Advertisement

UV Fusion: ಮಳೆಗೆ ಕಳೆ ಕಟ್ಟಿದ ಇಳೆ

04:00 PM Aug 06, 2023 | Team Udayavani |

ಅದು ಆಗ ತಾನೇ ಸುಡುವ ಧರೆ ತಂಪಾದ ಸಮಯ. ಮೇಘಗಳು ಕಣ್ಣಾ ಮುಚ್ಚಾಲೆಯಾಡುತ್ತಾ ಉರಿಯುವ ಭೂರಮೆಗೆ ಆಗಾಗ ತುಂತುರಿನ ಸ್ಪರ್ಶ ಮಾಡಿಸುತ್ತಿದ್ದವು. ಮಯೂರ ಸಂತಸದಿಂದ ಗರಿ ಬಿಚ್ಚಿ ಕುಣಿಯಲಾರಂಭಿಸಿದ. ಮಳೆಯ ಒಂದೊಂದೇ ಹನಿಗಳು ಹಸುರಿನ ಮೈಯ ಮೇಲಿನಿಂದ ಜಾರುತ್ತಾ ಪೃಥ್ವಿಯನ್ನು ಚುಂಬಿಸುತ್ತಿದ್ದವು. ಸುಮದ ಮೇಲೆ ಬಿದ್ದ ಮಳೆಹನಿ ಮುತ್ತಿನಂತೆ ಕಾಣುತ್ತಿದ್ದವು. ಮಳೆಗಾಲದ ಅತಿಥಿಗಳಾದ ಗಂಗೆ, ಮಂಡೂಕ, ಮತ್ಸ್ಯಗಳು ಸಂತೋಷದಿಂದ ನಲಿದಾಡುತ್ತಿದ್ದವು. ಒಣಗಿಹೋಗಿದ್ದ ಭುವಿಗೆ ಮಳೆ ನೀರು ಬಿದ್ದಾಗ ಬರುವ ಆ ಘಮವನ್ನು ನಾಸಿಕವು ಸವಿಯುತ್ತಿತ್ತು.

Advertisement

ತೊಟ್ಟು ನೀರಿಗಾಗಿ ಪರದಾಡುತ್ತಿದ್ದ ಹಕ್ಕಿಗಳು ಮರದ ರೆಂಬೆ ಕೊಂಬೆಗಳಲ್ಲಿ ಕುಳಿತು ಮಳೆಯನ್ನು ಆನಂದಿಸಿತು.ಬತ್ತಿಹೋಗಿದ್ದ ಹಳ್ಳ, ಝರಿ, ತೊರೆಗಳು ಮತ್ತೆ ಉಕ್ಕಿ ಹರಿಯಲು ಪ್ರಾರಂಭಿಸಿತು. ಕಪ್ಪೆರಾಯನ ಕೂಗಿಗೆ ಅಬ್ಬಾ.. ಮಳೆಗಾಲ ಪ್ರಾರಂಭವಾಯ್ತು ಎಂಬ ಮಾತು ಜನರ ಬಾಯಿಯಿಂದ ಬರುತ್ತಿತ್ತು.ತಂಪು ಪಾನೀಯಗಳನ್ನೇ ಹುಡುಕುತ್ತಿದ್ದ ಕೈಗಳು ಬಿಸಿ ಬಿಸಿ ಆಹಾರವನ್ನು ಹುಡುಕಲಾರಂಭಿಸಿದವು. ಬೇಸಗೆಯಲ್ಲಿ ಅಮ್ಮ ಒಣಗಿಸಿಟ್ಟ ಹಲಸಿನ ಹಪ್ಪಳ ಮೊದಲ ಮಳೆಗೆ ಎಣ್ಣೆಯೊಳಗೆ ಬೀಳುತ್ತಿದ್ದವು. ಒಣ ಮರಗಳು ಮತ್ತೆ ಚಿಗುರಿ ಹಸುರಾದವು. ಹೌದು ಅದು ಮಳೆಗಾಲದ ಆರಂಭ. ಸೂರ್ಯನ ಶಾಖಕ್ಕೆ ಬೇಸತ್ತು ವರುಣನ ಆಗಮಕ್ಕೆ ಕಾಯುತ್ತಿದ್ದ ಕ್ಷಣ. ಕೊನೆಗೂ ಆ ಮಳೆಗಾಲದ ದಿನಗಳು ಬಂದೇ ಬಿಟ್ಟವು. ಅದೇನೋ ಗೊತ್ತಿಲ್ಲ ಮಳೆಗಾಲ ಕಷ್ಟವೆನಿಸಿದರೂ ಬಹಳ ಇಷ್ಟ. ಏಕೆಂದರೆ ಮಳೆಗಾಲಕ್ಕೆಂದು ಅಮ್ಮ ಮೊದಲೇ ಎಲ್ಲ ತಯಾರಿ ಮಾಡಿಡುತ್ತಿದ್ದಳು.

ಈ ಬಾರಿಯ ಮಳೆಯಂತೂ ಏನೋ ಹೊಸತನವನ್ನು ತಂದು ಕೊಟ್ಟಿತ್ತು. ಒಂದೆರಡು ಸಲ ಮಳೆ ಬೀಳುತ್ತಿದ್ದಂತೆಯೇ ಎಲ್ಲರ ಇನ್ಸ್‌ ಸ್ಟಾ ಗ್ರಾಂ ಸ್ಟೋರಿ, ವಾಟ್ಸ್‌ ಆ್ಯಪ್‌ ಸ್ಟೇಟಸ್‌ ನಲ್ಲೂ ಮಳೆ ಬರುತ್ತಿತ್ತು. ಅಷ್ಟೇ ಅಲ್ಲದೆ ಝರಿ ತೊರೆಗಳು ಹರಿದು, ಹಸುರು ಮರುಕಳಿಸಿದ್ದರಿಂದ ಫಾಲ್ಸ್ ಹಾಗೂ ಟ್ರೆಕಿಂಗ್‌ಗೆ ಹೋಗುವವರ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು. ಕೆಲವರು ಮಳೆಯಲ್ಲಿ ನೆನೆಯುತ್ತಿದ್ದರು. ಹೀಗೆ ಎಲ್ಲರು ಒಂದಲ್ಲಾ ಒಂದು ರೀತಿಯಲ್ಲಿ ಮಳೆಗಾಲವನ್ನು ಆನಂದಿಸುವವರೇ ಹೆಚ್ಚಾಗಿದ್ದರು. ನನಗೂ ಮಳೆಯಲ್ಲಿ ನೆನೆಯುವ ಹುಚ್ಚು ಸ್ವಲ್ಪ ಜಾಸ್ತಿನೇ. ಆದರೆ ಅಂಗಳಕ್ಕೆ ಕಾಲಿಡುವಾಗ ಅಮ್ಮನ ಮಂಗಳಾರತಿಯ ನೆನಪಾಗಿ ಸುಮ್ಮನಾಗುತ್ತಿದ್ದೆ.ಆದರೂ ಅವಳಿಗೆ ತಿಳಿಯದಂತೆ ಒದ್ದೆಯಾದ ದಿನಗಳೂ ಇವೆ.

ಈ ಮಳೆಗೆ ಕಾಲೇಜಿಗೆ ರಜೆ ಇದ್ದುದರಿಂದ ಎಲ್ಲಾ ದರೂ ಟ್ರೆಕಿಂಗ್‌ ಹೋಗಬಹುದಿತ್ತು ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.ಇದೆಲ್ಲಾ ಸಾಧ್ಯವಿಲ್ಲ ಎಂದು ಮನಸ್ಸು ಅಡ್ಡಗಾಲು ಹಾಕುತ್ತಿತ್ತು. ಅಮ್ಮ ನ ಬಳಿ ಕೇಳಿದಾಗ ಈ ಮಳೆಗೆ ಮನೆಯಲ್ಲಿ ಸುಮ್ಮನೆ ಮನೆಯಲ್ಲಿ ಕುಳಿತುಕೋ,ಮೊದಲ ಮಳೆ ಟ್ರೆಕಿಂಗ್‌ ಹೋಗಿ ಶೀತ ಜ್ವರ ಬಂದರೆ ಮತ್ತೆ ನನ್ನಲ್ಲಿ ಹೇಳಬೇಡ ಎಂದಳು. ಸಂಜೆ ಜೋರಾಗಿ ಮಳೆ ಬರುತ್ತಿತ್ತು. ಅಕ್ಕ ಮಾತನಾಡಲೆಂದು ಕರೆ ಮಾಡಿದಳು.ಮೆಲ್ಲಗೆ ಅವಳ ಕಿವಿಯಲ್ಲಿ ನನ್ನ ಆಸೆಯ ಬೀಜವನ್ನು ಬಿಟ್ಟಿದೆ. ಅವಳಿಗೂ ನನ್ನ ಹಾಗೇ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಇಷ್ಟವಿದ್ದರಿಂದ ಸರಿ ನೋಡೋಣಎಂಬ ಭರವಸೆಯನ್ನು ಕೊಟ್ಟಳು. ನಾನು ಇದ್ದ ದೇವರಿಗೆಲ್ಲಾ ಪ್ರಾರ್ಥಿಸಿದೆ. ನನ್ನ ಪ್ರಾರ್ಥನೆ ಭಗವಂತನಿಗೆ ಕೇಳಿಸಿತೋ ಏನೋ ಗೊತ್ತಿಲ್ಲ, ಮರುದಿನ ಕರೆ ಮಾಡಿ ಯಾವಾಗ ಹೋಗೋಣ ಎಂದು ಕೇಳಿಯೇ ಬಿಟ್ಟಳು.ಇನ್ಯಾಕೆ ತಡ ನಾಳೆಯೇ ಹೋಗೋಣ ಎಂದೆ. ಅಂದು ರಾತ್ರಿ ಖುಷಿಗೆ ನಿದ್ದೆಯೂ ಬರಲಿಲ್ಲ. ಹೀಗೆ ಸಾಗಿತು ನಮ್ಮ ಪಯಣ ಮಲೆನಾಡಿನತ್ತ.

ಬೆಳಗ್ಗಿನ ಜಾವ ಬೇಗನೇ ಎದ್ದು ಹೊರಟೆವು. ಮಳೆಯ ಚಿಕ್ಕ ಚಿಕ್ಕ ಹನಿಗಳು ಕಾರಿನ ಕನ್ನಡಿಯ ಮೇಲೆ ಬಿದ್ದು ಸುಂದರ ಚಿತ್ರಣವನ್ನು ಸಿದ್ಧ ಮಾಡುತ್ತಿದ್ದವು. ಸುಂದರ ಪರಿಸರವನ್ನು ವೀಕ್ಷಿಸುತ್ತಾ, ಹಾಡು ಕೇಳುತ್ತಾ ಪಯಣಕ್ಕೆ ಜತೆಯಾದೆವು. ಚಾರ್ಮಾಡಿಯ ಆ ಹಚ್ಚ ಹಸುರಿನ ತಂಪಾದ ಪ್ರದೇಶದಲ್ಲಿ ಒಂದು ಕ್ಷಣ ಗಾಡಿ ನಿಲ್ಲಿಸಿ ಪ್ರಕೃತಿ ಸೌಂದರ್ಯವನ್ನು ಸವಿದೆವು. ಇಲ್ಲಿಂದ ನೇರವಾಗಿ ನಾವು ತೆರಳಿದ್ದು ದೇವರ ಮನೆ ಬೆಟ್ಟಕ್ಕೆ. ಇದು ಪಶ್ಚಿಮ ಘಟ್ಟಗಳ ನಡುವೆ ಇರುವ ಸದಾ ಹಸುರಿನಿಂದ ಕೂಡಿದ ಪ್ರದೇಶ. ಚಿಕ್ಕಮಗಳೂರಿನ ಮೂಡಿಗೆರೆಯಿಂದ 20ಕಿ. ಮೀ. ದೂರದಲ್ಲಿ ದೇವರ ಮನೆ ಬೆಟ್ಟ ಇದೆ.

Advertisement

ಬೆಟ್ಟದ ತಪ್ಪಲಿನಲ್ಲಿರುವ ಕಾಳ ಭೈರವೇಶ್ವರ ದೇವಸ್ಥಾನ ಇದೆ. ನಾವು ಮೊದಲಿಗೆ ದೇವಸ್ಥಾನಕ್ಕೆ ಪ್ರವೇಶಿಸಿ, ದೇವರ ದರ್ಶನ ಮಾಡಿದೆವು. ಅಲ್ಲಿಯವರೇ ಆದ ಒಬ್ಬರು ನಮಗೆ ಆ ದೇವಸ್ಥಾನದ ವಿಶೇಷತೆಯನ್ನು ಹೇಳಿದರು. ಅದೊಂದು ಐತಿಹಾಸಿಕ ದೇವಸ್ಥಾನ ಹಾಗೂ ಕಾಳ ಭೈರವ ಅಲ್ಲಿಯ ಜನರ ಮನೆ ದೇವರು ಕೂಡ ಹೌದು. 12 ವರ್ಷಕೊಮ್ಮೆ ಇದೇ ಸ್ಥಳದಲ್ಲಿ ಹಾರ್ಲು ಹೂವು ಕೂಡ ಅರಳುತ್ತದೆ. ದೇವಸ್ಥಾನದ ಮುಂದೆ ಸಣ್ಣ ಕೊಳವೂ ಇದೆ. ಇದು ಬೇಸಗೆಯಲ್ಲಿ ಪ್ರಾಣಿಗಳ ನೀರಿನ ತಾಣವಾಗಿದೆ ಎಂಬೆಲ್ಲಾ ಮಾಹಿತಿಯನ್ನು ಕೊಟ್ಟರು.

ದೇವಸ್ಥಾನದಿಂದ ಹೊರ ಬಂದು ಬೆಟ್ಟ ಹತ್ತಲು ಮುಂದಾದೆವು.ಬೆಟ್ಟದ ತಪ್ಪಲಿನಿಂದ ಒಮ್ಮೆ ಕಣ್ಣು ಮೇಲೆ ಹಾಯಿಸಿದಾಗ ವಾವ್ಹ್ ಅನಿಸಿತು. ಮಳೆಹನಿಗಳು ನಮ್ಮನ್ನು ಸ್ವಾಗತಿಸಿದವು. ಮಲೆನಾಡಿನ ಮಡಿಲಲ್ಲಿ, ಹಚ್ಚ ಹಸುರಿನ ಕಾನನದ ನಡುವೆ, ಕೊರೆವ ಚಳಿಗೆ ಮೈಕೊಟ್ಟು ಮೆಲ್ಲನೆ ಹೆಜ್ಜೆ ಹಾಕಿದೆವು. ಸಾಗುತ್ತಾ ಸಾಗುತ್ತಾ ಹಾದಿ ಮುಗಿಯುತ್ತಿರಲಿಲ್ಲ. ಕೊನೆಗೂ ಒಂದು ಪಾಯಿಂಟ್‌ ಗೆ ಹೋಗಿ ನಿಂತೆವು. ಅಲ್ಲಿಂದ ನೋಡಿದಾಗ ದೇವರಮನೆ ನಿಜವಾಗಿಯೂ ಸ್ವರ್ಗದಂತೆ ಕಂಡಿತು. ಹಚ್ಚ ಹಸುರಿನ ನಡುವೆ ಮಂಜು ಕೂಡ ಇದ್ದು ದೇವರಮನೆಯ ಸೌಂದರ್ಯವನ್ನು ದ್ವಿಗುಣಗೊಳಿಸಿತ್ತು. ಆ ಪ್ರಕೃತಿಯ ಸೌಂದರ್ಯಕ್ಕೆ ಮೂಕವಿಸ್ಮಿತಳಾಗಿ ನಿಂತು ಬಿಟ್ಟೆ. ಮಲೆನಾಡಿನ ಮಡಿಲಲಿ, ತುಂತುರಿನ ಜತೆಯಲಿ ಸ್ವರ್ಗವ ಕಂಡೆ ಎಂದು ಮನಸು ಬಾರಿ ಬಾರಿ ಹೇಳುತ್ತಿತ್ತು. ಜೋರಾದ ಗಾಳಿ, ಕೊರೆವ ಚಳಿ ಯಾವುದಕ್ಕೂ ಕೇರೇ ಎನ್ನಲಿಲ್ಲ ನನ್ನ ಕಂಗಳು. ‌

ಜೋರಾದ ಮಳೆಯೂ ಬರಲು ಪ್ರಾರಂಭವಾಯಿತು. ದೇವರ ಮನೆ ನೋಡುವ ಅವಸರದಲ್ಲಿ ಛತ್ರಿ ತರುವುದು ಮರೆತೇ ಹೋಗಿತ್ತು. ಪ್ರಕೃತಿ ಯನ್ನು ವೀಕ್ಷಿಸುತ್ತಿದ್ದ ನನ್ನನ್ನು, ಕೆನ್ನೆಯ ಮೇಲೆ ಮೆಲ್ಲನೆ ಜಾರುತ್ತಿದ್ದ ಮಳೆಹನಿಗಳು ಎಚ್ಚರಿಸಿದವು. ಇನ್ನೇನು ಮಾಡುವುದು, ನನ್ನ ಎರಡು ಬಯಕೆಯೂ ಒಂದೇ ಬಾರಿ ತೀರಿತು, ಮಳೆಯಲ್ಲಿ ನೆನೆದ ಹಾಗೂ ಆಯಿತು, ಟ್ರೆಕಿಂಗ್‌ ಕೂಡ ಆಯ್ತು ಎಂದುಕೊಂಡು ಸುಮ್ಮನಾದೆ. ಅಷ್ಟರಲ್ಲಿ ಒಬ್ಬ ಮೇಡಂ, ಒದ್ದೆಯಾಕಾಗ್ತಾ ಇದ್ದೀರಾ ಛತ್ರಿ ತಕೊಳ್ಳಿ ಎಂದು ಬಿಟ್ಟ. ಅವನು ಯಾರೆಂದು ನಮಗೆ ಗೊತ್ತಿಲ್ಲ, ನಾವು ಯಾರೆಂದು ಅವನಿಗೆ ಗೊತ್ತಿಲ್ಲ. ಆದರೂ ಸಹಾಯ ಮಾಡಲು ಮುಂದಾದ ಆ ಮಳೆಹುಡುಗ. ಕೊಡೆಯ ಅವಶ್ಯಕತೆ ನನಗಿರಲಿಲ್ಲವಾದರೂ ಅವನ ಮಾತಿಗೆ ಬೇಡ ಎಂದು ಹೇಳಲು ನಾಲಗೆ ತಡವರಿಸಿತು. ಛತ್ರಿ ತೆಗೆದುಕೊಂಡು ಅಕ್ಕನ ಕೈಗೆ ಕೊಟ್ಟೆ. ನಾನು ಮಳೆಯಲ್ಲೇ ನೆನೆದು ಆನಂದಿಸಿದೆ. ಇವಳಿಗೆ ಹುಚ್ಚು ಎಂದುಕೊಂಡನೋ ಏನೋ ಗೊತ್ತಿಲ್ಲ. ನನ್ನನ್ನು ಕಂಡು ಕಿರುನಗೆ ಬೀರಿದ ಆ ಮಳೆಹುಡುಗ. ಸ್ವಲ್ಪ ಹೊತ್ತಿನ ಬಳಿಕ ಮಳೆಯೂ ನಿಂತು ಬಿಟ್ಟಿತು.

ಛತ್ರಿಯನ್ನು ಮತ್ತೆ ಅವನಿಗೆ ಹಸ್ತಾಂತರಿಸಿದೆ. ಜತೆಗೆ ಒಂದು ಕಿರುನಗು ಬೀರಿ ಥ್ಯಾಂಕ್‌ ಯು ಅಂದೆ. ಆ ಸುಂದರ ಪರಿಸರವನ್ನು ಬಿಟ್ಟು ಬರಲು ಮನಸ್ಸೇ ಆಗಲಿಲ್ಲ. ಸ್ವಲ್ಪ ಹೊತ್ತು ಅಲ್ಲೇ ಇದ್ದ ಕಲ್ಲಿನ ಮೇಲೆ ಕುಳಿತು ಮತ್ತೆ ಪ್ರಕೃತಿ ವೀಕ್ಷಿಸಿದೆ. ಮನಸ್ಸು ಶಾಂತವಾಯಿತು. ಫೋಟೋಗಳನ್ನು ತೆಗೆದು ಮತ್ತೆ ಬಂದ ದಾರಿಯಲ್ಲೇ ಮರು ಹೆಜ್ಜೆ ಹಾಕಿದೆವು. ಇಲ್ಲಸಲ್ಲದ ಮನಸ್ಸಿನಿಂದ ಬೆಟ್ಟ ಇಳಿದರೂ ಮನಸ್ಸು ಮಾತ್ರ ಅಲ್ಲೇ ಇತ್ತು. ಆ ಸೌಂದರ್ಯಕ್ಕೆ ನಿಜವಾಗಿಯೂ ಬೆರಗಾಗದವರಿಲ್ಲ. ಕೆಳಗೆ ಬಂದವರೇ ಬಿಸಿ ಬಿಸಿ ಚಹಾ ಮತ್ತು ಮಿರ್ಚಿ ಬಜ್ಜಿ ಸವಿದು, ಅಲ್ಲಿಂದ ಹೊರಟು ಬೇಲೂರು, ಹಳೇಬೀಡು ದೇವಸ್ಥಾನಕ್ಕೆ ತೆರಳಿದೆವು. ರಾತ್ರಿಯಷ್ಟರಲ್ಲಿ ಮತ್ತೆ ಮನೆಗೆ ತಲುಪಿದೆವು. ಮರುದಿನ ನನ್ನ ಪಯಣ ಆಸ್ಪತ್ರೆಯ ಕಡೆಗೆ.

ಲಾವಣ್ಯ. ಎಸ್‌.
ವಿವೇಕಾನಂದ (ಸ್ವಾಯತ್ತ ) ಕಾಲೇಜು ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next