Advertisement

ಯುವ ಕವಿಗಳ ಕಾವ್ಯ ಮಲ್ಲಿಗೆ

04:24 PM Jul 28, 2020 | Karthik A |

ಕವಿತೆಗಳು ಎಂಬುದು ಆ ಕ್ಷಣದ ಇತಿಹಾಸ. ಕಡೆಯ ವಾಕ್ಯದಲ್ಲಿ ಪೂರ್ಣವಿರಾಮ ಹಾಕಿದ ಬಳಿಕ ಅದು ಹಳೆದಯದು ಎಂಬ ಹಣೆಪಟ್ಟಿಯೊಂದಿಗೆ ಗುರುತಿಸಿಕೊಳ್ಳುತ್ತದೆ.

Advertisement

ತಮ್ಮ ಮನದಲ್ಲಿ ಆ ಕ್ಷಣ ಹೊಳೆಯುವ ಭಾವನೆಗಳಿಗೆ ಅಕ್ಷರ ರೂಪ ನೀಡುವುದು ಕವಿಗಳ ಗುಣ. ಇದು ಒಂದು ರೀತಿಯಲ್ಲಿ ಯೋಚಿಸುವುದಾರೆ ಇದು ಅವರ ಮನಸ್ಸಿನ ಕನ್ನಡಿ.

ಯುವಿ ಫ್ಯೂಷನ್‌ ಯುವ ಜನರಿಗಾಗಿ ಮೀಸಲಾಗಿರುವ ಸಂಚಿಕೆಯಾಗಿದೆ. ಈ ಬಾರಿ ಆಯ್ದ ಕವನಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

 

ಒಲವು
ಒಲವ ಮರೆತ ದನಿಯಲ್ಲಿ
ಹೇಳಲಾಗದ ಸತ್ಯವಿದೆ
ಬತ್ತಿಹೋದ ಕಂಗಳಲಿ
ಬಣ್ಣಿಸಲಾಗದ ಕನಸಿದೆ
ಮಮತೆ ಎಂಬ ಉಸಿರಿನಲ್ಲೂ
ತಾಯಿ ಎಂಬ ಹೆಸರಿದೆ
ಮಲಗಲೊಂದು ಮಡಿಲು ಎಂಬ
ಊಹಿಸಲಾಗದ ಸ್ವರ್ಗವಿದೆ
ಕಪ್ಪು ವರ್ಣದ ಕೋಗಿಲೆಯಲ್ಲಿ
ಸುಂದರವಾದ ಕಂಠವಿದೆ
ಒಣಗಿ ನಿಂತ ಮರದೆದೆಯಲ್ಲಿ
ನೀರಿಗಾಗಿ ತವಕವಿದೆ
ಅರಳಿರುವ ಹೂವು ಉದುರಿ
ಬಿಸಿಲಿನ ಬೇಗೆಗೆ ಬಾಡಿದೆ
ದೇವರ ಮುಡಿಗೆ ಸೇರುವೆ ಎಂಬ
ನಂಬಿಕೆಯೊಂದು ಕಳಚಿದೆ
ಮೌನ ಮುರಿದ ಮನಸ್ಸೇ
ಮಾತಿಗೆಂದು ಕಾದಿದೆ
ಹೃದಯದೊಳಗಿನ ಮಾತುಗಳೆಲ್ಲಾ
ಮೌನವನ್ನೇ ತಾಳಿವೆ.

Advertisement

 ರವಿ ಶಿವರಾಯಗೊಳ,ಯುವ ಕೃಷಿಕ, ಸಾಂಗ್ಲಿ, ಮಹಾರಾಷ್ಟ್ರ

 

ಮುಳುಗದ ನಕ್ಷತ್ರ
ಮೂಡಣದಿ ಬೆಳಗುವನು
ಪಡುವಣದಿ ಮುಳುಗುವನು
ದಿನವೂ ಬಿಡದೆ ಬರುವನು
ಜಗಕೆ ಬೆಳಕ ತರುವನು |

ಬೆಳ್ಳಿ ರಥದಲಿ ಬರುವನು
ಸಪ್ತಾಶ್ವಗಳ ಹಿಡಿದವನು
ದಿನಗಳ ದಿನಮಣಿ ಇವನು
ಕಾಲದ ಲೀಲಾಕರ್ತನಿವನು |

ಅಂಧಕಾರವ ಓಡಿಸುವನು
ಜಡತೆಯನು ನೀಗುವನು
ಚೈತನ್ಯವ ತುಂಬುವನು
ಜೀವಿಗಳ ಜೀವ ಇವನು |

ಮುಳುಗದ ನಕ್ಷತ್ರನಿವನು
ಸೌರಮಂಡಲದ ಒಡೆಯನಿವನು
ಕೆಂಡ ಕಾರುವ ಬೆಂಕಿಯಿವನು
ಲೋಕಕೆ ಶಕ್ತಿಯ ಮೂಲ ಇವನು|

ಶ್ರೀಧರಯ್ಯ ಉಬ್ಬಲಗಂಡಿ, ಬೆಂಗಳೂರು

ಕನಸು ಕಂಗಳ ಚೆಲುವೆ…
ಧೋ ಎಂದು ಮಳೆ ಸುರಿಯೆ
ಕನಸು ಕಂಗಳ ಚೆಲುವೆ…
ಅದೇನೋ ಲವಲವಿಕೆ ಅದೇನೋ ಖುಷಿ
ಎದ್ದು ನಡೆದೇ ಬಿಟ್ಟಳಾಕೆ ಮನೆಯಂಗಳಕೆ
ಬಿಡಿಸಿಟ್ಟ ಛತ್ರಿಯ ಹಿಡ್ಕೊಂಡು, ಬೀಳುತ್ತಿಹ ಮಳೇಲಿ
ಅತ್ತಿಂದಿತ್ತ ಇತ್ತಿಂದತ್ತ ನಾಲ್ಕು ಹೆಜ್ಜೆ ನಡೆದೇ ಬಿಟ್ಟಳಾಕೆ
ಧೋ ಎಂದು ಮಳೆ ಸುರಿಯೇ…
ನಡೆದು ಬಂದ ಹಾದಿಯ ಕಹಿಯನ್ನೆಲ್ಲ ಮರೆತು, ಮೈಮರೆತು
ಕನಸಿನ ಹಾದಿಯಲಿ ನಡೆಯುವ ಹೆಜ್ಜೆಗೆ ಗೆಜ್ಜೆ ಕಟ್ಟಿದಳಾಕೆ

ಧೋ ಎಂದು ಮಳೆ ಸುರಿಯೇ…
ಕೇಳಿಕೊಂಡಳಾಕೆ… “ಮಳೆಯೇ, ಮನುಕುಲದ ಯಾತನೆಗೆ ನೀನಾಗುವೆಯಾ ಸಂಜೀವಿನಿ’…
ಹೇಳಿಕೊಂಡಳಾಕೆ..”ಇನ್ನೇನು ಬೇಕಾಗಿಲ್ಲ, ಸಾಕಾಗಿದೆ
ಉಂಡು -ತಿಂದು- ಮಲಗಿ
ದಿನ ಬೆಳಗಾದರೆ ಸಾವು ನೋವಿನ ಸುದ್ದಿ ಕೇಳಿ

ಧೋ ಎಂದು ಮಳೆ ಸುರಿಯೇ…
ಹಂಚಿಕೊಂಡಳಾಕೆ ಮನದ ದುಗುಡವನ್ನೆಲ್ಲ…
ಹಾರೈಸಿದಳಾಕೆ….ಬದುಕು ಮೊದಲಿನಂತಾಗಲಿ
ಇದೆ ಮನದಿ ಧೈರ್ಯ , ಆತ್ಮಸ್ಥೈರ್ಯ…
ಆಶಾಭಾವ, ಜತೆಗೆ ಒಂದಿಷ್ಟು ಮಾಡಲೇಬೇಕಾದ ಕರ್ತವ್ಯಗಳು…
ಕನಸು ಕಂಗಳಾ ಚೆಲುವೆ, ಮಳೆ ನಿಲ್ಲೋ ಮೊದಲೇ ಕಣ್ಣಲ್ಲೇ ಕೇಳಿದಳಾಕೆ…
ಭರವಸೆಯ ಮಳೆ ನೀನಾಗುವೆಯಾ?


ಮಲ್ಲಿಕಾ ಕೆ., ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next