Advertisement

ಮಾನವೀಯತೆ ಬಲಿಯಾಗದಿರಲಿ

09:02 PM Jul 26, 2020 | Karthik A |

ಎಲ್ಲೆಲ್ಲೂ ಕೊರೊನಾದ ಮಾತು. ಇದರಿಂದ ಬದುಕಿ ಬಂದವರದ್ದು ಒಂದು ಕಥೆಯಾದರೆ, ಸತ್ತವರ ಇನ್ನೊಂದು ಕಥೆ.

Advertisement

ಭಾರತದಲ್ಲಿ ಸಂಪ್ರದಾಯಗಳ ಆಚರಣೆ ತುಸು ಹೆಚ್ಚು. ಹುಟ್ಟಿನಿಂದ ಹಿಡಿದು ಸಮಾಧಿ ಆಗುವವರೆಗೂ ಕೂಡ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ಮಾಡುತ್ತೇವೆ. ಆ ಕಾರ್ಯಗಳನ್ನು ಕ್ರಮಬದ್ಧವಾಗಿ ಮಾಡಿದರೆ ಸತ್ತವರು ಸ್ವರ್ಗಸ್ಥರಾಗುತ್ತಾರೆ ಎಂಬ ನಂಬಿಕೆ.

ಕೊರೊನಾದಿಂದ ಬಲಿಯಾದವರಿಗೆ ಯಾವ ಕಾರ್ಯವೂ ಇಲ್ಲ, ವೈಕುಂಠ ಸಮಾರಾಧನೆಯೂ ಇಲ್ಲ. ಕೇವಲ ಇಪ್ಪತ್ತು ಜನರಿಗೆ ಮಾತ್ರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶ. ಹಾಗಿದ್ದರೆ, ಕೊರೊನಾಕ್ಕೆ ಬಲಿಯಾದವರ ಆತ್ಮಕ್ಕೆ ಶಾಂತಿ ಸಿಗದೆ, ಪ್ರೇತಗಳಾಗಿ ನಮ್ಮ ಸುತ್ತ ಸುತ್ತುತ್ತಿರಬೇಕಿತ್ತು.

ಇನ್ನೂ ಹೀನಾಯ ಸ್ಥಿತಿ ಎಂದರೆ, ಕೊರೊನಾದಿಂದಾಗಿ ಸತ್ತವರ ದೇಹವನ್ನು, ನಮ್ಮ ಊರಿಗೆ ತರಬೇಡಿ, ಈ ಜಾಗದಲ್ಲಿ ಅಂತ್ಯಕ್ರಿಯೆ ಮಾಡಬೇಡಿ ಎಂದು ತಡೆಗೋಡೆ ಹಾಕುತ್ತಿದ್ದಾರೆ. ಚೆನ್ನೈಯಲ್ಲೊಂದು ಶೋಚನೀಯ ಘಟನೆ ನಡೆದಿದೆ. ವೈದ್ಯರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ, ತಾವು ಆ ವೈರಸ್‌ಗೆ ತುತ್ತಾಗುತ್ತಾರೆ. ಅವರ ಮೃತದೇಹವನ್ನು ತಮ್ಮ ಊರಿನಲ್ಲಿ ಅಂತ್ಯಕ್ರಿಯೆ ಮಾಡಲು ಬಿಡಲಿಲ್ಲ. ಬರೀ ಚಪ್ಪಾಳೆ ಹೊಡೆದು ಗೌರವ ಸಲ್ಲಿಸಿದರೆ ಸಾಲದು, ತಮ್ಮ ಜೀವಕ್ಕೆ ಕುತ್ತು ಎಂದು ತಿಳಿದಿದ್ದರೂ ಬೇರೆಯವರ ಜೀವಕ್ಕೆ ಬೆಲೆ ಕೊಟ್ಟು ಸೇವೆ ಮಾಡುತ್ತಿರುವವರ ಬಗ್ಗೆ ಮನದಲ್ಲಿಯೂ ಗೌರವವಿರಬೇಕು.

ಇಲ್ಲವಾದಲ್ಲಿ ಅವರ ನಿಸ್ವಾರ್ಥ ಸೇವೆಯ ಬದುಕಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಮಾನವೀಯತೆ ಮರೆತು ಸ್ವಾರ್ಥರಾಗುತ್ತಿದ್ದಾರೆ. ಹುಟ್ಟಿದಾಗಿನಿಂದ ನಾನು ನನ್ನದು ಎಂದು ತನ್ನವರ ಜತೆ ಗೂಡಿನಲ್ಲಿ ಬದುಕುವ ಮನುಷ್ಯ, ಕೊರೊನಾಕ್ಕೆ ಒಳಗಾಗಿ, 14 ದಿನ ಅಜ್ಞಾತವಾಸ ಅನುಭವಿಸಿ, ತನ್ನವರನ್ನೂ ಕಾಣದೆ, ಯಾರೋ ಹೊತ್ತು ಮಣ್ಣು ಸೇರಿಸುತ್ತಿದ್ದಾರೆ. ಜೀವನದುದ್ದಕ್ಕೂ ಕೂಡಿಟ್ಟ ಹಣ ಯಾವ ಸಹಾಯಕ್ಕೂ ಬರಲಿಲ್ಲ! ಕೊರೊನಾದ ಎದುರು ಹಣದ ಬಲವೂ ಸ್ತಬ್ಧ. ಕೊರೊನಾ ಮಾನವನನ್ನು ಬಲಿ ತೆಗೆದುಕೊಳ್ಳುವುದರ ಜತೆಗೆ ಮಾನವೀಯತೆಯನ್ನೂ ಬಲಿ ತೆಗೆದುಕೊಳ್ಳದಿರಲಿ.

Advertisement

ಡಿವಿಜಿ ಅವರ ಈ ಮಾತು ಎಂದಿಗೂ ಪ್ರಸ್ತುತ
ಮರಣದಿಂ ಮುಂದೇನು? ಪ್ರೇತವೋ? ಭೂತವೋ? |
ಪರಲೋಕವೋ? ಪುನರ್ಜನ್ಮವೋ? ಅದೇನೋ! ||
ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ |
ಧರೆಯ ಬಾಳ್ಗದರಿನೇಂ?- ಮಂಕುತಿಮ್ಮ ||

ಮೇದಿನಿ ಎಚ್‌.ಆರ್‌., ವಿಶ್ವವಿದ್ಯಾನಿಲಯ, ಮೈಸೂರು

 

Advertisement

Udayavani is now on Telegram. Click here to join our channel and stay updated with the latest news.

Next