ಎದೆಯಲ್ಲಿ ನಿರಂತರ ಬೋರ್ಗರೆವ ಕಡಲು, ಆತಂಕದ ನಡುವೆ ತುಸು ಸಂತಸವನ್ನು ಹೊತ್ತಿರುವ ಒಡಲು, ಕಾದಿವೆ ಎಷ್ಟೆಲ್ಲ ಕಣ್ಣುಗಳು ಬರಿ ನೋಟದಲ್ಲಿ ಬೆನ್ನ ಸುಡುವುದು. ಇದು ಮೊದಲ ದಿನ ಕಾಲೇಜು ಮೆಟ್ಟಿಲು ಹತ್ತುವ ಪ್ರತಿಯೊಬ್ಬರ ಮನಸ್ಥಿತಿ. ಇದರಲ್ಲಿ ನಾನು ಒಬ್ಬಳು. ಮೊದಲ ದಿನ ಕಾಲೇಜಿಗೆ ಬಂದಾಗ ಸಂಕೋಚ, ಸಂಭ್ರಮ, ಆತಂಕ, ನಿರೀಕ್ಷೆ ಎಲ್ಲವೂ ಕೂಡಿ ಮನಸ್ಸಿಗೆ ಹೊಸದಾಗಿ ಕನಸಿನ ರೆಕ್ಕೆ ಮೂಡಿ ಮಾತು ಮರೆತು ಹೊಸ ಪ್ರಪಂಚದಲ್ಲಿ ಹಾರುವ ಕ್ಷಣಗಳು. ಆ ದಿನದ ಪ್ರತಿಯೊಂದು ಕ್ಷಣವು ಭಿನ್ನ.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಇಂತಹದೇ ಕಾಲೇಜಿನಲ್ಲಿ ಶಿಕ್ಷಣ ಪಡೆಯಬೇಕೆಂಬ ಕನಸಿರುತ್ತದೆ. ನನಗೂ ಎಸ್. ಡಿ.ಎಂ. ಕಾಲೇಜಿನಲ್ಲಿ ಓದಬೇಕೆಂಬ ಕನಸು. ಈ ಕಾಲೇಜು ಅದೆಷ್ಟೋ ವಿದ್ಯಾರ್ಥಿಗಳಿಗೆ ಬದುಕಿಗೆ ದಾರಿ ತೋರಿಸಿದೆ. ಅವಕಾಶಗಳಿಗೆ ವೇದಿಕೆ ಕೊಟ್ಟಿದೆ. ಹೊಸ ಜೀವನಕ್ಕೆ ಬುನಾದಿ ಹಾಕಿದ ಕಾಲೇಜು.
ಉತ್ತರ ಕರ್ನಾಟಕದಿಂದ ಬಂದ ನಾನು ಇಲ್ಲಿನ ಪ್ರತಿಯೊಂದಕ್ಕೂ ಹೊಂದಾಣಿಕೆಯಾಗುವುದು ಅನಿವಾರ್ಯವಾಗಿತ್ತು. ಆದರೂ ಈ ಅನಿವಾರ್ಯತೆ ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ ಎಂಬ ನಂಬಿಕೆಯೊಂದಿಗೆ ಬಂದೆ. ಮೊದಲ ದಿನ ನಮಗೆ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನಾನು ಸ್ನಾತಕೋತ್ತರದಲ್ಲಿ ತೆಗೆದುಕೊಂಡ ವಿಷಯ ಪತ್ರಿಕೊದ್ಯಮ ಮತ್ತು ಸಮೂಹ ಸಂವಹನ. ಡಿಗ್ರಿಯಲ್ಲಿ ಸಹ ನನ್ನ ವಿಷಯ ಪತ್ರಿಕೋದ್ಯಮ. ಇದು ಮುಗಿದ ಅನಂತರ ಎಲ್ಲಿ ಪಿ.ಜಿ. ಮಾಡಬೇಕೆಂದು ಕೇಳಿದಾಗ ಮೊದಲ ಬಂದ ಉತ್ತರವೇ ಎಸ್.ಡಿ.ಎಂ ಕಾಲೇಜು. ಏಕೆಂದರೆ ಇಲ್ಲಿ ಕಲಿತ ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲೂ ಗುರಿತಿಸಿಕೊಂಡಿದ್ದಾರೆ. ಅದೇ ರೀತಿ ನಾನು ಗುರುತಿಸಿಕೊಳ್ಳಬೇಕೆಂದು ಕನಸಿನ ಮೂಟೆಯನ್ನು ಹೆಗಲೆರಿಸಿಕೊಂಡು ಬಂದಿರುವೆ. ಎÇÉೊ ಒಂದು ನದಿಯಾಗಿ ಹರಿಯುತ್ತಿದ್ದ ನಾನು ಇಂದು ಸಮುದ್ರ ಸೇರಿದ್ದೇನೆ. ಎಲ್ಲವೂ ಹೊಸ ಅನುಭವ. ಆದರೆ ಎಲ್ಲೋ ಒಂದು ಕಡೆ ನಂಬಿಕೆ ಇದೆ. ಏನಾದರೂ ಸಾಧಿಸುತ್ತೇನೆ ಎಂದು.
ಇದೆ ಮೊದಲು ನನ್ನ ಊರು ಬಿಟ್ಟು ಬೇರೆ ಕಡೆ ಕಲಿಯಲು ಬಂದಿರುವ ಅನುಭವ ಎಲ್ಲವನ್ನು ಬಿಟ್ಟು ಬರುವುದು ಕಷ್ಟ. ಆದರೂ ಮುಂದಿನ ಜೀವನಕ್ಕೆ ಇದು ಅನಿವಾರ್ಯವಾಗಿದೆ. ನನ್ನ ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳಲ್ಲಿ ಎಸ್.ಡಿ.ಎಂ. ಕಾಲೇಜು ಆಯ್ಕೆ ಕೂಡ ಒಂದು. ಈ ಕಾಲೇಜು ವಿಧ್ಯಾರ್ಥಿಗಳ ಜೀವನದಲ್ಲಿ ಅವಿಸ್ಮರಣಿಯ.
- ಸೌಮ್ಯಾ ಕಾಗಲ್
ಬಾಗಲಕೋಟೆ