Advertisement

UV Fusion: ಮುಂಗಾರಿನ ಅಭಿಷೇಕದಲಿ ಮಿಂದೇಳಲಿ ಮನವು

04:41 PM Aug 06, 2023 | Team Udayavani |

ಕಡಲೂರಿನ ಅದ್ಭುತ ಮಳೆ, ಗುಡುಗಿನ ತಬಲಕ್ಕೆ ಸಿಡಿಲಿನ ನರ್ತನ, ಮನ ಮೋಹಕ ತಂಗಾಳಿಯ ಹಿಮ್ಮೇಳದಲ್ಲಿ ಮೇಘರಾಜನ ಹರ್ಷ ಗಾನ, ಆಗಷ್ಟೇ ಸ್ನಾನ ಮಾಡಿ ನಿಂತಂತೆ ಕಾಣುವ ತುಂಬು ಹಸುರಿನ ವನ. ನಮ್ಮೆಲ್ಲರ ಮನವು ಭಾವೋತ್ಕರ್ಷ ಹೊಂದಲು ಇನ್ನೇನು ಬೇಕು? ಬರಡು ಮನದಲ್ಲೂ ಭಾವದ ಅಲೆಗಳನ್ನು ಚಿಮ್ಮಿಸುವ ತಾಕತ್ತು ಈ ವರ್ಷಧಾರೆಗಿದೆ.

Advertisement

ಬೇಸಗೆಯ ಸುಡು ಬಿಸಿಲಿಗೆ ಬೇಸತ್ತು ಮಳೆರಾಯನ ಆರ್ಭಟಕ್ಕೆ ಕಾದು ಕೂರುವ ಎಷ್ಟೋ ಮನಗಳನ್ನು ನಾವು ಕಾಣಬಹುದು. ಮಳೆಯನ್ನು ಅದಮ್ಯವಾಗಿ ಹಂಬಲಿ ಸುವವರು ಇಂಥವರೇ ಆಗಿರಬೇಕೆಂದಿಲ್ಲ. ಮನೆ – ಮನಗಳ ಒಳ – ಹೊರಗೂ ಜಿನುಗುತಿರುವ ಸೋನೆಗಳ ನಡುವೆ ಅಂಗಳದಿ ಕಾಗದದ ದೋಣಿಗಳನು ಬಿಡುವ ಮಕ್ಕಳಿನಿಂದ ಹಿಡಿದು “ಮಾಯದಂಥ ಮಳೆ ಬಂತಣ್ಣ! ‘ ಎಂದು ಹಾಡುತ್ತಾ ಹರ್ಷಚಿತ್ತರಾಗುವ ಕೃಷಿಕರವರೆಗೂ, ಇವರೆಲ್ಲರೂ ವರುಣ – ವಸುಂಧರೆಯ ಲಾಸ್ಯ ಲಹರಿಯನ್ನು ಆನಂದಿಸುವ ಮನಸುಳ್ಳವರು.

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಮಳೆಯು ಮಹೋನ್ನತ ಪಾತ್ರ ನಿರ್ವಹಿಸುತ್ತದೆ. ಪಾಶ್ಚಿಮಾತ್ಯರ ರೀತಿ “ರೇನ್‌ ರೇನ್‌ ಗೋ ಅವೇ ಕಮ್‌ ಅಗೈನ್‌ ಅನದರ್‌ ಡೇ’ ಎನ್ನುವ ಜಾಯಮಾನ ನಮ್ಮವರದಲ್ಲ. ಕತ್ತೆ ಮದುವೆ ಮಾಡಿಸಿ ಆದರೂ ಸರಿಯೇ ಮಳೆರಾಯನಿಗೆ ವಿಶೇಷ ಪೂಜೆ ಸಲ್ಲಿಸಿ, ವೀಳ್ಯದೆಲೆ ಅರ್ಪಿಸಿ, ಧರೆಗೆ ಇಳಿದು ಬಾ! ಎಂದು ಆಮಂತ್ರಿಸುವ ಜನರು ನಮ್ಮವರು. ಇಳೆಯ ಮೈ ತೊಳೆಯಲು ತಟಪಟನೆ ಹರ್ಷ ಭಾಷ್ಪವೆಸಗುವ ಮುಂಗಾರಿನ ಅಭಿಷೇಕವ ಕಂಡು ಮಾರು ಹೋಗುವ ಮನವು ನಮ್ಮವರದ್ದು. ಪ್ರಕೃತಿಯ ಉನ್ಮಾದ ಹೆಚ್ಚಿಸಿ ಜೀವೋತ್ಸವ ಸೃಜಿಸುವ ಧಾರಾವರ್ಷದ ಆಲಾಪಕ್ಕೆ ತಲೆದೂಗುವ ತನುವೂ ನಮ್ಮವರದ್ದು.

ಹೀಗೆ ಮನಮೋಹಕ ಮಳೆಯನ್ನು ಹಂಬಲಿಸುವ ಮನಸ್ಸಿನವರ ವರ್ಗ ಒಂದೆಡೆಯಾದರೆ. “ಹಾಳಾದ್‌ ಮಳೆ, ಯಾಕಾದ್ರು ಬರುತ್ತೋ! ‘ ಎಂದು ಶಪಿಸುವ ಮನಸ್ಕರರ ವರ್ಗ ಇನ್ನೊಂದೆಡೆ. ಇವರ ದೃಷ್ಟಿಯಲ್ಲಿ ಮಳೆಯ ವ್ಯಾಖ್ಯಾನವೇ ಬೇರೆ. ಇವರಿಗೆ ಮಳೆ ಎಂದರೆ ಇಳೆಗೆ ಜೀವಶಕ್ತಿ ತುಂಬುವ ತುಂತುರು ಹನಿಯಲ್ಲ. ಬದಲಾಗಿ, ಜೀವರಾಶಿಗಳ ಎದೆ ಸೀಳಿ ಪ್ರಕೃತಿ ವಿಕೋಪಕ್ಕೆ ಎಡೆ ಮಾಡಿಕೊಡುವ ಬೆನ್ನು ಬಿಡದ ಶನಿಯಾಗಿದೆ. ಏನೂ ಅರಿಯದ ಮುಗ್ಧ ಮಕ್ಕಳಿಗೆ ಮಳೆಯ ವರ್ಣೀಯತೆಯ ಬಗ್ಗೆ ತಿಳಿಹೇಳಬೇಕಾದವರು, ಇಂದು ಮಳೆಯಿಂದ ಭಿನ್ನ- ವಿಭಿನ್ನ ರೋಗಗಳು ಹರಡುತ್ತವೆ ಎಂದು ಹೆದರಿಸಿ ಮನೆಯಲ್ಲೇ ಕಟ್ಟಿಹಾಕುವವರಾಗಿದ್ದಾ ರೆ. ಅಷ್ಟೇ ಏಕೆ ಇದಕ್ಕೆ ಪುಷ್ಟಿ ನೀಡುವಂತೆ ಚಲನಚಿತ್ರಗಳು ಸಹ ಭೂತವನ್ನೋ, ಕರಾಳ ರಾತ್ರಿಯ ಮಾಂತ್ರಿಕನನ್ನೊ, ಇಲ್ಲ ಯಾವುದಾದರೂ ಅಪಘಾತವನ್ನು ತೋರಿಸುವಾಗ ಕಡ್ಡಾಯವಾಗಿ ಮಳೆ ಬರುತ್ತಿರಬೇಕು. ಮಳೆ ಇಲ್ಲದಿದ್ದರೆ ಅಪಘಾತವೇ ಆಗೋಲ್ಲ. ಭೂತ ದೆವ್ವ ಬರೋಲ್ಲ ಅನ್ನೋ ಹಾಗೆ. ಇಂಥದ್ದನ್ನ ನೋಡಿದರೆ ಜನ ಮಳೆಯನ್ನು ಹೇಗೆ ತಾನೇ ಪ್ರೀತಿಸಿಯಾರು? ಮಳೆ ಅಂದ ತತ್‌ಕ್ಷಣ ಹೆದರಿಕೊಂಡು ಕಂಬಳಿ ಹೊದ್ದುಕೊಂಡು ಮಲಗುತ್ತಾರೆ ಅಷ್ಟೇ.

ಕೆಲವೊಮ್ಮೆ ವರುಣನ ರುದ್ರಪ್ರತಾಪ ಹೆಚ್ಚಾದಾಗ ಅಹಿತಕರ ಘಟನೆಗಳು ಆಗುವುದು ಸಹಜ. ಹಾಗೆಂದ ಮಾತ್ರಕ್ಕೆ ಎಷ್ಟೋ ರೈತರ ಹರಕೆಯ ಫ‌ಲಕ್ಕೆ ಒಲಿದು ಬಂದ ಮಳೆಯನ್ನು ಶಪಿಸಿ ಬೈದರೆ, ಮಳೆಯನ್ನೇ ನಂಬಿಕೊಂಡು ಕೂತ ಲಕ್ಷಾಂತರ ರೈತರ ಹೊಟ್ಟೆಪಾಡಿಗೆ ಬೆಂಕಿ ಹಾಕಿದ ಹಾಗಾಗುತ್ತದೆ. ಸಾವಿರಾರು ನದಿಗಳ ಜೀವನಾಡಿಯಾಗಿರುವ, ಎಷ್ಟೋ ಕವಿಕಾರರ ಸ್ಫೂರ್ತಿಯಾಗಿರುವ ವರ್ಷಧಾರೆ ಕೋಪಿಸಿಕೊಂಡು ಮರಳಿ ಬಾರದೇ ಕ್ಷಾಮದ ಪರಿಸ್ಥಿತಿ ಉಂಟಾದರೆ “ಹಾಳಾದ್‌ ಮಳೆ ಬರಬಾರದೆ ಸರಿಯಾಗಿ’ ಎಂದು ಪುನಃ ಮಳೆಯನ್ನೇ ದೂಷಿಸುವ ಮನಸ್ಸುಗಳು ನಮ್ಮಲ್ಲಿವೆ. ಕರಾವಳಿಯ ಕವಿ “ಸುಬ್ರಾಯ ಚೊಕ್ಕಾಡಿ’ಯವರು ತಮ್ಮ ಕಳೆದು ಹೋದ ನೆನಪುಗಳನ್ನು ಮಳೆಯಲ್ಲಿ ಕಾಣುತ್ತಾ ಹೀಗೆನ್ನುತ್ತಾರೆ:

Advertisement

“ಎಂಥಾ ದಿನಗಳವು ಮರೆಯಾಗಿ ಹೋದವು
ಮಿಂಚಂಥ ಕ್ಷಣಗಳವು ಇನ್ನೆಂದೂ ಬಾರವು’

ಕವಿ ಮಳೆಯಲ್ಲೂ ವಿಷಾದ ರಾಗವನ್ನು ಕಾಣುತ್ತಾರೆ. ಹೀಗೆ ಯಾರದೋ ಮಾತಿಗೆ ತಲೆಯಾಡಿಸಿ ನಾವು ನಕಾರಾತ್ಮಕ ಅಂಶಗಳನ್ನು ಬೆಳೆಸಿಕೊಂಡು, ನಮ್ಮ ಮಕ್ಕಳ ತಲೆಗೂ ಅದನ್ನೇ ತುಂಬಿಸಿ; ಭವಿಷ್ಯದಲ್ಲಿ ಶೋಕಿಸುವ ಬದಲು,ಮಳೆಯನ್ನು ದೂಷಿಸಿ ಗೋಣಗುವ ಚಟ ಬಿಟ್ಟು, ಅಳುವ ಮನಕ್ಕೂ ಸಾಂಗತ್ಯ ನೀಡುವ ಮಳೆಯಲ್ಲಿ ಮಕ್ಕಳಾಗಿ ಬೆರೆತು ಸಂಭ್ರಮಿ ಸಬೇಕು. ಮುಂಗಾರಿನ ಅಭಿಷೇಕಕೆ ನಮ್ಮೆಲ್ಲರ ಮನವು ಮಿಂದೇಳಲಿ.

*ಸ್ವಾಮಿ ಶಶಾಂಕ್‌ ಟಿ. ಎಚ್‌.ಎಂ.
ಆಳ್ವಾಸ್‌ ಕಾಲೇಜು, ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next