Advertisement

UV Fusion: ವ್ಯಾಪ್ತಿ ಪ್ರದೇಶದ ಹೊರಗೆ

02:54 PM May 09, 2024 | Team Udayavani |

ಟೀ…ಟೀ…ಟೀ… ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ಬಳಿಕ ಪ್ರಯತ್ನಿಸಿ ಎಂಬ ಧ್ವನಿ ಆ ಕಡೆಯಿಂದ ಕಿವಿಗೆ ಅಪ್ಪಳಿಸಿದೊಡನೆಯೇ ಅವಳ ಮುಖದಲ್ಲಿನ ನಗು ಒಮ್ಮೆಲೆ ಮಾಯವಾಯಿತು.

Advertisement

ಅದೇನೋ ಸುದ್ದಿಯನ್ನು ಹೇಳಲು ಕಾತರದಿಂದ ಅಣ್ಣನಿಗೆ ಕರೆ ಮಾಡಿದ್ದ ಅವಳು ಈಗ ಸಿಟ್ಟಿನಿಂದಲೇ ನಾನು ಪ್ರತಿ ಬಾರಿ ಕರೆ ಮಾಡಿದಾಗಲೂ ಇದೇ ರೀತಿ ಒಂದಲ್ಲ ಒಂದು ಕಾರಣ ಹೇಳುತ್ತಲೇ ಇರುತ್ತದಲ್ಲ ಈ ಹುಡುಗಿ. ಅಣ್ಣನಿಗೆ ನನಗಿಂತ ಆತನ ಕೆಲಸವೇ ಮುಖ್ಯವಾಯಿತೇ? ಎಂದು ಕೋಪದಿಂದಲೇ ಯೋಚಿಸಿ ಕೋಣೆಗೆ ಬಂದು ತನ್ನನ್ನು ತಾನೇ ಸಮಾಧಾನಪಡಿಸಿಕೊಂಡಳು.

ಹಾಗೆಯೇ ಮೇಜಿನ ಮೇಲಿದ್ದ ಖಾಲಿ ಹಾಳೆ ಹಾಗೂ ಬಾ ಇತ್ತ ಕಡೆ, ನನ್ನನ್ನು ನಿನ್ನ ಬೆರಳುಗಳಲ್ಲಿ ಬಂಧಿಸು ಎಂದು ಕೂಗಿ ಕರೆಯುತ್ತಿರುವ ಲೇಖನಿಯತ್ತ ಅವಳ ಕಣ್ಣುಗಳು ಓಡಾಡಿದವು. ಕೂಡಲೆ ಅತ್ತ ನಡೆದು ಮನಸ್ಸಿನ ಭಾವನೆಗಳನ್ನು ಆ ಹಾಳೆಯ ಮೇಲೆ ತನ್ನದೇ ಶೈಲಿಯಲ್ಲಿ ಈ ರೀತಿ ಬರೆದಳು…

ವ್ಯಾಪ್ತಿ ಎನ್ನುವಂತಹದ್ದು ಮನುಷ್ಯನು ತನಗೆ ತಾನೇ ಹಾಕಿಕೊಂಡ ಚೌಕಟ್ಟು. ಇದೇ ಚೌಕಟ್ಟಿನೊಳಗೆ ತನ್ನ ಬದುಕನ್ನು ಸಫ‌ಲತೆಯತ್ತ ನಡೆಸಬೇಕು ಎಂದು ಹೋರಾಡುತ್ತಿರುತ್ತಾನೆ. ಜವಾಬ್ದಾರಿಯುತ ಜೀವನ ಕ್ರಮಕ್ಕೆ ಚೌಕಟ್ಟಿನ ಕೆರೆಯನ್ನು ನಿರ್ಮಿಸಿ, ಶಿಸ್ತಿನ ನೀರನ್ನು ತುಂಬಿಸಿ, ಮೀನಿನಂತೆ ಜೀವಿಸುತ್ತಿದ್ದಾನೆ. ಒಂದೊಮ್ಮೆ ಚೌಕಟ್ಟು ಒಡೆದರೂ ಅಥವಾ ನೀರು ಬತ್ತಿದರೂ ಸಂಕಷ್ಟದಲ್ಲಿ ಸಿಲುಕುವುದು ಮೀನು ಮಾತ್ರ!

ಹೀಗಾಗಿ ತನ್ನ ಆವಾಸಸ್ಥಾನದ ಅಳಿವು-ಉಳಿವಿನ ಬಗ್ಗೆ ಚಿಂತಿಸುತ್ತಲೇ ಇಡೀ ದಿನ ಕಳೆಯುತ್ತದೆಯೇ ಹೊರತು ತಾನಿರುವ ಸ್ಥಳವನ್ನು ಮನಃಪೂರ್ತಿ ಆನಂದಿಸಿ ಸುಖವಾಗಿ ಜೀವಿಸುವುದಿಲ್ಲ. ಮನುಷ್ಯರಾದ ನಾವು ವ್ಯಾಪ್ತಿಯ ವಿಚಾರ ಬಂದಾಗ ನಮಗೆ ತಿಳಿಯದೆಯೇ ಎಚ್ಚರವಾಗಿ ಬಿಡುತ್ತೇವೆ. ನಮ್ಮ ಸುತ್ತಮುತ್ತ ನಮ್ಮವರೇ ಆವರಿಸಿರಬೇಕು ಎಂದು ಹಲವು ಮಂದಿ ಸ್ವಾಮ್ಯತಾಭಾವನೆಯನ್ನು ಹೊಂದಿರುತ್ತಾರೆ. ಇಲ್ಲದಿದ್ದಲ್ಲಿ ಮುಂದಿರುವ ವಸ್ತುಗಳೆಲ್ಲವೂ ಅವರ ಎದುರು ಶೂನ್ಯ ಎಂಬಂತೆ ಕಾಣುತ್ತವೆ.

Advertisement

ಹೌದು, ನಾವು ಯಾವತ್ತಿಗೂ ನಮ್ಮ ಸುತ್ತಮುತ್ತ ಒಂದು ಚಿರಪರಿಚಿತ ವಲಯವನ್ನು ಸೃಷ್ಟಿಸಿರುತ್ತೇವೆ. ಅದೇ ವಲಯದಲ್ಲಿ ಇಡೀ ಜೀವನ ಕಳೆಯಲು ಬಯಸುತ್ತೇವೆ. ಆದರೆ ತಿಳಿಯದಂತೆಯೇ ನಮ್ಮ ಸ್ವಾತಂತ್ರ್ಯಕ್ಕೆ ಸ್ವತಃ ನಾವೇ ಬೇಲಿಯನ್ನು ಹಾಕಿ ಬಂಧಿಯಾಗುತ್ತೇವೆ. ನಮ್ಮ ವ್ಯಾಪ್ತಿಯ ಆಚೆ ಏನಿದೆ ಎಂಬುದನ್ನು ಇಣುಕಿಯೂ ಕೂಡ ನೋಡುವುದಿಲ್ಲ.

ಏಕೆಂದರೆ ಹೊರಗಿರುವುದು ಭಯಾನಕ ಮುಖವಾಡ ಧರಿಸಿರುವ ಅಪರಿಚಿತ, ಮುಗ್ಧ ಸಮಾಜ. ಆದರೆ, ನಮಗೆ ಕಾಣುವುದು ಕೇವಲ ಮುಖವಾಡವೇ ಹೊರತು ಅದರ ಹಿಂದಿರುವ ಒಳ್ಳೆಯ ಬದುಕನ್ನು ಕಟ್ಟಲು ಸಹಕರಿಸುವ ಸಮಾಜವಲ್ಲ. ಇದೆಂತಹ ವಿಪರ್ಯಾಸವಲ್ಲವೇ?!

ಒಮ್ಮೆ ಚಿರಪರಿಚಿತದ ಬಂಧನದಲ್ಲಿ ಸಿಲುಕಿದ ಅನಂತರ ಕಾಲಕ್ರಮೇಣ ಒಳಗಿನ ಭಯಾನಕ ಬದುಕು ಕಾರಂಜಿಯಂತೆ ಹೊರಚಿಮ್ಮುತ್ತದೆ. ಆಗ ಬಂಧನದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಕಾಲ ಮಿಂಚಿ ಹೋಗಿರುತ್ತದೆ.

ಹೀಗಾಗಿ ಎಂದೂ ಕೂಡ ಬೇಲಿಯನ್ನು ಹಾಕುವಾಗ ಯೋಚಿಸಿ ಹಾಕಬೇಕು. ಇಲ್ಲವಾದಲ್ಲಿ ನಮ್ಮ ಅಂತ್ಯಕ್ಕೆ ನಾವೇ ನಾಂದಿ ಹಾಡಿದಂತಾಗುತ್ತದೆ.

ಇಷ್ಟು ಬರೆಯುತ್ತಿರುವಾಗ ಆಕೆಗೆ ಹಿಂದೆ ನಡೆದ ಒಂದು ಘಟನೆ ನೆನಪಾಗುತ್ತದೆ.

ಆ ಪ್ರದೇಶ ಎಷ್ಟು ದಟ್ಟವಾಗಿತ್ತೆಂದರೆ ಸೂರ್ಯನ ಕಿರಣಗಳು ಕೂಡ ನೆಲವನ್ನು ಸ್ಪರ್ಶಿಸಲು ಅವಕಾಶವಿರಲಿಲ್ಲ. ಅಂತಹ ದಟ್ಟ ಕಾಡಿನ ಮಧ್ಯೆ ಅವಳು ಮತ್ತು ಅಣ್ಣ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಹಾಗೆಯೇ ಸ್ವರ್ಗದಲ್ಲಿ ತೇಲಿದ ಅನುಭವವಾಯಿತು. ಕಣ್ಣು ಮಿಟುಕಿಸುವುದರಲ್ಲಿ ಪಕ್ಕದಲ್ಲಿಯೇ ಹಾಲುಬಿಳುಪಿನ ಧಾರೆ ಕಪ್ಪು ಬಂಡೆಗೆ ಅಭಿಷೇಕ ಮಾಡುತ್ತಿದ್ದಂತೆ ಕಾಣುತ್ತಿದ್ದ ಸುಂದರ ಜಲಪಾತ ಎದುರಾಯಿತು. ಇಬ್ಬರು ಕಾರಿನಿಂದ ಇಳಿದು ಆ ಸೌಂದರ್ಯವನ್ನು ಸವಿದರು. ಇಬ್ಬರ ಮನಸ್ಸಿನಲ್ಲೂ ನಿರಾಳ ಭಾವ ನೃತ್ಯ ಮಾಡುತ್ತಿತ್ತು. ಅದನ್ನು ನೆನೆಯುತ್ತಲೇ ಹಾಳೆಯ ಮೇಲೆ ಶಾಯಿಯ ಗುರುತುಗಳು ಮುಂದುವರೆದವು…

ಒಮ್ಮೆ ಜನಜಂಗುಳಿಯಿಂದ ದೂರವಾಗಿ ದಟ್ಟ ಅರಣ್ಯದಂತಹ ಪ್ರಶಾಂತತೆಯ ತಾಣವನ್ನು ತಲುಪಿದ ನಮ್ಮ ಶರೀರದಲ್ಲಿ ಅಕ್ಷರಶಃ ಬದಲಾವಣೆಯಗಳನ್ನು ಕಾಣುತ್ತೇವೆ. ಏಕೆಂದರೆ ಈಗ ನಾವಿರುವುದು ವ್ಯಾಪ್ತಿ ಪ್ರದೇಶದ ಹೊರಗೆ. ಇಲ್ಲಿ ನಮ್ಮ ಮನಸ್ಸು ಹಾಗೂ ಹೃದಯ ಎರಡನ್ನೂ ಯಾವುದೇ ಅನ್ಯವಸ್ತು ನಿಯಂತ್ರಿಸುವುದಿಲ್ಲ, ಯಾರ ಒತ್ತಡವೂ ಇರುವುದಿಲ್ಲ. ಬದಲಾಗಿ ಜೀವ ತುಂಬಿದ ನಿಸರ್ಗ, ಅಲ್ಲಿನ ಪ್ರಶಾಂತತೆ, ಅಲ್ಲಿನ ಚೈತನ್ಯತೆ ನಮ್ಮನ್ನು ನಾವು ನಿಯಂತ್ರಿಸಲು ಅನುವು ಮಾಡಿಕೊಡುತ್ತವೆ. ಹಾಗಾದರೆ, ವ್ಯಾಪ್ತಿ ಪ್ರದೇಶದ ಹೊರಗೆ ಹೀಗೊಂದು ಸುಂದರ ಅನುಭವ ಇದೆ ಎಂದಾದರೆ, ನಮ್ಮ ಜೀವನದಲ್ಲೂ ಅಂತಹುದೇ ಅನುಭವ ಇರಬಹುದಲ್ಲವೇ? ಯೋಚಿಸಿ. (ನೆನಪಿರಲಿ ಒಂಟಿಯಾಗಲ್ಲ)

ವ್ಯಾಪ್ತಿ ಎನ್ನುವಂತಹದ್ದು ಕೇವಲ ಸಂಬಂಧಗಳಿಗೆ ಮಾತ್ರ ಸೀಮಿತವಾದುದಲ್ಲ. ಆಸ್ತಿ-ಪಾಸ್ತಿ, ಆಸೆ, ಅನುಭವ, ಹಣ ಹೀಗೆ ಎಲ್ಲದಕ್ಕೂ ಇದೆ. ಯಾವುದಕ್ಕೆ ಯಾವಾಗ ಹೇಗೆ ಬೇಲಿ ಹಾಕಬೇಕು ಎಂದು ನಾವು ಅರಿತಿರಬೇಕು. ಕಾಡಿನಲ್ಲಿರುವ ಹುಲಿಯೂ ಕೂಡ ತನ್ನದೇ ವಲಯವನ್ನು ಹೊಂದಿದ್ದು ಆ ವ್ಯಾಪ್ತಿಯೊಳಗೆ ಬೇರೆ ಯಾರನ್ನೂ ಬರಲು ಬಿಡುವುದಿಲ್ಲ. ಆದರೆ ಅದರ ವ್ಯಾಪ್ತಿ ವಿಶಾಲವಾದದು.

ಅದನ್ನು ಹೆಚ್ಚಿಸಿ ಸಾಧಿಸುವುದು ಏನೂ ಇಲ್ಲ. ವ್ಯಾಪ್ತಿಯ ಹೊರಗೆ ನಡೆಯುವ ಆವಶ್ಯಕತೆಯೂ ಅದಕ್ಕಿಲ್ಲ. ಆದರೆ ಮನುಷ್ಯರಾದ ನಾವು ಹಾಗಲ್ಲ, ಬುದ್ಧಿಜೀವಿಗಳು. ನಮ್ಮ ಬದುಕಿಗೆ ಒಂದು ಅರ್ಥವನ್ನು ನೀಡಬೇಕು. ಹೊರಗಿನ ಸಮಾಜವನ್ನು ಅರಿತು ಅದರೊಂದಿಗೆ ಸಹಕರಿಸಿ ಬಾಳಬೇಕು. ತಾನು-ತನ್ನದು ಎಂಬ ಸ್ವಾರ್ಥ ಭಾವನೆಯನ್ನು ಬಿಟ್ಟು ನಾವು-ನಮ್ಮವರು ಎಂಬ ವಿಶಾಲ ಭಾವನೆಯನ್ನು ಬೆಳೆಸಬೇಕು. ಆಗಲೇ ಮನುಷ್ಯಕುಲಕ್ಕೆ ಒಂದು ಗೌರವ, ಅರ್ಥ ದೊರೆಯುವುದು. ಮೀನುಗಾರನ ಜಾಲ ದೊಡ್ಡದಾದಷ್ಟು, ಜಾಲದಲ್ಲಿನ ಗಂಟುಗಳು ಹೆಚ್ಚಾದಷ್ಟು ಅದರಲ್ಲಿ ಸಿಲುಕುವ ಮೀನುಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತವೆ ಅಲ್ಲವೇ? ಹೀಗಾಗಿ ನಮ್ಮ ಸಂಬಂಧಗಳ ಜಾಲವನ್ನು ಸಂಪರ್ಕದ ಕುಣಿಕೆಯ ಮೂಲಕ ಬೆಸೆದು ವ್ಯಾಪ್ತಿಗೂ ವ್ಯಾಪ್ತಿಯ ಹೊರಗಿನ ಲೋಕಕ್ಕೂ ಸೇತುವೆಯನ್ನು ಕಟ್ಟಬೇಕು. ಹೀಗಾಗಿ “ವ್ಯಾಪ್ತಿ ಪ್ರದೇಶದ ಹೊರಗೆ ಪಯಣಿಸಿ, ನಿಮ್ಮನ್ನು ಪರಿಚಯಿಸಿ’

ಹೀಗೆ ಬರೆದು ನಿಟ್ಟುಸಿರನ್ನು ಬಿಟ್ಟಳು.

ಮಧುರಾ

ಕಾಂಚೋಡು

Advertisement

Udayavani is now on Telegram. Click here to join our channel and stay updated with the latest news.

Next