ಸ್ವತಂತ್ರ ಭಾರತದ ಏಳು ದಶಕಗಳ ಸಿಂಹಾವಲೋಕನ ಮಾಡಿದಾಗ ಭಾರತ ನಿಜಕ್ಕೂ ಸ್ವತಂತ್ರ ರಾಷ್ಟ್ರವೇ? ನಮ್ಮ ಹಲವು ಸ್ವಾತಂತ್ರ್ಯರ್ಯ ಹೋರಾಟಗಾರರು ಕಂಡ ನಮ್ಮ ಭಾರತದ ಕನಸು ನನಸಾಗಿದೆಯೇ? ಯುವ ಜನತೆ ಈ ದೇಶದ ಪ್ರಗತಿಯ ರೂಪಕ ಎಂದು ನಂಬಿದ್ದ ನಮ್ಮ ಪೂರ್ವಜರ ನಂಬಿಕೆ ಉಳಿಸಿಕೊಂಡಿದ್ದೇವಾ ಎಂದು ನಮ್ಮನ್ನು ನಾವು ಕೇಳಿಕೊಳ್ಳುವ ಮತ್ತು ಮರು ಅವಲೋಕಿಸುವ ಸಮಯ ಇದಾಗಿದೆ.
ಬಾಲ್ಯದಲ್ಲಿ ನಾವು ಆಚರಿಸುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯ ನೆನಪು ನಮ್ಮೆಲ್ಲರ ಎದೆಯಲ್ಲಿ ಮಾಸದೆ ಉಳಿಯುತ್ತದೆ. ಮದುವೆ ಮನೆಯು ಸಿಂಗಾರಗೊಂಡಂತೆ ಇಡೀ ಶಾಲೆಯು ಅಲಂಕೃತಗೊಂಡಿರುತ್ತಿತ್ತು. ಒಂದು ವಾರದ ಮೊದಲಿನಿಂದಲೇ ಹಾಡು, ನೃತ್ಯ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಭರ್ಜರಿ ತಯಾರಿ ಆರಂಭವಾಗುತ್ತಿತ್ತು.
ಶಾಲೆಯಲ್ಲಿ ಕೊಟ್ಟ ನೀಲಿ ಸಮವಸ್ತ್ರ ಸ್ವಾತಂತ್ರ್ಯ ದಿನಾಚರಣೆಗೆ ಎಂದೇ ಹೊಲಿಸಿ, ಸಿದ್ಧ ಮಾಡಿ ಇಟ್ಟಿರುತ್ತಿದ್ದೆವು. ಕೇಸರಿ, ಬಿಳಿ, ಹಸಿರು ಬಣ್ಣದ ಬಳೆ, ಸರ, ರಿಬ್ಬನ್ ಧರಿಸಿ ಶಾಲೆಗೆ ಹೋಗುತ್ತಿದ್ದೆವು. ಅಂದು ಬೆಳಗ್ಗೆ ಪ್ರಾರ್ಥನೆ ಮಾಡಿ ಹೆಮ್ಮೆಯಿಂದ ಧ್ವಜ ನೋಡಿ ಸೆಲ್ಯೂಟ್ ಮಾಡುವಾಗ ನಾವೇನೋ ಸೈನ್ಯದಲ್ಲಿ ಇದ್ದಂತಹ ಭಾವ! ಅನಂತರ ಶಾಲೆಯಿಂದ ಪಂಚಾಯಿತಿಯವರೆಗೆ ನಮ್ಮ ಪಥ ಸಂಚಲನ. ಒಂದು ಗುಂಪು ವಂದೇ ಎಂದರೆ ಮತ್ತೂಂದು ಗುಂಪು ಮಾತರಂ ಅನ್ನೋದು, ಬೋಲೋ ಭಾರತ್ ಮಾತಾ ಕಿ ಜೈ ಎಂಬಿತ್ಯಾದಿ ಘೋಷಣೆಗಳು. ಬ್ಯಾಂಡಿನ ಗೌಜಿನಲ್ಲಿ ಊರ ಪರ್ಯಟನೆಗೆ ಹೊರಡುತ್ತಿದ್ದೆವು. ಅಲ್ಲೂ ದ್ವಜಾರೋಹಣ ಮಾಡಿ ಸಿಹಿ ಮಿಠಾಯಿ ಚಾಕಲೇಟ್ ಗಳನ್ನು ಪಡೆದು ಸಂಭ್ರಮಿಸಿ ಮತ್ತೆ ಶಾಲೆಗೆ ಬರುತ್ತಿದ್ದೆವು. ಝಂಡಾ ಊಂಚಾ ರಹೇ ಹಮಾರ ಹಾಡು ಹಾಡುತ್ತಿದ್ದರೆ ಅದೊಂದು ಬಗೆಯ ರೋಮಾಂಚನವಾಗುತ್ತಿತ್ತು.
ಎಷ್ಟು ಸುಂದರ ಆ ಬಾಲ್ಯ!! ಸ್ವಾತಂತ್ರ್ಯ ದಿನ ಬಂತೆಂದರೆ ಸಾಕು ಎಲ್ಲ ಮಕ್ಕಳ ಬಾಯಿಯಲ್ಲೂ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು ಮತ್ತು ಅವರ ಗುಣಗಾನ. ನಂತರ ಸಾಂಸðತಿಕ ಕಾರ್ಯಕ್ರಮದ ಹಬ್ಬ ನೋಡಲೆರಡು ಕಣ್ಣು ಸಾಲದಾಗಿತ್ತು. ನಂತರ ರಾಶಿ ರಾಶಿ ಚಾಕೊಲೇಟ್ ತೆಗೆದುಕೊಂಡು ಮನೆಗೆ ಬಂದು ಹಂಚಿ ತಿನ್ನುವುದೇ ಸಂಭ್ರಮ. ಆ ಮುಗ್ದ ಸಂಭ್ರಮ ಈಗ ನೋಡಲು ಸಿಗುವುದೇ ಇಲ್ಲವಲ್ಲ…
ಆದರೆ ಇಂದು ಎಲ್ಲವೂ ಬದಲಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಮೀಸಲಾಗಿಟ್ಟು ತ್ಯಾಗ ಮತ್ತು ಬಲಿದಾನದಿಂದ ನಮಗೆ ಪ್ರೇರಣೆಯಾಗಿ ನಿಂತ ಮಹನೀಯರನ್ನು ನೆನೆಯುತ್ತಾ ಜತೆಗೆ ಪ್ರತಿದಿನವೂ ಹಗಲಿರುಳೆನ್ನದೆ ದೇಶದ ಗಡಿ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ನಮ್ಮೆಲ್ಲರ ಜೀವವನ್ನು ಕಾಪಾಡುತ್ತಿರುವ ಪ್ರತಿ ಸೈನಿಕರ ಅಪಾರವಾದ ಕೊಡುಗೆಯನ್ನು ಸ್ಮರಿಸೋಣ… ರಶ್ಮಿ ಉಡುಪ ಮೊಳಹಳ್ಳಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ