Advertisement

UV Fusion: ನಿಷ್ಕಲ್ಮಶ ಮನ ನಮ್ಮದಾಗಲಿ

02:31 PM May 04, 2024 | Team Udayavani |

ಅದೊಂದು ಮಹಾನಗರ. ಅಲ್ಲಿನ ಒಂದು ಮನೆಯ ಮಾಲಕ ಚಂದದ ಬೆಕ್ಕೊಂದನ್ನು ಅತ್ಯಂತ ಪ್ರೀತಿ, ಕಾಳಜಿಯಿಂದ ಸಾಕಿದ್ದ. ನೋಡಲು ಬಲು ಮುದ್ದಾಗಿದ್ದ ಆ ಬೆಕ್ಕು ಎಲ್ಲರಿಗೂ ಅಚ್ಚುಮೆಚ್ಚು. ಯಾರಿಗೂ ತೊಂದರೆ ಕೊಡದೆ, ಎಲ್ಲರ ಪ್ರೀತಿಯನ್ನು ಗಳಿಸಿತ್ತು. ಎಂದೂ ಮನೆಯ ಗೇಟನ್ನೇ ದಾಟದ ಆ ಬೆಕ್ಕು ಒಂದು ದಿನ ಇದ್ದಕ್ಕಿದ್ದಂತೆಯೇ ದಾರಿ ತಪ್ಪಿ ವಠಾರದ ತುಂಬೆಲ್ಲಾ ತಿರುಗಲಾರಂಭಿಸಿತು.

Advertisement

ಬೀದಿ ನಾಯಿಗಳಿಂದ ತುಂಬಿಹೋಗಿದ್ದ ಆ ವಠಾರದಲ್ಲಿ, ಬೆಕ್ಕು ಬೀದಿನಾಯಿಗಳಿಗೆ ಆಹಾರವಾಗುತ್ತದೆಯೇನೋ ಎಂಬ ಕಾಳಜಿ ಅದನ್ನು ನೋಡಿದ ಜನರ ಮನದಲ್ಲಿ ಭಯ ಮೂಡಿತು. ತತ್‌ಕ್ಷಣವೇ ಬೆಕ್ಕಿನ ಮಾಲಕನನ್ನು ಸಂಪರ್ಕಿಸಿದ ಜನರು, ಬೆಕ್ಕನ್ನು ಸುರಕ್ಷಿತವಾಗಿ ಮತ್ತೆ ಮನೆಸೇರುವಂತೆ ಮಾಡಿದರು. ಇಲ್ಲಿ ಬೆಕ್ಕು ಒಂದು ನಿದರ್ಶನ ಮಾತ್ರ. ಒಳ್ಳೆಯತನ ನಮ್ಮಲ್ಲಿದ್ದರೆ ಸುತ್ತಮುತ್ತಲಿನ ಪ್ರಪಂಚ ಎಷ್ಟೇ ಕೆಟ್ಟದಾಗಿದ್ದರೂ ಸಹಾಯ ಮಾಡುವ ಕೈಗಳು ನಮ್ಮ ಜತೆಗಿರುತ್ತವೆ.

ಬೆಕ್ಕನ್ನು ಹೊರಗಿನವರು ಬೀದಿ ನಾಯಿಯಿಂದ ರಕ್ಷಿಸಿದಂತೆ ನಮ್ಮನ್ನೂ ಕೂಡ ಅಪಾಯದ ಅಂಚಿನಲ್ಲಿ ಕಾಪಾಡಲು ಭಗವಂತ ಒಂದಲ್ಲಾ ಒಂದು ರೂಪದಲ್ಲಿ ಸಹಾಯದ ಹಸ್ತಗಳನ್ನು ಸೃಷ್ಠಿಸಿರುತ್ತಾನೆ. ನಮ್ಮ ದೈನಂದಿನ ಬದುಕಿನಲ್ಲಿ ಪರಿಶುದ್ಧ ಜೀವನ, ನಿರ್ಮಲವಾದ ಮನಸ್ಸು, ಪ್ರೀತಿ – ವಿಶ್ವಾಸದ ಬಾಳ್ವೆ ನಮ್ಮದಾಗಿದ್ದಲ್ಲಿ ಮಾತ್ರ ಕಠಿನ ಪರಿಸ್ಥಿತಿಯಲ್ಲಿ ನಮಗಾಗಿ ಮಿಡಿಯುವ ಮನಗಳು ಜತೆಯಾಗಿ ನಮ್ಮೊಂದಿಗಿರುತ್ತವೆ.

ನಮ್ಮೊಳಗೆ ಸ್ವಾರ್ಥ, ಅಸೂಯೆ, ಅಪನಂಬಿಕೆಗಳಂತಹ ನಕಾರಾತ್ಮಕ ಧೋರಣೆಗಳು ಬೀಡುಬಿಟ್ಟಿದ್ದರೆ, ಸಮಾಜದಲ್ಲಿ ನಮ್ಮ ಸೋಲಿನ ದಿನಗಳಲ್ಲಿ ಯಾರೂ ಸ್ಪಂದಿಸುವುದಿಲ್ಲ. ಹಗಲು – ರಾತ್ರಿಗಳು ಹೇಗೆ ಸಹಜವೋ, ಕಷ್ಟಗಳೂ ಅಂತೆಯೇ ಪ್ರತೀ ಮನುಷ್ಯನಿಗೂ ಬರುತ್ತವೆ ಎಂಬುದನ್ನು ಸದಾ ನಮ್ಮೊಳಗೆ ಎಚ್ಚರಿಕೆಯ ಗಂಟೆಯಂತೆ ಇಟ್ಟುಕೊಂಡು ನಿಷ್ಕಲ್ಮಶ ಮನದಿಂದ ಜೀವಿಸಬೇಕು.

ಕುಂದದೆಂದಿಗುಮೆನ್ನಿಸುವ ಮನದ ಕಾತರತೆ |

Advertisement

ಯೆಂದೊ ತಾನೇ ಬಳಲಿ ತಣ್ಣಗಾಗುವುದು ||

ಮಂದದಾ ಕಾರ್ಮೋಡ ಬಿರಿದು ರವಿ ಬೆಳಗುವನು |

ಅಂದಿನಾ ಸುಖವೆ ಸುಖ ­   ಮಂಕುತಿಮ್ಮ |

ದಪ್ಪ ಮತ್ತು ದಟ್ಟವಾದ ಕಾರ್ಮೋಡ, ಮಳೆ

ಸುರಿದೋ ಅಥವಾ ಗಾಳಿಯ ಆರ್ಭಟಕ್ಕೋ

ಚದುರಿಹೋಗಿ ಸೂರ್ಯನ ಬೆಳಕು ಮತ್ತೆ ಬೆಳಗುವಂತೆ, ಎಂದಿಗೂ ಕಡಿಮೆಯಾಗುವುದೇ ಇಲ್ಲವೇನೋ ಎನ್ನುವ ಮನಸ್ಸಿನ ಕಳವಳ, ಕಾತರತೆ, ತಾನೇ ತಾನಾಗಿ ಕಡಿಮೆಯಾಗಿ ಮನಸ್ಸಿಗೆ ನಿರಾಳವಾದಾಗ ನಮಗಾಗುವ ಸುಖವೇ, ನಿಜವಾದ ಸುಖ. ಅಂತಹ ನಿರಾಳ ಮನಸ್ಸು ಪಡೆಯಲು ನಾವೂ ಕೂಡ ಯಾರಿಗೂ ಕೇಡು ಬಯಸದೆ ಬದುಕುವ ಮನಸ್ಥಿತಿ ನಮ್ಮದಾಗಿಸಿಕೊಳ್ಳೋಣ.

ಅನೀಶ್‌ ಬಿ. ಕೊಪ್ಪ

ಪಿ.ಇ.ಎಸ್‌. ವಿಶ್ವವಿದ್ಯಾಲಯ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next