Advertisement
ವಸಂತಮಾಸದ ಆಗಮನವೇ ಯುಗಾದಿ ಹಬ್ಬ. ಋತುಗಳ ರಾಜ ವಸಂತ ಕಾಲಿಟ್ಟನೆಂದರೆ, ಶಿಶಿರ ಋತು ವಿನಲ್ಲಿ ನಿಸ್ತೇಜವಾಗಿದ್ದ ಮರ – ಗಿಡಗಳು ಎಲೆಗಳನ್ನೆಲ್ಲ ಕಳಚಿಕೊಂಡು ಮತ್ತೆ ಚಿಗುರೊಡೆದು ಮರು ಜೀವ ಪಡೆಯುವ ನವೋಲ್ಲಾಸ ನೀಡುವ ಸಮಯವಿದು. ಪ್ರಕೃತಿಯಲ್ಲಿನ ಚಿಗುರಿನ ಮೋಹಕತೆಯ ಸುಂದರವಾದ ಗಳಿಗೆ.
Related Articles
Advertisement
ನಮ್ಮ ದೇಶ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ. ಕೌಟುಂಬಿಕ / ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಹಬ್ಬಗಳು ಮಹತ್ವದ ಪಾತ್ರವಹಿಸುವುದರಿಂದ ಭಾರತೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಹಬ್ಬಗಳಿಗೆ ಪ್ರಾಧಾನ್ಯತೆಯಿದೆ. ಹಬ್ಬಗಳೆಂದರೆ ಸಡಗರದ ಜತೆಗೆ ಧಾರ್ಮಿಕ ಹಾಗೂ ಸಾಮಾಜಿಕ ವಾಗಿ ಮನಗಳನ್ನು ಜತೆಗೂಡಿಸುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಇತಿಹಾಸಿಕ, ಪೌರಾಣಿಕ, ವೈಜ್ಞಾನಿಕ ಮಹತ್ವಗಳಿವೆ. ಆದರೆ ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ಹಬ್ಬಗಳು ಮಹತ್ವ ಕಳೆದುಹೋಗುತ್ತಿವೆ ಎಂಬುದು ಎಲ್ಲರ ಕೊರಗು. ಆಧುನಿಕತೆಯ ವ್ಯಾಮೋಹಕ್ಕೆ ಬಲಿಯಾಗಿರುವ ಇಂದಿನ ಜನಾಂಗಕ್ಕೆ ಮನೆಗಳಲ್ಲಿ ಹಬ್ಬ ಆಚರಣೆಗಳೆಂದರೆ ಒಂಥರಾ ನಿರ್ಲಕ್ಷ್ಯಭಾವ.
ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ಹಬ್ಬಗಳ ಆಚರಣೆಯೇ ಕಣ್ಮರೆಯಾಗುತ್ತಿರುವುದು ವಿಪರ್ಯಾಸ. ಹಬ್ಬಗಳು ನಾಗರಿಕತೆಯೊಂದರ ಹಿರಿಮೆಯ ಧ್ಯೋತಕ. ಒಂದು ಸಮುದಾಯದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿಹಿಡಿಯುವ ಕಂಬಗಳಿದ್ದಂತೆ.
ನಶಿಸಿ ಹೋಗುತ್ತಿರುವ ನಮ್ಮ ಹಬ್ಬಗಳ ಉಳಿವಿಕೆಗಾಗಿ ಪರಂಪರಾಗತವಾಗಿ ಆಚರಣೆಗೆ ಒಳಪಟ್ಟ ಹಬ್ಬ ಹರಿದಿನಗಳನ್ನು ಹಿರಿಯರು ಆಚರಿಸುತ್ತಾ ಹಬ್ಬಗಳ ಮಹತ್ವ ಮತ್ತು ಔಚಿತ್ಯತೆಯನ್ನು, ಅವುಗಳ ಆಚರಣೆಯ ಹಿಂದಿನ ಗೂಢಾರ್ಥ, ವೈಜ್ಞಾನಿಕ ಅಂಶಗಳನ್ನು ತಮ್ಮ ಮಕ್ಕಳಿಗೂ ಮನವರಿಕೆ ಮಾಡಿ, ಅದು ಮುಂದಿನ ಪೀಳಿಗೆಯವರೆಗೆ ಮುಂದುವರಿಯುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.
ಮಾನವರನ್ನು ಆತ್ಮ ಸಾಕ್ಷಾತ್ಕಾರದ ಮೂಲಕ ದೈವತ್ವದೆಡೆಗೆ ಕರೆದೊಯ್ಯುವುದು ಎಲ್ಲ ಹಬ್ಬಗಳ ಉದ್ದೇಶವಾಗಿದೆ. ನಾವು ಆಚರಿಸುವ ಹಬ್ಬಗಳು ಯಾವುದೇ ಆಗಿರಲಿ ಅವುಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸೋಣ. “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷದ ಹೊಸತು ಹೊಸತು ತರುತಿದೆ’ ಎಂದು ಹೇಳುತ್ತಾ ನಾವೆಲ್ಲರೂ ಯುಗಾದಿಯ ನಿಜ ಅರ್ಥ ತಿಳಿದು ಹಬ್ಬವನ್ನು ಆಚರಿಸೋಣ. ಯುಗಾದಿ ಮರಳಿ ಬರಲಿ, ಎಲ್ಲರಿಗೂ ಸುಖ ಶಾಂತಿ ಸಮೃದ್ಧಿಯನ್ನು ತರಲಿ.
-ಪ್ರಕಾಶ ತದಡಿಕರ
ನವಿಮುಂಬಯಿ