Advertisement
ದಿನದಲ್ಲಿ ಕನಿಷ್ಠ ಹತ್ತು ಬಾರಿಯಾದರೂ ನಾನು ನಾಳೆಯಿಂದ ಈ ಕೆಲಸ ಮಾಡುತ್ತೇನೆ, ಆ ಕೆಲಸ ಮಾಡುತ್ತೇನೆ ಎಂದು ಹಲವಾರು ಯೋಜನೆಗಳ ಬಗ್ಗೆ ಸಂಕಲ್ಪತೊಡುತ್ತೇವೆ. ನಾಳೆಯ ದಿನ ಪುನಃ ನಾಳೆಗೆ ಆ ಯೋಜನೆಗಳನ್ನೆಲ್ಲ ಮುಂದೂಡಿಬಿಡುತ್ತೇವೆ. ಹೀಗೆ ಈ ನಾಳೆ ಎನ್ನುವುದಕ್ಕೆ ಕೊನೆಯೇ ಇಲ್ಲದಂತೆ ಮಾಡಿಬಿಡುತ್ತೇವೆ. ಇದಕ್ಕೆ ಮುಖ್ಯ ಕಾರಣ ಮನಸ್ಸಿನ ಮೇಲೆ ಹೇಗೆ ಸಂಯಮ ಸಾಧಿಸಬಹುದೆಂಬ ಮಾರ್ಗದರ್ಷನ ನಮಗಿಲ್ಲದಿರುವುದು.
Related Articles
Advertisement
ಮನಸ್ಸಿನ ಸ್ಥಿತಿಗತಿಗಳು ಮಾಡುವ ಕಾರ್ಯದ ಮೇಲೆ ತೀರಾ ಪರಿಣಾಮವನ್ನು ಬೀರುತ್ತವೆ. ಹೊಸದಾದ ಕೆಲಸಕ್ಕೆ ತೊಡಗುವಾಗ ಇರುವ ಹುರುಪು ಕೊನೆಯವರೆಗೂ ಇರಬೇಕಾಗುತ್ತದೆ. ದಿನದಿಂದ ದಿನಕ್ಕೆ ಅಸಡ್ಡೆ ಬೆಳೆಯುತ್ತಾ ಹೋದರೆ, ಋಣಾತ್ಮಕ ಭಾವನೆಗಳೇ ತುಂಬಿಕೊಂಡಿದ್ದರೆ ಕಾರ್ಯ ಯಶಸ್ವಿಯಾಗುವುದಿಲ್ಲ. ನಮ್ಮ ಮಾನಸಿಕತೆಯೇ ನಮಗೆ ಮುಸಾಕಾಗಿ ಇರುವಲ್ಲಿ ಯಶಸ್ಸು ದೊರೆಯುವುದೆಂತು? ಹಾಗಾಗಿ ಪ್ರತಿದಿನವೂ ಹೊಸ ದಿನವನ್ನಾಗಿ ಅಂಗೀಕರಿಸಿ ಹೊಸ ಉತ್ಸಾಹದಿಂದ ತೊಡಗಿದರೆ ಪ್ರತಿದಿನವೂ ನಮ್ಮ ಅದೃಷ್ಟದ ದಿನವೇ!
ಶಿಸ್ತಿರಲಿ
ಸಮಯವನ್ನು ವೃಥಾ ವ್ಯರ್ಥ ಮಾಡದೆ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಬಿಡುವಿನ ಸಮಯದಲ್ಲೆಲ್ಲಾ, ರೀಲ್ಸು ಮೆಸೇಜು ಎಂದು ಮೊಬೈಲ್ ಒಳಗೆಯೇ ಕಾಲಹರಣ ಮಾಡದೆ, ಸೃಜನಾತ್ಮಕ ಚಟುವಟಿಕೆಗಳತ್ತ ಮುಖಮಾಡಬೇಕು. ಪ್ರತಿಯೊಂದು ಚಟುವಟಿಕೆಗಳಿಗೂ ನಿಗದಿತ ಸಮಯವನ್ನು ಗುರುತಿಸಿಕೊಳ್ಳಬೇಕು. ಇಂದು ಒಂದರ್ಧ ಗಂಟೆ ಓದಿದರೆ, ನಾಳೆಯೂ ಅದೇ ಹೊತ್ತಿನಲ್ಲಿ ಓದಲು ಕೂರಬೇಕು. ಹೀಗೆ ಪ್ರತಿನಿತ್ಯ ಆ ಸಮಯವನ್ನು ಓದಿಗಾಗಿಯೇ ಮೀಸಲಿಡಬೇಕು. ಹೀಗೆ ಒಮ್ಮೆ ಉತ್ತಮ ಹವ್ಯಾಸಗಳ ರುಚಿ ಹತ್ತಿದರೆ ಅದರಿಂದ ಬಿಡಿಸಿಕೊಳ್ಳುವುದು ಬಲುಕಷ್ಟ!
ಸೋಲಿಸಿ ಬದುಕಿ
ಪ್ರತಿ ಪರಿಸ್ಥಿತಿಯಲ್ಲೂ ನಮ್ಮ ಮನಸ್ಸು ಸ್ಪರ್ಧೆಯನ್ನು ಬಯಸುತ್ತದೆ. ಎಲ್ಲೆಲ್ಲೂ ಪೈಪೋಟಿಯನ್ನೇ ಕಾಣುವ ಬದಲು ನಮಗೆ ನಾವೇ ಸ್ಪರ್ಧೆಯನ್ನೊಡಬೇಕು. ನಿನ್ನೆಗಿಂತ ಇಂದು ಸೊಗಸಾಗಿ, ಇಂದಿಗಿಂತ ನಾಳೆ ಗೆಲುವಾಗಿ ಬದುಕಬೇಕು. ನಮ್ಮ ಜೀವನದಲ್ಲಿ ಇಂದು ಸೋಲುವವನು, ನಾಳೆ ಗೆಲ್ಲುವವನು ನಾವೇ ಆಗಿರಬೇಕು ವಿನಃ ಮತ್ತೂಬ್ಬ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶವಿರಬಾರದು.
ನಿಮಗಾಗಿ ನೀವಿರಿ
ಬದುಕೆಂಬ ಗಾಳಿಪಟದ ನಿಯಂತ್ರಣದ ದಾರವನ್ನು ನಮ್ಮ ಕೈಯಲ್ಲೆ ಹಿಡಿದಿಟ್ಟುಕೊಳ್ಳಬೇಕು. ನಿಯಂತ್ರಣ ತಪ್ಪಿದ ಗಾಳಿಪಟದಂತೆ ಆಕಾಶಮಾರ್ಗದಲ್ಲಿ ತೇಲಾಡುತ್ತಾ ಓಲಾಡುತ್ತಾ ಸಂಚರಿಸಿದಂತೆ ತಹಬದ್ದಿಗೆ ತರಬೇಕು. ಬೇರೆಯವರ ಚಿಂತನೆಯನ್ನೇ ಸರಿಯೆಂದು ಅಂಗೀಕರಿಸದೆ ನಮ್ಮ ನಮ್ಮ ಅಂತರಾತ್ಮದ ಕರೆಗೆ ಅಸ್ತು ಎನ್ನುವುದನ್ನು ಕಲಿಯಬೇಕು. ಬದುಕು ನಮ್ಮನ್ನು ಮೂಲೆಗುಂಪು ಮಾಡಲು ಬಿಡದೆ, ನಾವು ನಮ್ಮೊಟ್ಟಿಗೆ ಸಂಬಂಧವನ್ನು ಬೆಳೆಸಿಕೊಂಡು ನಾವೊಂದು ಗುಂಪಾಗಿದ್ದು, ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳುವುದು ಜಾಣತನ!
-ಪಂಚಮಿ
ಹಾವಿದ್ಯಾಲಯ ಪುತ್ತೂರು