ತಮ್ಮ ಮನೆಯ ಹೂ ಕುಂಡಗಳಲ್ಲೋ ಅಥವಾ ನೆಲದಲ್ಲಿ ನೆಟ್ಟ ಹೂವಿನ ಗಿಡ ಅಥವಾ ಹಣ್ಣಿನ ಗಿಡಗಳಲ್ಲಿ ಬಿಳಿ ಬಣ್ಣದ ತೆಪೆಯಂತೆ ಕಾಣುವ ಜೀವಿಗಳ ಸಮೂಹವನ್ನು ಎಲ್ಲರೂ ಗಮನಿಸಿರಬಹುದು. ಈ ಬಿಳಿಯ ತೇಪೆಗಳಂತೆ ಕಂಡು ಬರುವುದು ಆಫಿಡ್ ಕೀಟಗಳು (ಬಿಳಿ ಸಸ್ಯ ಹೇನುಗಳು). ಇವು ಸಸ್ಯಗಳ ರಸವನ್ನೇ ಆಹಾರವನ್ನಾಗಿಸಿಕೊಂಡು ಬದುಕುವ ಜೀವಿಗಳು. ಈ ಕೀಟಗಳು ಬರೀ ಸಸ್ಯಗಳ ಜೀವ ಸತ್ವವನ್ನು ಹೀರುವುದು ಮಾತ್ರವಲ್ಲ, ಹಲವು ಸಸ್ಯಗಳ ರೋಗಗಳಿಗೆ ಮೂಲವೂ ಆಗಿರುತ್ತವೆ.
ಇರುವೆಗಳಿಗೆ ಈ ಕೀಟಗಳನ್ನು ಕಂಡರೆ ಒಂದುತರಹದ ಪ್ರೀತಿ. ಇದಕ್ಕೂ ಒಂದು ಬಲವಾದ ಕಾರಣವಿದೆ. ವಿಷಯ ಏನೆಂದರೆ ಈ ಕೀಟಗಳು ಸಸ್ಯ ರಸವನ್ನು ಭಕ್ಷಿಸಿದ ಅನಂತರ ವಿಸರ್ಜಿಸುವ ‘ಹನಿಟ್ನೂ’ ಎಂಬ ಸಿಹಿ ದ್ರವವು ಇರುವೆಗಳ ಪಾಲಿನ ಪಂಚಾಮೃತ. ಹೆಸರೇ ಹೇಳುವಂತೆ ಈ ‘ಹನಿ ಟ್ನೂ’ ರುಚಿಯಲ್ಲಿ ಸಿಹಿಯಾಗಿರುವುದಲ್ಲದೇ ಇದರಲ್ಲಿರುವ ಶರ್ಕರಗಳು ಇರುವೆಗಳಿಗೆ ನೆಚ್ಚಿನ ಆಹಾರವಾಗಿದೆ. ಇದು ಇರುವೆಯ ಗುಂಪು ಹಾಗೂ ರಾಣಿ ಇರುವೆಗೆ ಶಕ್ತಿ ನೀಡುವ ಆಹಾರ ಕೂಡ ಆಗಿದೆ. ಇದೇ ಕಾರಣದಿಂದ ಈ ‘ಹನಿ ಟ್ನೂ’ವನ್ನು ಹಲವು ತಳಿಯ ಇರುವೆಗಳು ಏಫಿಡ್‌ಗಳ ಹೊಟ್ಟೆಯ ಭಾಗವನ್ನು ತನ್ನ ಮೀಸೆಗಳಿಂದ (ಆ್ಯಂಟೆನಾ) ಮೃದುವಾಗಿ ಒತ್ತುವ ಮೂಲಕ ಏಫಿಡ್‌ಗಳು ‘ಹನಿ ಟ್ನೂ’ ವಿಸರ್ಜಿಸುವಂತೆ ಮಾಡುತ್ತವೆ, ಹಾಗೂ ಈ ರಸವನ್ನು ಇರುವೆಗಳು ಸಂಗ್ರಹಿಸುತ್ತವೆ.
ತನಗೆ ಉಪಕಾರ ಮಾಡಿದ ಏಫಿಡ್‌ಗಳನ್ನು ಇರುವೆಗಳೂ ಮರೆಯುವುದಿಲ್ಲ. ತನಗೆ ಆಹಾರ ನೀಡಿದ ಏಫಿಡ್‌ಗಳನ್ನು ಇರುವೆಗಳು ಜೋಪಾನವಾಗಿ ನೋಡಿಕೊಳ್ಳುತ್ತವೆ. ಹಾಗೂ ಶತ್ರುಗಳಿಂದ ರಕ್ಷಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೇ ಎಷ್ಟೋ ಇರುವೆಗಳ ಪ್ರಜಾತಿಗಳು ಕಾಲಾನುಕಾಲಕ್ಕೆ ಏಫಿಡ್‌ಗಳನ್ನು ತಮ್ಮ ನೆಲೆಗಳತ್ತ, ಹೆಚ್ಚು ಸಸ್ಯ ರಸವನ್ನು ನೀಡಬಲ್ಲ ಸಸ್ಯಗಳತ್ತ ಹೊತ್ತೂಯ್ಯುವ ಕೆಲಸವನ್ನೂ ಮಾಡುತ್ತವೆ.
ಒಟ್ಟಿನಲ್ಲಿ ಏಫಿಡ್‌ಗಳು ಸಸ್ಯಗಳಿಗೆ ಅಪಕಾರಿಯಾದರೂ, ಇರುವೆಗಳ ಪಾಲಿಗೆ ಉಪಕಾರಿಯಾಗಿವೆ. ಈ ಮೂಲಕ ನಿಸರ್ಗದ ಜಟಿಲ ವ್ಯವಸ್ಥೆಯಲ್ಲಿ, ಪ್ರಕೃತಿ ಸೃಷ್ಟಿಸಿದ ಎಲ್ಲ ಜೀವಿಗಳು ಕೂಡ ನಿಸರ್ಗ ವ್ಯವಸ್ಥೆಗೆ ಅಗತ್ಯ ಎಂಬ ಸಂದೇಶ ನೀಡುತ್ತವೆ.
-ಅನುರಾಗ್ ಗೌಡ
ಮೂಡಿಗೆರೆ