ಸುತ್ತಲೂ ಗುಡ್ಡ. ಸಾಲು ಗಿಡಮರಗಳು, ಹೂ ಬಳ್ಳಿಗಳ ಸೊಬಗು. ತಂಪಾದ ಗಾಳಿ, ಮಂಜಿನ ಹನಿಗಳು. ಕಣ್ಣಿಗೆ ತಂಪು ನೀಡು ಹಸುರಿನ ವನಸಿರಿ. ಆಹಾ ಎಷ್ಟು ಸುಂದರ. ಇವೆಲ್ಲಾ ಪ್ರವಾಸಿಗರಿಗೆ ತುಂಬಾನೆ ಇಷ್ಟ. ಇಂತಹ ಪ್ರಕೃತಿ ಸೌಂದರ್ಯ ಸೊಬಗು ಸವಿಯಲು ‘ನಂದಿ ಹಿಲ್ಸ್’ ಹೇಳಿ ಮಾಡಿಸಿದ ಪ್ರವಾಸಿ ತಾಣವಾಗಿದೆ.
ಎಲ್ಲಿದೆ?
‘ನಂದಿ ಬೆಟ್ಟ’ ಇದು ಚಿಕ್ಕಬಳ್ಳಾಪುರ ಜಿಲ್ಲೆ ಯಲ್ಲಿದೆ. ಚಿಕ್ಕಬಳ್ಳಾಪುರ ಪಟ್ಟಣದಿಂದ 10 ಕಿ.ಮಿ ದೂರದಲ್ಲಿ ಹಾಗೂ ಬೆಂಗಳೂರು ನಗರದಿಂದ ಸುಮಾರು 45 ಕಿ.ಮಿ ದೂರದಲ್ಲಿದೆ. “ಪ್ರೇಮಿಗಳು ಸ್ವರ್ಗ ತಾಣ’ ಎಂದೆ ಕರೆಸಿಕೊಳ್ಳುವ ನಂದಿ ಹಿಲ್ಸ್, ಇದು ಬೆಂಗಳೂರರಿಗೆ ಸಮೀಪ ಇರುವ ಪ್ರವಾಸಿ ತಾಣ. ಪ್ರಕೃತಿ ಪ್ರಿಯರಿಗೆ ಶನಿವಾರ-ಭಾನುವಾರ ಬಂತು ಅಂದ್ರೆ ಸಾಕು “ಗಿರಿಧಾಮ’ ಯುವಕ-ಯುವತಿಯರಿಂದ ತುಂಬಿ ತುಳುಕುತ್ತದೆ. ಇಲ್ಲಿಯ ನೈಸರ್ಗಿಕ ಸೊಬಗಿಗೆ ಮನ ಸೋಲದವರೆ ಇಲ್ಲ. ಗಿಡಮರಗಳ ಮಧ್ಯೆ, ಮೆಟ್ಟಿಲುಗಳ ಮೇಲೆ ಬೆಟ್ಟ ಹತ್ತುವುದೇ ಒಂದು ರೋಮಾಂಚನಕಾರಿ.
ಆ ಪೊದೆಗಳು, ತಂಪಾದ ಗಾಳಿ, ಕೋತಿಗಳ ಚೆಲ್ಲಾ ಟವಿದೆ. ಬೆಟ್ಟದ ಮೇಲಿಂದ ಕೆಳಗೆ ಇಣುಕಿ ನೋಡಿದರೆ ಕಾಣುವ ಚಿಕ್ಕ ಚಿಕ್ಕ ಮನೆಗಳು, ಬೃಹತ್ ಬಂಡೆಗಳ ಪ್ರಕೃತಿ ಸೊಬಗು. ಈ ಪ್ರವಾಸಿ ತಾಣ ನೋಡಲು ಹೆಚ್ಚು ಯುವ ಪ್ರೇಮಿಗಳು, ಫ್ಯಾಮಿಲಿ, ಮಕ್ಕಳು ಭೇಟಿ ನೀಡುತ್ತಾರೆ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ಎಂಜಾಯ್ ಮಾಡಿ. ಒಂದಿಷ್ಟು ಸೆಲ್ಫಿ ಫೋಟೋ ತೆಗೆದುಕೊಂಡು ತಮ್ಮಮನೆ ಕಡೆ ಪ್ರಯಾಣಿಸುತ್ತಾರೆ. ಮತ್ತೆ ಯಾಕೆ ತಡ, ರಜೆ ಇದ್ದರೆ ಒಮ್ಮೆ ನಂದಿ ಹಿಲ್ಸ್ ಗೆ ಭೇಟಿ ನೀಡಿ, ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.
*ನಬಿಸಾಬ. ಆರ್.ಬಿ.ದೋಟಿಹಾಳ, ಕುಷ್ಟಗಿ