ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಾಗಿ “ವಿ’ ಹೆಸರಿನವರೇ ಹೆಚ್ಚಾಗಿ ಚುನಾಯಿತರಾಗಿ ರುವುದು ಮತ್ತೂಂದು ವಿಶೇಷ. ಚಿಂಚೋಳಿ ವಿಧಾನಸಭೆ ಯಿಂದ ಒಟ್ಟು 6 ಜನರು ಶಾಸಕರಾಗಿ ಚುನಾಯಿತ ರಾಗಿದ್ದಾರೆ. ಅವರ ಹೆಸರಿನಲ್ಲಿ “ವಿ’ ಅಕ್ಷರವಿರೋದು ಗಮನಾರ್ಹ.
ಇದುವರೆಗೆ ವೀರೇಂದ್ರ ಪಾಟೀಲ, ದೇವಿಂದ್ರಪ್ಪ ಘಾಳೆಪ್ಪ, ವೀರಯ್ಯ ಸ್ವಾಮಿ, ವೈಜನಾಥ ಪಾಟೀಲ, ಕೈಲಾಸನಾಥ ವಿ. ಪಾಟೀಲ ಹಾಗೂ ಸುನೀಲ ವಲ್ಲಾಪುರೆ, ಡಾ|ಅವಿನಾಶ್ ಜಾಧವ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಂದರೆ “ವೀ’ರೇಂದ್ರ ಪಾಟೀಲ, “ವೀ’ರಯ್ಯ ಸ್ವಾಮಿ, “ವೈ’ಜನಾಥ ಪಾಟೀಲ, ಸುನೀಲ “ವ’ಲ್ಲಾಪುರೆ, ಕೈಲಾಸನಾಥ “ವಿ’ ಪಾಟೀಲ, ದೇ”ವಿಂದ್ರಪ್ಪ ಘಾಳೆಪ್ಪ, ಪ್ರಸಕ್ತ ಶಾಸಕರಾಗಿರುವ ಡಾ|ಅವಿನಾಶ ಜಾಧವ್ ಎನ್ನುವ ಹೆಸರಿನಲ್ಲಿ ವಿ’ ಅಕ್ಷರಗಳಿವೆ. ಹೀಗಾಗಿ ಚಿಂಚೋಳಿ ಚುನಾವಣೆಯಲ್ಲಿ “ವಿ’ ಹೆಸರಿದ್ದರೆ ಲಕ್ ಎನ್ನಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಚಿಂಚೋಳಿ ತಾಲೂಕಿನಲ್ಲಿ ರಾಜಕಾರಣಿಗಳು ತಮ್ಮ ಮಕ್ಕಳಿಗೆ ವಿಕ್ರಮ, ವಿನೋದ, ವೀರೇಶ ಮುಂತಾದ “ವಿ’ ಅಕ್ಷರ ಬರುವ ಹಾಗೆ ಹೆಸರುಗಳನ್ನಿಟ್ಟಿದ್ದಾರೆ.
ಗೆದ್ದ ಪಕ್ಷವೇ ಅಧಿಕಾರಕ್ಕೆ:ಚಿಂಚೋಳಿಯಲ್ಲಿ ಗೆದ್ದ ಪಕ್ಷವೇ ರಾಜ್ಯದಲ್ಲಿ ಆಡಳಿತ ನಡೆಸುವುದು ವಾಡಿಕೆ. 1957ರಿಂದ ಇಲ್ಲಿಯವರೆಗೆ ಒಂದು ಉಪ ಚುನಾವಣೆ ಸೇರಿ 15 ಚುನಾವಣೆಗಳಾಗಿವೆ. ಆದರೆ ಚಿಂಚೋಳಿಯಲ್ಲಿ ಗೆದ್ದ ಪಕ್ಷವೇ ರಾಜ್ಯದ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಚಿಂಚೋಳಿ ಶಾಸಕರಾಗುವವರಿಗೆ ಎಲ್ಲಿಲ್ಲದ ಬೇಡಿಕೆ. ಹೀಗೆ ಹಲವು ವೈವಿಧ್ಯತೆಗಳಿಂದ ಕೂಡಿರುವ ಚಿಂಚೋಳಿ ಕ್ಷೇತ್ರದ ಚುನಾವಣೆ ಈ ಸಲ ಗಮನ ಸೆಳೆದಿದೆ.
ಎರಡು ಸಲ ಮುಖ್ಯಮಂತ್ರಿಯಾದ ಕ್ಷೇತ್ರ: ಕಲ್ಯಾಣ ಕರ್ನಾಟಕ ಭಾಗದ ಮೊದಲ ಸಿಎಂ ಅದರಲ್ಲೂ ಎರಡು ಸಲ ಮುಖ್ಯಮಂತ್ರಿಯಾದ ಕ್ಷೇತ್ರದ ಯಾವುದಾದರೂ ಇದ್ದರೆ ಅದುವೇ ಚಿಂಚೋಳಿ ಕ್ಷೇತ್ರ. ಚಿಂಚೋಳಿ ಕ್ಷೇತ್ರ ಪ್ರತಿನಿಧಿಸಿದ್ದ ವೀರೇಂದ್ರ ಪಾಟೀಲ 1968, 1989ರಲ್ಲಿ ಎರಡು ಸಲ ಮುಖ್ಯಮಂತ್ರಿಯಾಗಿದ್ದಾರೆ. ಚಿಂಚೋಳಿ ವಿಧಾನಸಭೆಯಿಂದ ಚುನಾಯಿತರಾದವರು ಸರಕಾರದಲ್ಲಿ ಮಂತ್ರಿಯಾಗಿಯೂ ಹೆಸರು ಮಾಡಿದ್ದಾರೆ. 1957ರಲ್ಲಿಯೇ ವೀರೇಂದ್ರ ಪಾಟೀಲ ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ. ವೀರೇಂದ್ರ ಪಾಟೀಲ್ ಒಟ್ಟು ನಾಲ್ಕು ಸಲ ಚಿಂಚೋಳಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಇದೇ ಕ್ಷೇತ್ರ ಪ್ರತಿನಿಧಿಸಿರುವ ದೇವೇಂದ್ರಪ್ಪ ಘಾಳೆಪ್ಪ, ವೈಜನಾಥ ಪಾಟೀಲ, ಸುನೀಲ ವಲ್ಲಾಪುರೆ ಮಂತ್ರಿಗಳಾಗಿ ದ್ದರಲ್ಲದೇ ರಾಜ್ಯಮಟ್ಟದ ವ್ಯಕ್ತಿಗಳಾಗಿ ಹೊರ ಹೊಮ್ಮಿದ್ದಾರೆ.
ಚಿಂಚೋಳಿ ಕ್ಷೇತ್ರದಲ್ಲಿ ವೀರೇಂದ್ರ ಪಾಟೀಲ ನಾಲ್ಕು ಸಲ, ದೇವಿಂದ್ರಪ್ಪ ಘಾಳೆಪ್ಪ, ವೈಜನಾಥ ಪಾಟೀಲ ತಲಾ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್, ಜನತಾದಳ, ಬಿಜೆಪಿ ಮೂರೂ ಪಕ್ಷಗ ಳಿಂದಲೂ ಶಾಸಕರಾಗಿ ಆಯ್ಕೆಯಾಗಿರುವುದು ಕ್ಷೇತ್ರದ ವೈಶಿಷ್ಟ್ಯ . ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದ ಹೆಚ್ಚು ನಿಷ್ಠೆ ಕಂಡರೂ ಇತ್ತೀಚಿನ ವರ್ಷಗಳಲ್ಲಿ ಬಿರುಕು ಕಂಡಿದೆ. ಕ್ಷೇತ್ರಕ್ಕೆ ಮುಖ್ಯಮಂತ್ರಿ ನೀಡಿದ ಹೆಮ್ಮೆಯಿದ್ದರೂ ಅಭಿವೃದ್ಧಿ ಯಲ್ಲಿ ಮಾತ್ರ ಕ್ಷೇತ್ರ ಸಂಪೂರ್ಣ ಹಿಂದುಳಿದಿದೆ. ಜನರು ಸಾಕ್ಷರತೆಯಿಂದ ದೂರವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಕಾಡಿನಲ್ಲಿಯೇ ವಾಸವಾಗಿದ್ದಾರೆ. ಈ ಕ್ಷೇತ್ರ 2008ರಿಂದ ಮೀಸಲು ಕ್ಷೇತ್ರವಾಗಿದೆ.
–
ಹಣಮಂತರಾವ ಭೈರಾಮಡಗಿ