Advertisement

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

05:06 PM Nov 26, 2024 | Team Udayavani |

ಪ್ರತಿಯೊಬ್ಬ ಮನುಷ್ಯನಿಗೂ ಅವನು ಹುಟ್ಟಿ ಬೆಳೆದ ತಾಯಿ ನೆಲ ಎಂದರೆ ಏನೋ ಪ್ರೀತಿ ಮತ್ತು ಆಕರ್ಷಣೆ. ತನ್ನ ಜನ್ಮದಾತೆಯನ್ನು ಎಷ್ಟು ಪ್ರೀತಿಸುತ್ತಾನೋ, ಅಷ್ಟೇ ಪ್ರೀತಿ ಅಭಿಮಾನ ಅವನು ಹುಟ್ಟಿದ ಮಣ್ಣಿನ ಮೇಲೂ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಇಬ್ಬರು ತಾಯಂದಿರು ಎನ್ನುತ್ತಾರೆ. ಒಬ್ಬಳು ಜನ್ಮ ಕೊಟ್ಟವಳು, ಇನ್ನೊಬ್ಬಳು ಅವನಿಗೆ ಆಶ್ರಯವನ್ನಿತ್ತ ಜನ್ಮ ಭೂಮಿ..!!

Advertisement

ನಮ್ಮೆಲ್ಲರ ಜನ್ಮಭೂಮಿ ನಮ್ಮ ಹೆಮ್ಮೆಯ ಕರ್ನಾಟಕ. ಪ್ರತಿವರ್ಷ ನವೆಂಬರ್‌ ತಿಂಗಳಂದು ನಮ್ಮ ಕರ್ನಾಟಕ ರಾಜ್ಯದ ಉತ್ಸವವನ್ನು ಕನ್ನಡ ರಾಜ್ಯೋತ್ಸವವೆಂದು ಎಲ್ಲೆಡೆ ಸಂಭ್ರಮ ಸಡಗರಗಳಿಂದ ಆಚರಿಸುತ್ತೇವೆ.

ನವೆಂಬರ್‌ ತಿಂಗಳು ಬಂತೆಂದರೆ ಕನ್ನಡ ಹಾಡುಗಳು ಮತ್ತು ಕನ್ನಡ ಬಾವುಟವನ್ನು ಎಲ್ಲೆಂದರಲ್ಲಿ ನೋಡುತ್ತೇವೆ. ಹಳದಿ ಕೆಂಪು ಬಣ್ಣಗಳನ್ನು ಹೊಂದಿದ ನಮ್ಮ ಕನ್ನಡ ಬಾವುಟವನ್ನು ನೋಡುವುದೇ ಚೆಂದ..!! ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ಎಂದು ಕನ್ನಡ ನಾಡು ಜನ್ಮ ತಾಳಿದ ಬಗ್ಗೆ ಕವಿ ಹುಯಿಲಗೋಳ ನಾರಾಯಣರಾಯರು ಕನ್ನಡ ಗೀತೆಯನ್ನು ಅರ್ಥಪೂರ್ಣವಾಗಿ ಬರೆದಿದ್ದಾರೆ.

ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ ಎಂದು ನಿತ್ಯೋತ್ಸವದ ಕವಿ ನಿಸಾರ್‌ ಅಹಮದ್‌ ಅವರು ಹೇಳಿದ್ದಾರೆ. ಎಲ್ಲರೂ ಒಂದುಗೂಡಿ ಹಚ್ಚೇವು ಕನ್ನಡದ ದೀಪ ಎಂದು ಡಿಎಸ್‌ ಕರ್ಕಿ ಅವರು ತಿಳಿಸಿದ್ದಾರೆ. ಇನ್ನು ಅಣ್ಣಾವ್ರ ಹುಟ್ಟಿದರೇ ಕನ್ನಡ ನಾಡಲ್ಲಿಯೇ ಹುಟ್ಟಬೇಕು ಎಂದು ಅಭಿಮಾನದಿಂದ ಹಾಡಿದ್ದಾರೆ. ಇಂತಹ ಕನ್ನಡ ಗೀತೆಗಳನ್ನು ಕೇಳುವುದೇ ಮನಸ್ಸಿಗೆ ಆನಂದ..!!

ನವಂಬರ್‌ ತಿಂಗಳು ಮುಗಿದು ಡಿಸೆಂಬರ್‌ ತಿಂಗಳು ಬಂದೇಟಿಗೆ, ರಾಜ್ಯೋತ್ಸವದ ಸಂಭ್ರಮ ಕಡಿಮೆಯಾಗಿ ಕ್ರಿಸ್ಮಸ್‌ ಹೊಸ ವರ್ಷದ ಹೊಸ್ತಿಲಿಗೆ ಬಂದು ನಿಲ್ಲುತ್ತೇವೆ. ಆಗ ನಮ್ಮ ಗಮನ ಆ ಹಬ್ಬಗಳ ಕಡೆಗೆ ವಾಲುತ್ತದೆ. ಮತ್ತೆ ನಮಗೆ ಕನ್ನಡದ ಬಾವುಟ ಮತ್ತು ಕನ್ನಡದ ಗೀತೆಗಳು, ನೆನಪಾಗುವುದು ಸಾಮಾನ್ಯವಾಗಿ ಮರು ವರ್ಷದ ನವೆಂಬರ್‌ ತಿಂಗಳಿನಲ್ಲಿಯೇ..!!

Advertisement

ನವೆಂಬರ್‌ ತಿಂಗಳ ಪೂರ್ತಿ ಕೆಲವು ಸರ್ಕಲ್‌ ಗಳಲ್ಲಿ, ಸಮಾರಂಭಗಳನ್ನು ಮಾಡಿ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಕನ್ನಡ ನಾಡು-ನುಡಿಯ ಬಗ್ಗೆ ಭಾಷಣಗಳು, ಕನ್ನಡ ರಾಜ್ಯೋತ್ಸವದ ಹಾಡುಗಳು, ಕನ್ನಡ ಚಲನಚಿತ್ರದ ಗೀತೆಗಳು, ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಈ ರೀತಿ ಕನ್ನಡತನವನ್ನು ಕಾರ್ಯಕ್ರಮಗಳ ಮೂಲಕ ಸಾರುವುದು ಒಳ್ಳೆಯದೇ. ಆದರೆ ಕನ್ನಡ ರಾಜ್ಯೋತ್ಸವವೆಂದರೆ ಇಷ್ಟಕ್ಕೆ ಸೀಮಿತವೇ ಎಂಬ ಪ್ರಶ್ನೆಯು ನಮ್ಮೆಲ್ಲರನ್ನು ಕಾಡುವುದು ಸಹಜ. ಹಾಗಾದರೆ ಕನ್ನಡತನವನ್ನು ಉಳಿಸಿ ಬೆಳೆಸಬೇಕೆಂದರೆ ಏನು ಮಾಡಬೇಕೆಂದು ಕೇಳಿದರೆ, ಉತ್ತರ ಬಲು ಸುಲಭ..!!

ಯಾವುದೇ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂದರೆ ಅದನ್ನು ಬಳಸುತ್ತಲೇ ಇರಬೇಕು. ಉದಾಹರಣೆಗೆ ಸಂಸ್ಕೃತ ಭಾಷೆ. ಎಷ್ಟೋ ಶಾಲೆಗಳಲ್ಲಿ ಇನ್ನೂ ಸಹ ಮೊದಲನೇ ಭಾಷೆಯಾಗಿ ಮಕ್ಕಳು ಓದುತ್ತಾರೆ. ಆದರೆ ಅದರಲ್ಲಿಯೇ ಸರಾಗವಾಗಿ ವ್ಯವಹರಿಸಲು ಎಲ್ಲರಿಗೂ ಸಾಧ್ಯವೇ..? ಖಂಡಿತ ಇಲ್ಲ. ಏಕೆಂದರೆ ಆ ಭಾಷೆಯು ಹಲವು ಜನರಿಗೆ ಗೊತ್ತಿಲ್ಲ. ಬರೀ ಪುಸ್ತಕ ಓದಲಷ್ಟೇ ಅದು ಸೀಮಿತಗೊಂಡಿದೆ. ಹಾಗಾಗಿ ದಿನನಿತ್ಯ ಬಳಸುವ ಭಾಷೆಯಾಗಿ ಅದು ಉಳಿದಿಲ್ಲ. ಆದ್ದರಿಂದ ನಮ್ಮ ಕನ್ನಡ ಭಾಷೆಯು ಅದರ ಛಾಪನ್ನು ಉಳಿಸಿಕೊಂಡು ಸತ್ವಯುತವಾಗಿ ಇರಬೇಕೆಂದರೆ ಕನ್ನಡ ಅಭಿಮಾನಿಗಳಾದ ನಾವು ಸ್ವತ್ಛ ಕನ್ನಡದಲ್ಲಿ ಮಾತಾಡಬೇಕು.

ನದಿ ಹರಿಯುತ್ತಿದ್ದರೆ ಮಾತ್ರ ಜೀವಂತಿಕೆ ಇದೆ ಎನ್ನಬಹುದು. ಅದೇ ರೀತಿ ಮಾತೃ ಭಾಷೆ ಕನ್ನಡದಲ್ಲಿ ಮಾತುಗಳನ್ನು ಸ್ವತ್ಛಂದವಾಗಿ, ಸ್ವತ್ಛವಾಗಿ ಆಡುತ್ತಿದ್ದರೆ ಮಾತ್ರ ಕನ್ನಡ ಭಾಷೆಯು ಇನ್ನೂ ಬೆಳೆಯುತ್ತಾ ಹೋಗುತ್ತದೆ.

ಕವಿ ಕುವೆಂಪು ಅವರು ಹೇಳಿರುವಂತೆ ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು..!! ಎಂಬಂತೆ ನಾವು ಯಾವುದೇ ಜಿಲ್ಲೆ, ಯಾವುದೇ ರಾಜ್ಯ ಅಥವಾ ಕೆಲಸದ ನಿಮಿತ್ತ ಯಾವುದೇ ದೇಶಕ್ಕೆ ವಲಸೆ ಹೋದರೂ ಸಹ ನಮ್ಮ ತನು ಮನವೆಲ್ಲಾ ಕನ್ನಡವಾಗಿಯೇ ಇರಬೇಕು.

ವ್ಯಾವಹಾರಿಕವಾಗಿ ಆಂಗ್ಲ ಭಾಷೆಯನ್ನು ಉಪಯೋಗಿಸಿದರೂ ಸಹ ನಮ್ಮ ಹೃದಯದಲ್ಲಿ ಕನ್ನಡವೇ ಯಾವಾಗಲೂ ನೆಲೆಸಿರಬೇಕು. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ನಾಣ್ಣುಡಿಯನ್ನು ಎಂದಿಗೂ ಮರೆಯಬಾರದು..!!

ಕನ್ನಡ ಸಾಹಿತ್ಯವನ್ನು ಓದುವುದರ ಮುಖೇನ, ಕನ್ನಡ ದಿನಪತ್ರಿಕೆಗಳನ್ನು ಮನೆಗಳಿಗೆ ತರಿಸಿ ಓದುವುದರಿಂದ, ಕನ್ನಡ ಭಾಷೆಯಲ್ಲಿ ಪ್ರೌಢಿಮೆಯನ್ನು ಗಳಿಸಲು ಪ್ರಯತ್ನಿಸಬಹುದು. ಎಷ್ಟೋ ಕವಿಗಳು, ಮಹನೀಯರು ಕನ್ನಡ ಸಾಹಿತ್ಯದ ಲೋಕಕ್ಕೆ ಅಗಾಧವಾದ ಜ್ಞಾನ ಭಂಡಾರವನ್ನು ಕೊಟ್ಟಿಕೊಟ್ಟಿದ್ದಾರೆ. ಕನ್ನಡಿಗರಾದ ನಾವು ಅಂತಹ ಪುಸ್ತಕಗಳನ್ನು ಓದುವುದರ ಮೂಲಕ ನಮ್ಮ ಜ್ಞಾನದ ಹರಿವನ್ನು ಹೆಚ್ಚಿಸಿಕೊಳ್ಳಬೇಕಿದೆ.

ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿಕೊಂಡ ಶ್ರೀಮಂತ ಭಾಷೆ ನಮ್ಮ ಕನ್ನಡ. ಇಂತಹ ಹೆಮ್ಮೆಯ ಕನ್ನಡ ಭಾಷೆಯನ್ನು, ಸುಂದರ ಕರ್ನಾಟಕ ರಾಜ್ಯವನ್ನು ನಾವೆಲ್ಲರೂ ಕಾಪಾಡಿಕೊಳ್ಳಬೇಕಿದೆ.

ಕನ್ನಡಾಂಬೆಯ ಹೆಮ್ಮೆಯ ಮಕ್ಕಳಾದ ನಾವು ಕನ್ನಡ ನಾಡು, ಕನ್ನಡ ಭಾಷೆಯನ್ನು ಎಂದೆಂದಿಗೂ ಗೌರವಿಸಬೇಕಿದೆ. ಯಾವುದೇ ತಾತ್ಕಾಲಿಕ ಮೋಹಕ್ಕೂ ಪರವಶವಾಗದೆ, ಎಂದೆಂದಿಗೂ ಕನ್ನಡ ತಾಯಿಯ ಮಕ್ಕಳಾಗಿಯೇ ಇರಬೇಕಿದೆ.

ಅನೇಕ ಕಾನ್ವೆಂಟ್‌ ಮಕ್ಕಳು ಕನ್ನಡ ತಮಗೆ ಕಷ್ಟವೆನ್ನುತ್ತಾ ತಪ್ಪು ತಪ್ಪಾಗಿ ಕನ್ನಡ ಬರೆಯುವುದನ್ನು ನೋಡಬಹುದು. ಕಲಿಕೆ ಎಂದಿಗೂ ನಿರಂತರವಾಗಿರುವುದರಿಂದ ಕನ್ನಡವನ್ನು ಸ್ವತ್ಛವಾಗಿ ಓದುವುದನ್ನು, ಬರೆಯುವುದನ್ನು ಕಲಿಯಲು ಪೋಷಕರಾದ ನಾವು ಕಡ್ಡಾಯವಾಗಿ ಪ್ರೋತ್ಸಾಹಿಸಬೇಕಿದೆ.

ಮಾಹಿತಿ ಕೊರತೆಯಿಂದಲೋ, ಸೋಮಾರಿತನದಿಂದಲೋ ಅಥವಾ ಇದೇ ಸರಿ ಎಂಬ ಧೋರಣೆಯಿಂದಲೋ ಇತ್ತೀಚೆಗೆ ಕನ್ನಡವನ್ನು ಆಡು ಭಾಷೆಯಲ್ಲಿ ಮಾತಾಡುವಾಗ ಭಾಷಾ ಪ್ರಯೋಗದಲ್ಲಿ ತಪ್ಪು ನುಸುಳಿ, ಕೇಳಲು ಅಸಹನೀಯವೆನಿಸುತ್ತದೆ. ಕೆಲವರಂತೂ ಕನ್ನಡ ಭಾಷೆ ಒಂದೊಂದು ಪ್ರದೇಶಗಳಲ್ಲಿ ಒಂದೊಂದು ರೀತಿ ಮಾತಾಡುತ್ತಾರೆ. ಹಾಗಾಗಿ ಆಡು ಭಾಷೆ ಕನ್ನಡವನ್ನು ಈ ರೀತಿಯೂ ಮಾತಾಡಬಹುದು ಎಂದು ತಮಗೆ ತಾವೇ ಸಮಾಧಾನಿಸಿಕೊಳ್ಳುತ್ತಾರೆ..!!

ಆದರೆ ಇದರಿಂದ ಒಂದು ಭಾಷೆಯ ಸೌಂದರ್ಯವನ್ನು, ಅದರ ಸೊಗಡನ್ನು ನಾವು ಕಿತ್ತುಕೊಳ್ಳುತ್ತಿದ್ದೇವೆ ಎಂದು ಅನಿಸುತ್ತದೆ. ಸ್ವತ್ಛವಾಗಿ ಅಲ್ಪಪ್ರಾಣ- ಮಹಾಪ್ರಾಣಗಳನ್ನು ಬೇಕಾದ ಕಡೆ ಬಳಸುತ್ತಾ ಮಾತಾಡುವುದು ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಿದೆ.

ಪೂರ್ತಿ ಭಾಷೆಯೇ ಗೊತ್ತಿದ್ದವನಿಗೆ ಇಂತಹ ಚಿಕ್ಕ ಪುಟ್ಟ ತಪ್ಪುಗಳನ್ನು ತಿದ್ದಿಕೊಂಡು ಕನ್ನಡ ಭಾಷೆಯಲ್ಲಿ ಮಾತಾಡಿದರೆ, ನಮಗೂ ಒಳ್ಳೆಯದು ಮತ್ತು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೂ ಒಳ್ಳೆಯದು..!!

ಬಾರಿಸು ಕನ್ನಡ ಡಿಂಡಿಮವ ಎಂದು ಜನರಲ್ಲಿ ಕನ್ನಡದ ಕಂಪನ್ನು ವರ್ಷಪೂರ್ತಿ ಪಸರಿಸಿ, ಕನ್ನಡ ಭಾಷೆ ಮತ್ತು ಕನ್ನಡ ನೆಲವನ್ನು ಪ್ರೀತಿ ಅಭಿಮಾನಗಳಿಂದ ನೋಡಿಕೊಂಡರೆ, ಅದೇ ನಾವು ಕನ್ನಡಾಂಬೆಗೆ ಸಲ್ಲಿಸುವ ಪ್ರೀತಿಯ ನಮನವಾಗಿದೆ..!!

-ಅಚಲ ಬಿ. ಹೆನ್ಲಿ

ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next