ಬೆಂಗಳೂರು : ಬಡವರು ಬಡವರಾಗಿ ಉಳಿಯಬಾರದು ಎಲ್ಲರಿಗೂ ಸಮಾನ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ನಗರದ ಪ್ರತಿಯೊಂದು ಸ್ಲಮ್‍ನಲ್ಲೂ ಮನೆಗಳನ್ನು ನಿರ್ಮಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ ಎಂದು ವಸತಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದರು.
ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 105 ಅಗ್ರಹಾರ ದಾಸರಹಳ್ಳಿಯಲ್ಲಿ ವಿವಿಧ ಕಾಮಗಾರಿಗಳ ಪರಿವೀಕ್ಷಣೆ ನಡೆಸಿ ಅವರು ಮಾತನಾಡಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆಯುತ್ತಿರುವ ಒಟ್ಟು ಸುಮಾರು ರೂ. 5.00 ಕೋಟಿ ವೆಚ್ಚದ ಕಾಮಗಾರಿಗಳಾದ ತೋಟಗಾರಿಕೆ ಕಾಮಗಾರಿ, ಚರಂಡಿ ಕಾಮಗಾರಿ, ಸೋಲಾರ್ ಹೀಟರ್, ಆರೋಗ್ಯ ಕೇಂದ್ರ, ಕೆ.ಹೆಚ್.ಬಿ ಕಾಲೋನಿ ಅಭಿವೃದ್ದಿ, 150 ಮನೆಗಳ ನಿರ್ಮಾಣ, ಬಸವನ ಪಾರ್ಕ್, ಇಂಗು ಗುಂಡಿ, ಕಾಂಕ್ರಿಟ್ ರಸ್ತೆ, ಹಾಗೂ ಕ್ರೀಡಾ ಸಂಕೀರ್ಣ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿಯನ್ನು ವೀಕ್ಷಿಸಿದರು.
ಅಗ್ರಹಾರ ದಾಸರಹಳ್ಳಿ ಕೆ.ಹೆಚ್.ಬಿ ಕಾಲೋನಿಯಲ್ಲಿ 30 ಜನರಿಗೆ ಸೋಲಾರ್ ಹೀಟರ್ ಉಪಕರಣ ವಿತರಣೆ ಮಾಡಿ ಮುಂಬರುವ ದಿನಗಳಲ್ಲಿ ಎಲ್ಲರಿಗೂ ಸೋಲಾರ್ ವ್ಯವಸ್ಥೆಯನ್ನು ಮಾಡಲಾಗುವುದು ಹಾಗೂ ಮನೆಗಳನ್ನು ನಿರ್ಮಾಣ ಮಾಡಲು ಸ್ಥಳವನ್ನು ಪರಿಶೀಲಿಸಿರುವ ಜಾಗದಲ್ಲಿ 140 ಕ್ಕೂ ಹೆಚ್ಚು ಮನೆಗಳು ನಿರ್ಮಾಣ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 105 ಅಗ್ರಹಾರ ದಾಸರಹಳ್ಳಿಯ ಸದಸ್ಯರಾದ ಶ್ರೀಮತಿ ಶಿಲ್ಪ ಶ್ರೀಧರ್ ಅವರು ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕೆಲವು ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ಹೊಸದಾಗಿ ಮತ್ತಷ್ಟು ಕಾಮಗಾರಿಗಳನ್ನು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬನಶಂಕರಿಯ ದೇವಸ್ಥಾನದ ಹತ್ತಿರ ಚರಂಡಿ ಹಾಗೂ ಕಾಂಕ್ರಿಟ್ ರಸ್ತೆಯ ಗುದ್ದಲಿ ಪೂಜೆ ನೆರವೇರಿಸಿದ ಸಚಿವರು ಕೆ.ಹೆಚ್.ಬಿ ಕಾಲೋನಿಯ ಸ್ಲಮ್‍ನಲ್ಲಿ ವಾಸ ಮಾಡುತ್ತಿರುವ 15 ಫಲಾನುಭವಿಗಳಿಗೆ ತಲಾ 15,000/- ರೂಗಳ ಚೆಕ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯರು, ಇಲಾಖಾ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.