ವಿದ್ಯಾರ್ಥಿ ಬದುಕು ನಮ್ಮ ಜೀವನದ ಮೈಲುಗಲ್ಲು, ಸಾಧಿಸುವ ಮನಸ್ಸು ಜತೆಗೆ ಆತ್ಮವಿಶ್ವಾಸ ಇವೆರಡು ಜತೆಗೂಡಿಸಿಕೊಂಡರೆ ಯಶಸ್ಸಿನ ಗುರಿ ತಲುಪಲು ಸಾಧ್ಯವಾಗುತ್ತದೆ. ಅಬ್ದುಲ್ ಕಲಾಂ ಅವರ ಒಂದು ಮಾತಿದೆ, ಸಾಧಿಸೆ ಸಾಧಿಸುತ್ತೇನೆ ಎಂಬ ಕಿಚ್ಚಿನ ಮನಸ್ಸಿನ ಮುಂದೆ ಯಾವುದೇ ಅಡೆ ತಡೆ ನಿಲ್ಲಲಾರದು,ಅಡೆ ತಡೆಗಳನ್ನೇ ಮೆಟ್ಟಿಲಾಗಿಸಿಕೊಂಡು ಶಿಖರ ತುದಿಯನ್ನು ಮುಟ್ಟುವುದು ಜಾಣ್ಮೆ”.
ನಾವು ಕೆಲವು ಕ್ಷುಲ್ಲಕ ಕಾರಣಗಳಿಂದ ಜೀವನದ ಅಂತ್ಯದ ಯೋಚನೆ ಮಾಡುತ್ತೇವೆ. ಆದರೆ, ಶಿಕ್ಷಣ ಒಂದೇ ಜೀವನವಲ್ಲ. ನಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರ ಕಲಿಕೆಯಲ್ಲಿಯೂ ಸಾಧನೆ ಮಾಡಬಹುದು ಎಂಬ ವಿಷಯದ ಬಗ್ಗೆ ಅರಿವಿರಬೇಕು, ನಾವು ಕಲಿಕೆಗೆ ಕೊಡುವ ಸಮಯಕ್ಕಿಂತ ಬೇರೆಯ ಮನೋರಂಜನ ಮೂಲಗಳಲ್ಲಿ ಕಾಲ ಕಳೆಯುತ್ತ,ಅದೆಷ್ಟೋ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತ, ಸಮಯ ಕಳೆದ ಮೇಲೆ ಯೋಚಿಸುತ್ತೇವೆ.ಅದಕ್ಕಾಗಿ ಸರಿಯಾದ ಯೋಚನೆಯೊಂದಿಗೆ ದಿನದ ಸಮಯವನ್ನು ಪರಿ ಪಾಲಿಸುವುದು ಉತ್ತಮ.
ದೃಢ ನಿರ್ಧಾರದ ವಿದ್ಯಾರ್ಥಿ ಬದುಕಲ್ಲಿ ಕನಸೂ ಕೂಡ ಒಂದು ಸ್ಥಾನವನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ನೀವು ನಿದ್ರೆ ಮಾಡುವಾಗ ಕಾಣುವುದು ಕನಸಲ್ಲ, ಯಾವ ಕನಸು ನಿಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು ಎಂದು ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸುಂದರವಾಗಿ ನಮ್ಮನ್ನು ಎಚ್ಚರಿಸಿದ್ದಾರೆ. ಕನಸು ಕಾಣುವುದು ಮುಖ್ಯವಲ್ಲ ಆ ಕನಸನ್ನು ನನಸಿನತ್ತ ಕೊಂಡೊಯ್ಯುವುದೇ ಒಂದು ಅವಿಭಾಜ್ಯ ಅಂಗ.
ಎಷ್ಟೇ ಅಡೆತಡೆಗಳು ಬಂದರೂ ವಸಂತ ಕಾಲದಂತೆ ಚಿಗುರೊಡೆಯುತ್ತಿರುವುದೇ ವಿದ್ಯಾರ್ಥಿ ಜೀವನ.ನಸುನಗುವ ಚೆಲ್ಲುತ್ತ , ಗುರುಹಿರಿಯರಿಗೆ ಗೌರವ ನೀಡುತ್ತ, ಸಂಸ್ಕೃತಿಯ ಜೊತೆ ಜೊತೆಗೆ ಸಾಧನೆಯ ಹಾದಿಯಲಿ ಮುನ್ನಡೆದರೆ ಯಶಸ್ಸು ಬಿಗಿದಪ್ಪಿಕೊಳ್ಳುವುದು. ಅದರೊಂದಿಗೆ,ಸಾಧಿಸುವ ಛಲ ಒಂದಿದ್ದರೆ ಸಾಕು ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ.
ಅರುಣಿಮಾ ಸಿನ್ಹಾ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ.
2011 ರಲ್ಲಿ ಕೆಲವು ದರೋಡೆಕೋರರು ಅವರನ್ನು ಚಾಲನೆಯಲ್ಲಿರುವ ರೈಲಿನಿಂದ ತಳ್ಳಿದ ಸಂದರ್ಭ ಅವರ ಎಡಗಾಲನ್ನು ಮೊಣಕಾಲಿನ ಕೆಳಗೆ ಕತ್ತರಿಸಬೇಕಾಯಿತು. ಆದರೆ ದೃಢ ನಿರ್ಧಾರ, ಆತ್ಮ ವಿಶ್ವಾಸ ಅವರನ್ನು ಸಾಧನೆಯೆಡೆಗೆ ಕರೆದೊಯ್ಯಿತು. ಹಾಗೆಯೇ ಸಾಧಿಸುವ ಮನಸ್ಸಿನ ಜೊತೆಗೆ ಆತ್ಮವಿಶ್ವಾಸವನ್ನು ಜೊತೆಗೂಡಿಸಿಕೊಂಡರೆ ಅದೆಷ್ಟೋ ಅಡೆ ತಡೆಗಳು ಎದುರಾದರೂ ಎದುರಿಸಬಹುದು.
ರಕ್ಷಿತಾ ಚಪ್ಪರಿಕೆ
ಮೂಡುಬಿದಿರೆ