು ಮಾಡುತ್ತೇನೆ. ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಹೇಳಿದರು.
ಬೆಂಗಳೂರಷ್ಟೇ ಅಲ್ಲದೆ ಮೈಸೂರು, ಚಾಮರಾಜನಗರ, ಹಾಸನ ಸಹಿತ ಹಲವು ಜಿಲ್ಲೆಗಳಲ್ಲಿ ನನ್ನದೇ ಆದ ಶಕ್ತಿ ಇದೆ. ರಾಯಚೂರಿನಿಂದ ಹಿಡಿದು ರಾಜ್ಯದ ಬೇರೆ ಬೇರೆ ಕಡೆ ನನಗೆ ವಹಿಸಿದ ಎಲ್ಲ ಉಪ ಚುನಾವಣೆಗಳಲ್ಲೂ ಪಕ್ಷಕ್ಕೆ ಗೆಲುವು ತಂದು ಕೊಟ್ಟಿದ್ದೇನೆ. ಅಮಿತ್ ಶಾ, ಬಿ.ಎಲ್.ಸಂತೋಷ್, ಪ್ರಹ್ಲಾದ ಜೋಷಿ, ಧರ್ಮೇಂದ್ರ ಪ್ರಧಾನ್ ಮುಂತಾದವರ ಜತೆ ಮಾತನಾಡಿದ್ದೇನೆ. ಈಗ ಎಲ್ಲವೂ ಸರಿಹೋಗಿದೆ ಎಂದರು.
ಯಡಿಯೂರಪ್ಪ ನಮಗೆಲ್ಲ ಪ್ರಶ್ನಾತೀತ ನಾಯಕರು. ಯಡಿಯೂರಪ್ಪ ಈ ರಾಜ್ಯದ ನಾಯಕರು ಗಣ್ಯರ ಸಾಲಿನಲ್ಲಿ ಅವರು ಕೂಡ ಒಬ್ಬರು. ಜೆ.ಎಚ್. ಪಟೇಲ್, ಎಚ್.ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ, ಯಡಿಯೂರಪ್ಪ ಅವರ ಗರಡಿಯಲ್ಲಿ ಬೆಳೆದಿದ್ದೇನೆ. ಎಂದು ತಿಳಿಸಿದರು. ಬಿ.ವೈ. ವಿಜಯೇಂದ್ರ ಹೇಳಿಕೆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅವರಿನ್ನೂ ಯುವಕ, ಬೆಳೆಯಬೇಕಾದವರು. ಯಡಿಯೂರಪ್ಪಗೆ ಸರಿಸಾಟಿ ಯಡಿಯೂರಪ್ಪನವರೇ. ಅದೇ ರೀತಿ ಸೋಮಣ್ಣಗೆ ಸರಿಸಾಟಿ ಸೋಮಣ್ಣನೇ ಎಂದು ಹೇಳಿದರು.
ಅರುಣ್ ಸೋಮಣ್ಣ ಅವರಿಗೆ ಟಿಕೆಟ್ ಭರವಸೆ ಸಿಕ್ಕಿದೆಯಾ ಎಂಬ ಪ್ರಶ್ನೆಗೆ, ಮಗನ ರಾಜಕೀಯ ಭವಿಷ್ಯ ಪಕ್ಷದ ವರಿಷ್ಠರಿಗೆ ಬಿಟ್ಟದ್ದು. ನನ್ನ ಮಗನೂ ಎಂದೂ ಯಾವುದಕ್ಕೂ ಆಸೆ ಪಟ್ಟವನಲ್ಲ, ಇನ್ಮುಂದೆ ನಾನು ನನ್ನ ಕೆಲಸ ಮಾಡಿಕೊಂಡು ಹೋಗುತ್ತೇನೆ. ಪಕ್ಷ ಬಿಡುತ್ತೇನೆ ಎಂದು ಎಲ್ಲೂ ಹೇಳಿರಲಿಲ್ಲ. ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ ಎಂದು ತಿಳಿಸಿದರು.
ನಾನು ಎಲೆಕ್ಷನ್ ಸ್ಟ್ರಾಟಜಿ ಮಾಸ್ಟರ್, ಉಪ ಚುನಾವಣೆಗಳಲ್ಲಿ ಹೇಗೆ ಕೆಲಸ ಮಾಡುತ್ತೇನೆ ಅಂತಾ ಎಲ್ಲ ಪಕ್ಷದ ವರಿಗೂ ಗೊತ್ತು. ನಾನು 3 ಪಕ್ಷವನ್ನು ನೋಡಿದ್ದೇನೆ. ಯಡಿಯೂರಪ್ಪ ನನ್ನ ನಾಯಕರು ಯಾವಾಗ ಕರೆದರೂ ಅವರ ಭೇಟಿಗೆ ಹೋಗುತ್ತೇನೆ. ನಾಳೆಯೇ ಬಾ ಎಂದರೂ ಹೋಗುತ್ತೇನೆ.
– ವಿ.ಸೋಮಣ್ಣ, ವಸತಿ ಸಚಿವ