Advertisement

UV Fusion: ಗತವೈಭವ ಸಾರುವ ಚೌಟರ ಅರಮನೆ

04:38 PM Aug 21, 2024 | Team Udayavani |

ತುಳುನಾಡು ಶತ ಶತಮಾನಗಳಿಂದ ತನ್ನದೇ ಆದ ಭಾಷಾ ಸೊಗಡು, ಸಂಸ್ಕೃತಿ, ಕಲಾ ವೈವಿಧ್ಯ, ಗುತ್ತು ಮನೆ, ದೈವಾರಾಧನೆಗಳಿಂದ ವಿಶ್ವದಲ್ಲಿಯೇ ಪ್ರಸಿದ್ಧಿ ಹೊಂದಿದೆ. ಕರಾವಳಿ ತೀರದ ದಕ್ಷಿಣಕನ್ನಡ, ಮೂಡುಬಿದಿರೆ, ಕಾರ್ಕಳ, ಉಡುಪಿ ಭಾಗಗಳನ್ನು ಒಳಗೊಂಡ ಈ ತುಳುನಾಡಿನಲ್ಲಿ ದಿಟ್ಟತನದಿಂದ ಆಳ್ವಿಕೆ ನಡೆಸಿದ ಅದೇಷ್ಟೋ ರಾಜ ಮನೆತನಗಳಿವೆ.

Advertisement

ಸಾಮಂತರಾಜ-ರಾಣಿಯರ ಸಾಧನೆಯ ಹೆಜ್ಜೆ ಗುರುತುಗಳು ಗತವೈಭವ ಸಾರುವಇಲ್ಲಿನ ಅರಮನೆಗಳ ಮೂಲಕ ಇಂದಿಗೂ ಉಳಿದುಕೊಂಡಿವೆ. ಈ ಸಾಲಿಗೆ ಸೇರುವ ಮೂಡುಬಿದಿರೆಯ ಚೌಟರ ಅರಮನೆ ತುಳುನಾಡಿನ ಕಥೆ ಹೇಳುತ್ತದೆ. ಈ ಚೌಟರ ಅರಮನೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆ ವಿಶಿಷ್ಟ ಅನುಭವವಾಗುತ್ತದೆ. ಸುತ್ತಲು ಹಸುರಿನ ವಾತಾವರಣ, ವಿಶಾಲ ಪ್ರಾಗಂಣ, ಕೆಂಪು ಕಲ್ಲು ಹಾಸಿನ ಒಳಾಂಗಣ. ವಿಭಿನ್ನ ಕೆತ್ತನೆಯೊಂದಿಗೆ ಕಂಗೊಳಿಸೋ ಹಿರಿದಾದ ಕಂಬಗಳು ಅರಮನೆಯನ್ನು ಆಕರ್ಷಣಿಯವಾಗಿಸಿವೆ.

ಚೌಟ ರಾಜವಂಶವು 12 ನೇ – 18 ನೇ ಶತಮಾನಗಳಲ್ಲಿ ತುಳುನಾಡು ಪ್ರದೇಶದ ಕೆಲವು ಭಾಗಗಳನ್ನು ಆಳಿದ ಜೈನ ರಾಜವಂಶವಾಗಿದೆ. ಈ ಚೌಟರ ಅರಮನೆ ನೋಡುವುದಕ್ಕೆ ಈಗಲೂ ಪ್ರವಾಸಿಗರು ಆಗಮಿಸುತ್ತಾರೆ. ಸುಮಾರು ಎಂಟು ಎಕರೆ ಕೋಟೆಯ ನಡುವೆ ಇದ ªಅರಮನೆ ಇದೀಗ ರಾಜ ಪ್ರಾಂಗಣವನ್ನ ಮಾತ್ರ ಉಳಿಸಿಕೊಂಡಿದೆ. ಸಂಪೂರ್ಣವಾಗಿ ಕಾಷ್ಟಶಿಲ್ಪಗಳೇ ಕಾಣ ಸಿಕ್ಕುವ ಈ ಅರಮನೆಯಲ್ಲಿ ಸಪ್ತನಾರಿತುರಗ, ನವನಾರಿಕುಂಜರ ಎಂಬ ಎರಡು ಶಿಲ್ಪಗಳು ವಿಶೇಷವಾಗಿವೆ.

ಇತಿಹಾಸದ ಪ್ರಕಾರ ಮೂಲತಃ ಪುತ್ತಿಗೆಯಲ್ಲಿದ್ದ ಅರಮನೆಯಲ್ಲಿ ಬೆಂಕಿ ಅನಾಹುತವಾದ ಮೇಲೆ ಕುಲದೇವರಾದ ಸೋಮನಾಥನ ಸಹಿತ ಮೂಡುಬಿದಿರೆಗೆ ಬಂದ ಚೌಟರು ತಮ್ಮದೇ ಆದ ವಿಸ್ತಾರವಾದ ಅರಮನೆ ಕಟ್ಟಿದರಂತೆ. ದಪ್ಪನೆಯ ಮರಗಳಿಂದ ತಯಾರಾದ ನೋಡಲು ಮನಸೂರೆಗೊಳಿಸುವ ಕೆತ್ತನೆಗಳು ಇಂದಿಗೂ ಜನರನ್ನ ಆಕರ್ಷಿಸುತ್ತದೆ. ಈ ಅರಮನೆಯಲ್ಲಿ ದಪ್ಪನೆಯ ಕಂಬದ ತುಂಬೆಲ್ಲ ಶೃಂಗಾರದ ಚಿತ್ರಗಳು ಕಾಣಸಿಗುತ್ತವೆ.

Advertisement

ನೂರಾರು ವರ್ಷಗಳು ಕಳೆದರೂ ಕೂಡ ಚೂರೇಚೂರು ಭಾಗವನ್ನೂ ಗೆದ್ದಲು ಮುಟ್ಟಿಲ್ಲ ಎಂಬುದು ಅಚ್ಚರಿಯ ಸಂಗತಿ. ಅರಮನೆಯ ಹೊರಗಡೆ ರಸ್ತೆ ಬದಿಯಲ್ಲಿ ಪೋರ್ಚುಗೀಸರನ್ನು ತನ್ನ ದೀವಟಿಗೆಯಿಂದಲೇ ಹೆದರಿಸಿ ಸಂಸ್ಥಾನವನ್ನು ಉಳಿಸಿಕೊಂಡ ದೀರ ಮಹಿಳೆ ರಾಣಿ ಅಬ್ಬಕ್ಕನ ಪ್ರತಿಮೆ, ಚೌಟ ಮನೆತನಕ್ಕೆ ಸೇರಿದ ದೈವ ಪೀಠ, ಆನೆ ಬಾಗಿಲು ಹೆಸರಿನ ಮಹಾದ್ವಾರ ಕಾಣಬಹುದು.

ಅರಮನೆಯ ಒಳಭಾಗದ ಒಂದು ಕೋಣೆಯಲ್ಲಿ ಅವರ ಮನೆತನದ ಹಳೆಯ ಸಾಮಗ್ರಿಗಳು, ಕವಚ, ಖಡ್ಗ, ದೈವ ಸಾಮಗ್ರಿಗಳು, ಚೌಟ ವಂಶಸ್ಥರ ಪೀಳಿಗೆ ನಕ್ಷೆ ನೋಡಬಹುದು. ಅರಮನೆಯ ಎದುರು ವಿಶಾಲ ಕೋಟೆಯಿತ್ತೆಂದೂ ಆ ಕೋಟೆಯಲ್ಲಿ ಕೂತು ರಾಜ ಪ್ರಜೆಗಳ ಆಲಿಸುತ್ತಿದ್ದನೆಂದೂ ಹೇಳಲಾಗುತ್ತೆ. ಈಗ ಆ ಕೋಟೆಯು ಅಳಿದು ಹೋದಿದ್ದು ಅದರ ಕೆಲವು ಅವಶೇಷಗಳು, ಮೆಟ್ಟಿಲುಗಳ ಮೂಲಕ ಆ ಕೋಟೆಯನು °ಗುರುತಿಸಬಹುದಾಗಿದೆ.

ಹೀಗೆ ಹತ್ತಾರು ವೈಶಿಷ್ಟ್ಯತೆಗಳನ್ನು ಹೊಂದಿರೋ ಚೌಟರ ಅರಮನೆ ಇಂದಿಗೂ ಇತಿಹಾಸ ಪ್ರಿಯರ ನೆಚ್ಚಿನ ತಾಣವಾಗಿ ಉಳಿದಿರುವುದು ವಿಶೇಷ. ಇದೀಗ ಮೂಲ ವಂಶಸ್ಥರು ಅರಮನೆಯನ್ನು ಸರ್ಕಾರಕ್ಕೆ ಒಪ್ಪಿಸಿದ್ದು, ಕೇಂದ್ರ ಸರ್ಕಾರದ ಭಾರತೀಯ ಪುರಾತತ್ವ ಇಲಾಖೆಯು ಈ ಅರಮನೆಯ ಸಂರಕ್ಷಣೆಯ ಹೊಣೆಯನ್ನು ಹೊತ್ತಿದೆ.

-ದಿವ್ಯಾ

ನಾಯ್ಕನ ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next