ಜಗತ್ತು ನಾವಂದುಕೊಂಡತ್ತಿಲ್ಲ. ಕಾಲಚಕ್ರ ಬದಲಾದಂತೆ ಮನುಷ್ಯನ ಮನಸ್ಥಿತಿಯೂ ಬದಲಾಗುತ್ತಿದೆ. ಅಲ್ಲಾ ಈ ದುಬಾರಿ ದುನಿಯಾದಲ್ಲಿ ದುಡ್ಡಿಗಿರುವ ಬೆಲೆ ಬೇರೆ ಯಾವುದಕ್ಕೆ ಇದೆ ಹೇಳಿ..? ತಂತ್ರಜ್ಞಾನದ ಗಿರಣಿಗೆ ಬಿದ್ದು ಮಾನವೀಯ ಸಂಬಂಧಗಳೂ ಇಂದು ಅಪ್ಪಚ್ಚಿಯಾಗುತ್ತಿದೆ. ದುಡ್ಡು, ಸಂಪತ್ತು, ಅಧಿಕಾರ, ಆಸ್ತಿಯ ಮುಂದೆ ಸಂಬಂಧ, ಮಾನವೀಯತೆ, ಗೌರವ ತೃಣಸಮಾನವಾಗಿದೆ. ಕೆಟ್ಟು ಹೋಗುತ್ತಿರುವ ಸಮಾಜದಲ್ಲಿ ಒಳ್ಳೆತನಕ್ಕೆ ಬೆಲೆ ಇಲ್ಲದ ಈ ಕಾಲಘಟ್ಟದಲ್ಲಿ ಒಳ್ಳೆಯವರಾಗಿ ಇದ್ದುಕೊಂಡು ಬದುಕು ನಡೆಸುವುದು ಕಷ್ಟವಾಗಿದೆ. ಸಮಾಜ ನಾವಂದುಕೊಂಡಂತೆ ಇಲ್ಲ ಅಲ್ಲವೇ…?
ಹೆತ್ತ ಕಂದಮ್ಮನದ್ದೇ ಉಸಿರು ನಿಲ್ಲಿಸುವ ಹೆತ್ತಬ್ಬೆ, ನಂಬಿಕೆಯಿಟ್ಟು ಪ್ರೀತಿಸಿದ ಪ್ರೇಯಸಿಯನ್ನೇ ಕತ್ತರಿಸಿ ನಾಲ್ಕೆçದು ಭಾಗ ಮಾಡುವ ಪ್ರಿಯತಮ….ಅಲ್ಲಾ..ಎಲ್ಲಿದೆ ಹೇಳಿ ನಿಜವಾದ ಸಂಬಂಧ..? ಚರಂಡಿಯಲ್ಲಿ ಹರಿಯುವ ಕೊಚ್ಚೆ ನೀರಿನಲ್ಲಿ ಸಿಕ್ಕಿಕೊಂಡಿರುವ ತ್ಯಾಜ್ಯದಂತೆ ಬದುಕಾಗಿದೆ ಅಲ್ಲವೇ….? ಅಗತ್ಯವಿಲ್ಲದಿದ್ದರೆ ಕಣ್ಣೆತ್ತಿಯೂ ನೋಡದ (ನಾವು ಅಂದುಕೊಂಡ) ನಮ್ಮವರನ್ನು ಕಂಡರೆ ಶಾಕ್ ಆಗುತ್ತದೆ. ಇವರೇ ಹೀಗಾದರೆ ಸಮಾಜದಲ್ಲಿ ಯಾರನ್ನಾದರೂ ಹೇಗೆ ನಂಬುವುದು…? ಪರಿಸ್ಥಿತಿ ಹಲವರನ್ನು ಪರಿಚಯಿಸುವ ಪರಿ ವಿಭಿನ್ನವಾಗಿದ್ದಾಗಲೇ ಬದುಕು ವಿಚಿತ್ರವಿದೆ ಅನಿಸೋದು…ಅದರಿಂದ ಇನ್ನೇನೋ ಪಾಠವನ್ನು ನಾವೂ ಕಲಿಯೋದು…
ಬೆಳಗ್ಗೆ ಎದ್ದರೆ ಸಾಕು. ಸಮಯದ ಜತೆ ನಾವೂ ಓಡಲು ಶುರುಮಾಡಿಬಿಡುತ್ತೇವೆ. ಆಫೀಸ್, ಕೆಲಸ, ಮೀಟಿಂಗ್, ಸೆಮಿನಾರ್ ಮತ್ತೂಂದು ಮಗದೊಂದು ಎನ್ನುವಷ್ಟರಲ್ಲಿ ಕತ್ತಲೆಯಾದದ್ದೇ ಗೊತ್ತಾಗೋದಿಲ್ಲ. ಆಯಾಸದಿಂದ ಮನೆಗೆ ಬಂದು ನಮ್ಮ ‘ಜೀವ-ಜೀವನ’ ಎಂದುಕೊಂಡಿರುವ ಮೊಬೈಲ್ ಲೋಕಕ್ಕೆ ಕಾಲಿಟ್ಟು ನಮಗೇ ತಿಳಿಯದೆ ನಿದ್ರೆಗೆ ಜಾರಿದರೆ ಮತ್ತೆ “ನಾಳೆ’ಯ ದಿನಚರಿ ಪ್ರಾರಂಭ. ಇನ್ನು ಮಕ್ಕಳ ಶಿಕ್ಷಣ, ಸಂಗಾತಿಯೊಡನೆ ಭಾವನೆಯ ವಿನಿಮಯ, ಒಟ್ಟಿಗೆ ಕೂತು ರುಚಿಯಾದ ಭೋಜನ…ಇದೆಲ್ಲ ಎಲ್ಲಿಂದ ಬಂತು ಹೇಳಿ….
ಸೂರ್ಯ ಅಸ್ತಮಿಸುವ ಸುಂದರ ಸಂಜೆಯಲ್ಲಿ ಹೀಗೆ ಸುಮ್ಮನೆ ಒಂದು ಪ್ರಶಾಂತ ಜಾಗದಲ್ಲಿ ಕೂತಿದ್ದೆ ಮೌನವನು ಅನುಭವಿಸುವ ಆಸೆಯಲ್ಲಿ. ಆದರೆ ನನ್ನ ಸುತ್ತ ಓಡಾಡುತ್ತುರುವ ಜನರ ಗದ್ದಲವಿಹ ಮಾತ ಪರಿಯ ಕಂಡು ಏನೇನೋ ಸುಮ್ಮನೆ ಗೀಚಿದೆ. ಆದರೂ ವಾಸ್ತವವಿರಬಹುದೇನೋ….
-ಅರ್ಪಿತಾ ಕುಂದರ್
ಮಂಗಳೂರು