Advertisement
ಒಬ್ಬ ಮಗುವಿನ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಕನಸುಗಳಿಗೆ ಸೇತುವೆಯಾಗಿ ಕೈ ಹಿಡಿದು ನಡೆಸುವ ಜಗತ್ತಿನ ಅದ್ಭುತ , ಪರಿಶುದ್ಧ ಪ್ರೀತಿಯ ಸಾಹುಕಾರರು ಅಪ್ಪ -ಅಮ್ಮ. ಜನ್ಮ ನೀಡಿದ್ದು ಜನನಿಯಾದರು ಜವಾಬ್ದಾರಿ ಹೊರುವುದು ತಂದೆ, ಕನಸುಗಳಿಗೆ ಸ್ಫೂರ್ತಿ ತಾಯಿ ತುಂಬಿದರೆ,ಬೆವರಿಳಿಸಿ ಕಾಯಕಯೋಗಿಯಾಗಿ ದುಡಿದು ಮಗುವಿನ ಸಾಧನೆಯ ಹಿಂದೆ ನಿಲ್ಲುವುದು ತಂದೆ. ಎಷ್ಟೊಂದು ಸುಂದರವಾದ ಸೇತುವೆಗಳಾಗಿ ಮಗುವಿನ ಭವಿಷ್ಯದ ಹಾದಿಗೆ ದಾರಿದೀಪವಾಗಿ ಬೆಳಗುತ್ತಾರೆ ಅಲ್ಲವೇ.
Related Articles
Advertisement
ನನ್ನ ಬಾಳ ಪುಟದೊಳಗೆ ಅವನಿಲ್ಲದ ಕ್ಷಣ – ದಿನಗಳ ಪುಟಗಳ ಅಧ್ಯಾಯವೇ ತುಂಬಿದೆ . ನೆನಪುಗಳ ಕಿರು ಹೊತ್ತಿಗೆಯೂ ಇರದೇ ಎಲ್ಲವೂ ಬರೀ ಹಾಳೆಗಳು. ಬರೆಯಬಹುದದಾರೂ ಏನು ಅವನ ನೆನಪುಗಳೇ ಇಲ್ಲದ ಅಧ್ಯಾಯವನ್ನು ಪೂರ್ಣಗೊಳಿಸುವುದಾದರು ಹೇಗೆ?
ಅಪ್ಪ ಎಂಬ ಅದ್ಬುತ ಅಧ್ಯಾಯವು ವಿಧಿಯ ಕ್ರೂರ ಆಟಕ್ಕೆ ವಿರಾಮ ಕಂಡಿರುವಾಗ .ಅರಿವಿರದ ಆ ಮುಗª ಬಾಲ್ಯ ಅವನ ಪ್ರೀತಿಯ ಆಸರೆಯಿಲ್ಲದೆ ತಾಯಿಯ ಪ್ರೀತಿಯ ಅಕ್ಕರೆಯೊಂದಿಗೆ ಸಾಗಿತ್ತು. ನೋವುಗಳು ಅರಿವಿನ ಬಿಂಬ ಮನದಲಿ ಮೂಡುವ ಮೊದಲೇ ಪುಟ್ಟ ಮನಸಿನಲಿ ಅವನಿಲ್ಲದ ಕೊರಗು ತುಂಬಿಸಿತ್ತು.ನಿರೀಕ್ಷೆಗೂ ಮೀರಿದ ಹೊಡೆತದ ನೋವು ಕರಗದೆ ಇಂದಿಗೂ ಮನಸನ್ನು ಮೂಕವಾಗಿಸಿದೆ.
ಹೆಣ್ಣು ಮಕ್ಕಳಿಗೆ ಅಪ್ಪ ಅಂದರೆ ಅದೇನೋ ಅಮ್ಮನಿಗಿಂತ ಸ್ವಲ್ಪ ಒಲವು ಅಪ್ಪನ ಕಡೆಗೆ. ಬಹುಷಃ ಅವ ನನ್ನ ಬಾಲ ದಿನಗಳಿಗೆ ಜೊತೆಯಾಗುತ್ತಿದರೆ ನನಿಗೂ ಹಾಗೇ ಅನಿಸುತಿತ್ತೋ ಏನೋ.ನನ್ನ ಪುಟಾಣಿ ಕೈಗಳಲ್ಲಿ ಅವನ ಕೈ ಹಿಡಿದು ನಡೆಯಲಿಲ್ಲ, ಅವ ಕೊಡಿಸಿದ ಕಿರುಗೆಜ್ಜೆ ಹಾಕಿ ಲಜ್ಜೆ ಇಟ್ಟು ಕುಣಿಯಲಾಗಲಿಲ್ಲ,ಬೆನ್ನ ಮೇಲೆ ಕೂತು ಆಟ ಆಡಲಿಲ್ಲ ಎಲ್ಲವೂ ತೆಳು ಪರದೆಯ ಮೇಲೆ ಅರೆ ಕ್ಷಣ ಮೂಡಿದ ಹುಸಿ ಕನಸಿಗಷ್ಟೇ ನನ್ನ ಬಾಳಲ್ಲಿ ಅವನ ನೆನಪು.
ಕನಸಿನ ಅಂಬಾರಿಯು ನಿಂತು ಕಾಯುತ್ತಿದ್ದರು. ಅವನೆಂದು ಅಂಬಾರಿಯ ಹೊತ್ತು ಸಾಗಲೇ ಇಲ್ಲ, ಆ ಅಂಬಾರಿಯೊಳಗೆ ನಾ ಕೂತು ಸವಾರಿ ಮಾಡಲೇ ಇಲ್ಲ. ಕಮರಿದ ಕನಸುಗಳು ಮುಂದೆ ನನಸಾಗುವ ಭರವಸೆ ಇರಲಿಲ್ಲವಾದರೂ, ಅಪ್ಪ ಎನ್ನುವ ನನ್ನ ಬದುಕಿನ ದೀಪ ಭರವಸೆಯ ನಂದಾದೀಪವಾಗಿ ನನ್ನೊಡನೆ ಸದಾ ಬೆಳಗಿ ಆಶೀರ್ವಾದ ಹಾರೈಕೆಯ ರಕ್ಷೆಯಾಗಿ ಕೈ ಹಿಡಿಯುವ ಬಲವಾದ ನಂಬಿಕೆ ನನ್ನದು.
ಕೈ ಹಿಡಿದು ನಡೆಸಲಿಲ್ಲವಾದರೂ ಪರೋಕ್ಷವಾಗಿ ಕೈ ಹಿಡಿದು ನಡೆಸುವವ, ಎಲ್ಲೆ ಎಡವಿದರು ಮೇಲೆತ್ತಿ ಧೈರ್ಯ ತುಂಬುವ, ನೋವ ತುಂಬಿದ ಮನಕೆ ನನ್ನೊಳಗೆ ಶಕ್ತಿ ತುಂಬುವವ ನನ್ನ ಜೊತೆಗೆ ಸದಾ ಬೆಂಗಾವ ಲಾಗಿ ಇರುವ ಭರವಸೆ ಅಪ್ಪ. ನನ್ನ ಭವಿಷ್ಯವನ್ನು ಸದಾ ಬೆಳಗುವಂತೆ ಕಾಪಾಡುವ ಜೀವ ಎಂದಿಗೂ ನನ್ನೊಂದಿಗೆ ಜೀವಂತವಾಗಿರುವುದು.
-ವಿಜಯಲಕ್ಷ್ಮೀ ಬಿ.
ವಿವೇಕಾನಂದ ಕಾಲೇಜು, ಪುತ್ತೂರು