Advertisement

UV Fusion: ಮರೆಯಲಾಗದ ಮಧುರ ದಿನಗಳು

03:55 PM Dec 05, 2024 | Team Udayavani |

ನಿತ್ಯ ಜೀವನದಲ್ಲಿ ಎದುರಾಗುವ ಅದೆಷ್ಟೋ ಮುಖಗಳಲ್ಲಿ ಕೆಲವು ಮನದಲ್ಲಿ ಉಳಿಯುತ್ತವೆ. ಇನ್ನು ಕೆಲವರದು ಕತ್ತಲಲ್ಲಿ ಕಂಡ ಮುಖಗಳಾಗಿ ಕತ್ತಲಲ್ಲಿಯೇ ಕರಗಿ ಹೋಗುತ್ತವೆ. ಆದರೆ ಇಲ್ಲಿ ನನ್ನನ್ನು ಮಾತಿಗೆಳೆದವರು ಆ ನಗುವನ್ನು ಮುಖದ ಮೇಲೆಯೇ ಧಾರಣೆ ಮಾಡಿಕೊಂಡ ಆತ “ಸರ್‌ ಅನ್ಯಥಾ ಭಾವಿಸಬೇಡಿ ನಿಮ್ಮ ತಲೆಯ ಕೂದಲುಗಳು ಬಲಾಡ್ಯ ಸೈನ್ಯದೆದುರು ದುರ್ಬಲ್ಯ ಸೈನ್ಯ ಧರೆಗೆ ಉರುಳುವಂತೆ ಉದುರುತ್ತಿವೆ ಸರ್‌! ಇನ್ನೇನು ಕೆಲವೇ ವರ್ಷಗಳಲ್ಲಿ ಬೊಕ್ಕತಲೆಯಾಗುವುದು ಖಚಿತ!’ ಸೊಂಪಾಗಿದ್ದ ತಲೆಯ ಕೂದಲನ್ನು ನೋಡಿ ಯಾವಾಗಲೂ ಮೆಚ್ಚುತ್ತಿದ್ದ ಆತ್ಮೀಯ ಸ್ನೇಹಜೀವಿ. ಈ ಬಾರಿ ಕ್ಷೌರಕ್ಕೆಂದು ಹೋದಾಗ ನುಡಿದ ಈ ಬಗೆಯ ನಿಲುವಿನ ತಗ್ಗಿದ ಮಾತುಗಳನ್ನು ಕೇಳಿ ಕ್ಷಣ ಕಾಲ ದಿಗಿಲು ಮೂಡಿಸಿ ಅಗೋಚರ ಪ್ರಪಂಚದಲ್ಲಿ ಕಳೆದು ಹೋದೆ. ಅಂತು ನಿಜಜಗತ್ತಿಗೆ ಬಂದು ಸುಧಾರಿಸಿಕೊಂಡು ಇದಕ್ಕೆಲ್ಲಾ ಏನು ಕಾರಣ ? ಎಂದು ಕೇಳಿದಾಗ ಅವರು ಕೊಟ್ಟ ಉತ್ತರಗಳು ನನ್ನ ಬಾಯಿಯನ್ನು ಕಟ್ಟಿ ಹಾಕಿದ್ದು ಮಾತ್ರವಲ್ಲದೆ ಮೆದುಳನ್ನು ಆಲೋಚನೆಯ ಕೋಟೆಯೋಳಗೆ ಸುತ್ತಾಡಿಸಲು ಎಳೆದುಕೊಂಡು ಹೋಯಿತು.

Advertisement

ಮೊದಲೆಲ್ಲ ವಾರಕ್ಕೊಮ್ಮೆಯಾದರೂ ಮೈತುಂಬಾ ಹರಳೆಣ್ಣೆ ಹಚ್ಚಿ, ಬಿಸಿಲಲ್ಲಿ ಮೈಯೊಡ್ಡಿ, ಸೌದೆ ಒಲೆಯಲ್ಲಿ ಕಾಯಿಸಿದ ಬಿಸಿನೀರಿನಿಂದ ಸೀಗೆಪುಡಿ, ಸುಜ್ಜಿಲಪುಡಿಯನ್ನು ಲೇಪಿಸಿಕೊಂಡು ಸ್ನಾನ ಮಾಡುತ್ತಿದ್ದರು. ಈಗೆÇÉಾ ಎಲ್ಲಿ ಸರ್‌ ಸೌದೆ ಒಲೆ? ಗೀಜರ್‌, ಸೋಲಾರ್‌ ನೀರು ಅಂತ ಬಳಸುತ್ತಾ ಇರ್ತಿರಾ. ಕೂದಲು ಹಾಳಾಗದ್ದೇ ಇರುತ್ತಾ? ಎಂದು ಆಡಿದ ಮಾತು ಚಿಂತನೆಯ ಒರೆಗೆ ಹಚ್ಚಿತು. ಯಂತ್ರ, ನಾಗರೀಕತೆಯಲ್ಲಿ ಮನುಷ್ಯತ್ವವನ್ನು ಮಾರಾಟಮಾಡಿ ಬೇಕಾದದ್ದು ಬೇಡದ್ದು ರೂಢಿಸಿಕೊಂಡು, ಮಾನವೀಯತೆಯ ಕುಸುಮವನ್ನು ಮುರುಟಿ ಒಸಕಿ ಹಾಕಿತ್ತಿರುವುದು ಒಂದು ಬಗೆಯಾದರೆ ಇನ್ನೊಂದೆಡೆ ದೇಹ ಸೌಂದರ್ಯದ ಮೋಹ. ಮಾರುಕಟ್ಟೆಯಲ್ಲಿ ಉತ್ಪನ್ನ ವಸ್ತುಗಳ ಬಗ್ಗೆ ಈ ನೆಲದ ಪರಂಪರೆಯ ದನಿಯನ್ನು ಆಲಿಸದೆ, ಸಮಾಜದ ಒಳಿತನ್ನು ಬಯಸುವ ಜಾಹೀರಾತು ರಾಯಭಾರಿಗಳು ಜನರನ್ನು ಅಡ್ಡದಾರಿಗೆ ಎಳೆಯುತ್ತಿರುವುದು ಮೈನವೀರೇಳಿಸುವಂತೆ ಮಾಡಿದೆ.

ಆಧುನಿಕತೆಯ ಸೋಗಿನಲ್ಲಿ ನಮ್ಮನ್ನೇ ನಾವು ಮರೆತು ಕನಿಷ್ಠ ನಮ್ಮಂತೆ ಇತರರು ಎಂಬ ಸೌಜನ್ಯವನ್ನು ಬಿಟ್ಟು ಜಿದ್ದಿಗೆ ಬಿದ್ದವರಂತೆ ಓಡುತ್ತಿದ್ದೇವೆ. ಒಂದು ಕ್ಷಣ ಆಲೋಚಿಸಿ ನೋಡಿ ಬೇವಿನ ಕಡ್ಡಿಯಲ್ಲಿ ಹಲ್ಲನ್ನು ತಿಕ್ಕಿ ಸ್ವತ್ಛಗೊಳಿಸುತ್ತಿದ್ದ ಕಾಲದಲ್ಲಿ ಯಾವುದೇ ಹಲ್ಲುಗಳು ಹಾಳಾಗಿರಲಿಲ್ಲ, ಹಲ್ಲುಹುಳುಕು ಬರುತ್ತಿರಲಿಲ್ಲ. ಆದರೆ ಇಂದು ಯಾವುದೇ ಪೇಸ್ಟ್‌ ಬಳಸಿದರೂ ಪ್ರಯೋಜನವಿಲ್ಲ. ಸೀಗೆಪುಡಿ, ಸುಜ್ಜಲಪುಡಿಗಳನ್ನು ಬಳಸಿ ಸ್ನಾನ ಮಾಡುವಾಗ, ಮೈ ಕೈಗಳಿಗೆ ಎಣ್ಣೆ ತಿಕ್ಕಿ ಸ್ನಾನ ಮಾಡುವಾಗ ಸೊಂಪಾಗಿರುತ್ತಿದ್ದ ತಲೆಗೂದಲನ್ನು ಇಂದು ಜಾಹೀರಾತುಗಳ ಕೃಪೆಯಿಂದ ಬೇಕಾದದ್ದು, ಬೇಡವಾದುದ್ದನ್ನೆಲ್ಲ ಬಳಸಿ ತಲೆಕೂದಲಿನೊಂದಿಗೆ ತಲೆಯನ್ನು ಕೆಡಿಸಿಕೊಳ್ಳುತ್ತಿದ್ದೇವೆ.

ಅಂದು ಅವಿಭಕ್ತ ಕುಟುಂಬಗಳಲ್ಲಿ ಬೆಳೆಯುತ್ತಿದ್ದಾಗ ಇದ್ದ ನೆಮ್ಮದಿ, ಸಂತೋಷ, ಏನಾದರೂ ಸಮಸ್ಯೆ ಬಂದಾಗ ನೀಡುತ್ತಿದ್ದ ಸ್ವಾಂತನದ ನುಡಿಗಳನ್ನು ಕಳೆದುಕೊಂಡು ಇಂದು ವಿಭಕ್ತ ಕುಟುಂಬಗಳಾಗಿ ಬೇರ್ಪಟ್ಟು ಸಣ್ಣ ಪುಟ್ಟ ಸಮಸ್ಯೆಗಳು ಎದುರಾದರೂ ಸಾಕು ಖನ್ನತೆಗೆ ಒಳಗಾಗಿ, ಮನಶಾಸ್ತಜ್ಞರ ಬಳಿಗೆ ಸಾಗುವಷ್ಟರ ಮಟ್ಟಿಗೆ ಬಂದು ನಿಂತಿದ್ದೇವೆ.

ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಬಸ್ಸಿನಲ್ಲಿ ಸಂಚರಿಸುವಾಗ ಪಕ್ಕ ಕುಳಿತವರನ್ನು ಮಾತನಾಡಿಸಿ ಪರಸ್ಪರ ಸ್ನೇಹ ಸಂಪಾದಿಸುತ್ತಿದ್ದ ಸುಮಧುರ ಕ್ಷಣಗಳನ್ನು ಮರೆತು ಬಾಳುತ್ತಿದ್ದೇವೆ. ಮಾನವೀಯ ಮೌಲ್ಯಗಳನ್ನೇ ಮರೆತು ಜೀವಂತ ಯಂತ್ರಗಳಾಗಿ ಬದುಕು ನಡೆಸುತ್ತಿದ್ದೇವೆ. ಎತ್ತ ಹೋದವು-ಎಲ್ಲಿ ಮರೆಯಾಗಿ ಹೋದವು ಆ ಮಧುರ ದಿನಗಳು.

Advertisement

ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿರುವಾಗ ಮಧುರವಾದ ತಣ್ಣನೆಯ ನೆನಪಿನ ಗಾಳಿಯೊಮ್ಮೆ ಬೀಸಿ ಮೈಮನಗಳನ್ನು ರೋಮಾಂಚನಗೊಳಿಸಿ ಗತಕಾಲದ ಕಡೆಗೆ ಸೆಳೆದುಕೊಂಡು ಹೋಯಿತು. ಸಿನೆಮಾಗಳಲ್ಲಿ ತೋರಿಸುವಂತೆ ಸಮಯದ ಯಂತ್ರ (ಟೈಮ್‌ ಮಿಷನ್‌) ಎಂಬುದು ಇರುವುದು ನಿಜವೇ ಆದರೆ ಅದರಲ್ಲೊಮ್ಮೆ ಕುಳಿತು ಕಳೆದು ಹೋದ ನೆನಪುಗಳನ್ನು ಹುಡುಕಿ ಬರಬೇಕೆಂಬ ಆಸೆ ದಟ್ಟವಾಗಿದೆ.

ಜೀವನದಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬರಿಗೂ ಮೊದಲಿನಂತೆ ಬದುಕಬೇಕೆಂಬ ಆಸೆ ಖಂಡಿತವಾಗಿಯೂ ಬರುತ್ತದೆ. ವಾಸ್ತವವಾಗಿ ಅದು ಸಾಧ್ಯವಿಲ್ಲವಾದರೂ ಎಂದೂ ಮರೆಯಲಾಗದೆ ನೆನಪಿನ ಬುತ್ತಿಯಲ್ಲಿ ಶಾಶ್ವತವಾಗಿ ನೆಲೆಯೂರಿ ನಿಂತಿರುತ್ತದೆ. ಬಾಲ್ಯದ ಜೀವನ, ಅಳು, ನಗು, ಆಟ-ಹೊಡೆದಾಟ, ತಿಂದ ತಿನಿಸುಗಳು, ಮಾಡಿಕೊಂಡ ಗಾಯ ಎಲ್ಲವೂ ಈಗ ನೆನಪಿಸಿಕೊಂಡರೆ ಕಣ್ಮುಂದೆ ಮಾಯಾಚಿತ್ರಗಳಂತೆ ಬಂದು ನಿಲ್ಲುವುದು.

ನಿಶ್ಚಿಂತೆಯಿಂದ ಕಾಲು ಚಾಚಿ ಮಲಗಲು ಸಾಧ್ಯವಾಗದಂತಿದ್ದ ಬಾಡಿಗೆ ಮನೆಯಲ್ಲಿ ಹತ್ತು ವರ್ಷಗಳು ವಾಸವಿದ್ದಾಗಲೂ ಸಂಭ್ರಮಕ್ಕೆ, ಸಂತೋಷಕ್ಕೆ ಏನು ಕಡಿಮೆ ಇರಲಿಲ್ಲ. ಬಡತನವಿದ್ದರೂ ಅದರಲ್ಲೂ ನೆಮ್ಮದಿಯಿತ್ತು. ಅಲ್ಲಿ ಕಳೆದ ದಿನಗಳನ್ನು ಪ್ರಸ್ತುತ ಲಕ್ಷ, ಲಕ್ಷ ಕೊಟ್ಟು ಭೋಗ್ಯಕ್ಕೆ ಮನೆ ಕಟ್ಟಿಸಿದ್ದರೂ ಮನೆ ದೊಡ್ಡದಾಗಿ ಗೋಚರಿಸುತ್ತಿದೆ ವಿನಃ ಸಂಬಂಧಗಳಲ್ಲಿದ್ದ ಪ್ರೀತಿ, ವಿಶ್ವಾಸ ಮನೆಯಷ್ಟೇ ವಿಶಾಲವಾಗಿ ದೂರ ದೂರ ಸಾಗುತ್ತಿದೆ.

ಹಬ್ಬದ ದಿನಗಳಲ್ಲಿ ಹೊಸಬಟ್ಟೆಯನ್ನು ಧರಿಸಿಕೊಂಡು ದೊಡ್ಡವರ ಕಾಲಿಗೆ ಅಡ್ಡಬಿದ್ದು ಆಶೀರ್ವಾದ ಪಡೆದು ಅವರು ಕೊಡುತ್ತಿದ್ದ ರೂಪಾಯಿಗಳನ್ನು ಸಂಗ್ರಹಿಸಿಟ್ಟುಕೊಂಡು ಪಡುತ್ತಿದ್ದ ಸಂಭ್ರಮ ಇಂದು ಸಾವಿರಗಟ್ಟಲೇ ಮನೆಯ ಯಜಮಾನ, ಮಡದಿ ಇಬ್ಬರೂ ಒಟ್ಟಿಗೆ ದುಡಿದರೂ ಆಗಿನ ಸಂತೃಪ್ತಿ ಈಗ ಸಿಗದಿರುವುದು ವಿಪರ್ಯಾಸವೇ ಸರಿ. ತುಂಬಿದ ಮನೆಯೊಳಗೆ, ಮನೆ ಮಂದಿಯೆಲ್ಲ ಒಟ್ಟಿಗೆ ಸೇರಿ ಹಬ್ಬ ಮಾಡಿ ಕಳೆಯುತ್ತಿದ್ದ ಕ್ಷಣಗಳು ಸಂಬಂಧಿಕರ ಮದುವೆ ಸಂದರ್ಭಗಳಲ್ಲಿ ಸಿಗುತ್ತಿದ್ದ ಸಂಭ್ರಮ, ಸಡಗರ ಇಂದಿನ ದಿನಗಳಲ್ಲಿ ಜಂಗಮವಾಣಿಯ ರಾಕ್ಷಸನ ಕೃಪೆಯಿಂದ ಸಿಗುತ್ತಿಲ್ಲ.

ಹೊಸ ವರ್ಷ, ಹಬ್ಬ, ಹುಟ್ಟಹಬ್ಬಗಳಿಗೆ ಗೆಳೆಯ, ಗೆಳತಿಯರಿಗೆ ಬಂಧು ಬಳಗದವರಿಗೆ ಕಾಗದ ಬರೆಯುವಾಗ ಸಿಗುತ್ತಿದ್ದ ಆನಂದ ಪ್ರಸ್ತುತ ಜನಾಂಗದವರು ಎಷ್ಟೇ ಹಣ ವ್ಯಯಿಸಿದರೂ ಸಿಗಲಾರದು.

ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗಬಹುದು. ಅಭಿವೃದ್ಧಿ ಎಂಬುದು ಖಂಡಿತವಾಗಿಯು ಬೇಕು ನಿಜ ಆದರೆ ಅದರ ಹೆಸರಿನಲ್ಲಿ ನಮ್ಮತನವನ್ನು ಹಾಗೂ ನೆಮ್ಮದಿಯನ್ನು ಕಳೆದುಕೊಂಡು ಬಾಳ ಹೊರಟಿರುವುದು ಎಷ್ಟರಮಟ್ಟಿಗೆ ಸರಿ? ಯಾರನ್ನೂ ಹೀಯಾಳಿಸುವ ಅಥವಾ ಅಭಿವೃದ್ಧಿಯಾಗುವುದೇ ಬೇಡ ಎಂಬುದು ನನ್ನ ಉದ್ದೇಶವಲ್ಲ. ಬದಲಾವಣೆ ಬೇಕು ನಿಜ, ಅಭಿವೃದ್ಧಿ ಪ್ರಗತಿಯ ಸಂಕೇತ ಅದು ಕೂಡ ನಿಜ, ಆದರೆ ಅದು ನಮ್ಮನ್ನೇ ನಾವು ಮರೆಯುವಷ್ಟರ ಮಟ್ಟಿಗೆ ನಮ್ಮತನವನ್ನೇ ಕಳೆದುಕೊಂಡು ಬಾಳುವಷ್ಟರ ಮಟ್ಟಿಗೆ ತಲುಪುವುದು ಸರಿಯಲ್ಲ ಎಂಬುದು ನನ್ನ ಕಳಕಳಿ.

ಪ್ರೊ| ಕೃಷ್ಣೇಗೌಡರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ ಮಾತೊಂದು ಇಲ್ಲಿ ಉಲ್ಲೇಖಾರ್ಹ “ಮನುಷ್ಯ ಮಣ್ಣನ್ನು ಅಗೆದು ಬದುಕುತ್ತಿದ್ದಾಗ ಚೆನ್ನಾಗಿಯೇ ಇದ್ದ, ಸಂಬಂಧಗಳು, ಮಾನವೀಯ ಮೌಲ್ಯಗಳು ಎಲ್ಲವೂ ಮಣ್ಣಿನಷ್ಟೇ ಪವಿತ್ರವಾಗಿರುತ್ತಿದ್ದವು. ಮನುಷ್ಯ ಯಾವಾಗ ಚಿನ್ನವನ್ನು ಅಗೆದು ಬದುಕುವುದಕ್ಕೆ ಆರಂಭ ಮಾಡಿದನೋ ಆ ದಿನದಿಂದ ಎಲ್ಲ ಸಂಬಂಧಗಳನ್ನು ಲೆಕ್ಕಾಚಾರದಿಂದಲೇ, ವ್ಯಾವಹಾರಿಕ ದೃಷ್ಟಿಕೋನದಿಂದಲೇ ನೋಡುತ್ತಿದ್ದಾನೆ’. ಎಷ್ಟು ನಿಜ ಅಲ್ವ?

ಎಲ್ಲಿಯವರೆಗೆ ನಾವು ನಮ್ಮತನವನ್ನು ಕಳೆದುಕೊಳ್ಳದೇ ಬದುಕುತ್ತೇವೆಯೋ ಅಲ್ಲಿಯವರೆಗೂ ಮನುಷ್ಯತ್ವ ನಮ್ಮಲ್ಲಿ ಹಾಸುಹೊಕ್ಕಾಗಿರುತ್ತದೆ. ನಮ್ಮತನವ ಕಳೆದುಕೊಂಡು ಬಾಳುವುದಕ್ಕೆ ಆರಂಭಿಸಿದಾಗ ಮಾನವೀಯ ಮೌಲ್ಯಗಳು ಕೂಡ ಮರೆಯಾಗುತ್ತದೆ. ಹೀಗಾಗಬಾರದೆಂದರೆ ನಮ್ಮತನವ ಮರೆಯದೇ ಸದಾ ಕಾಲದಲ್ಲಿಯೂ ಮನುಷ್ಯರಂತೆ ಬಾಳಿ ಮಾನವೀಯತೆಯನ್ನು ಬೆಳೆಸಿ, ಉಳಿಸಿ, ಮುಂದಿನ ಜನಾಂಗದವರಲ್ಲಿಯೂ ಅದು ಉಳಿಯುವಂತೆ ಮಾಡಬೇಕು.

 ರಾಘವೇಂದ್ರ ಸಿ. ಎಸ್‌.

ಯಾದವಗಿರಿ, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next