Advertisement

UV Fusion: Independence Day-ಸ್ವಾತಂತ್ರ್ಯವನ್ನು ಕಳೆದುಕೊಂಡದ್ದು ಯಾವಾಗ?

03:05 PM Aug 15, 2023 | Team Udayavani |

ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಜನಗಳ ತಿನ್ನುವ ಬಾಯಿಗೆ ಬಂತು, ಲೂಟಿಗಾರರ ಜೇಬಿಗೆ ಬಂತು, ಮಹಡಿ ಮನೆಗಳ ಸಾಲಿಗೆ ಬಂತು, ಕೋಟ್ಯಾಧೀಶರ ಕೋಣೆಗೆ ಬಂತು 47ರ ಸ್ವಾತಂತ್ರ್ಯ.

Advertisement

ನಾವೆಲ್ಲ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಇದ್ದೇವೆ. ಆಗಸ್ಟ್‌ 15, 1947ರಂದು ಸ್ವಾತಂತ್ರ್ಯ ಸಿಕ್ಕಿದೆ ಅನ್ನುವ ಭಾರತೀಯರೆಲ್ಲರೂ ಯೋಚಿಸುವ ಪ್ರಶ್ನೆ ಒಂದಿದೆ. ಏನೆಂದರೆ ಸ್ವಾತಂತ್ರ್ಯವನ್ನು ಕಳೆದುಕೊಂಡದ್ದು ಯಾವಾಗ ಹಾಗಾದರೆ? ಇದು ನಮ್ಮನ್ನು ಶತ-ಶತಮಾನಗಳಷ್ಟು ಕಾಲ ಹಿಂದಕ್ಕೆ ಕರೆದೊಯ್ಯುತ್ತದೆ. ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡೆವು ಎನ್ನುವುದಾದರೆ ಅವರಿಗಿಂತ ಮುನ್ನ ಡಚ್ಚರು, ಫ್ರೆಂಚರು, ಪೋರ್ಚುಗೀಸರು ಭಾರತವನ್ನು ಆಕ್ರಮಿಸಿಕೊಂಡಿದ್ದರು. ಮತ್ತೂ ಹಿಂದಕ್ಕೆ ತಿರುಗಿ ನೋಡಿದರೆ 1498ರಲ್ಲಿ ವಾಸ್ಕೋಡಿಗಾಮ ಜಲಮಾರ್ಗವನ್ನು ಕಂಡುಹಿಡಿಯಲಿಲ್ಲ ಅಂದರೆ ಸ್ವಾತಂತ್ರ್ಯ ಕಳೆದುಕೊಳ್ಳುವ ಪ್ರಸಂಗವೇ ಇರುತ್ತಿಲಿಲ್ಲ ಅನ್ನುವ ವಿಚಾರ ತಲೆಗೆ ಬರಬಹುದು.

ಆದರೆ ಇಲ್ಲಿ ಒಂದು ವಿಚಾರವನ್ನು ಮರೆತು ಬಿಟ್ಟಿದ್ದೇವೆ. ಏನಪ್ಪಾ ಅಂದರೆ ಘಝನಿ ಮಹಮ್ಮದ್‌, ಘೋರಿ ಮಹಮ್ಮದ್‌ 12ನೇ ಶತಮಾನದ ಹೊಸ್ತಿಲಲ್ಲಿ ಭಾರತದ ಸಂಪತ್ತನ್ನು ಲೂಟಿ ಮಾಡಿದಾಗ ಕಳೆದುಕೊಂಡೆವೆ ಅಂದ್ರೆ ನಿಜಕ್ಕೂ ಉತ್ತರ ಇಲ್ಲ. ನಮ್ಮನ್ನು ನಾವು ಆಳಕ್ಕೆ ತೆಗೆದುಕೊಂಡು ಹೋದರೆ ಇದೊಂದು ದೊಡ್ಡ ಇತಿಹಾಸವಾಗಿದೆ. ಅಗೆದಷ್ಟು ಆಳಕ್ಕೆ ಹೋಗುತ್ತೇವೆ. ಇದೆಲ್ಲವನ್ನು ಮೀರಿದ ಚೇತೋಹಾರಿ ಶಕ್ತಿಯಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ರಕ್ತಕ್ರಾಂತಿಯಿಂದ ಸ್ವಾತಂತ್ರ್ಯವನ್ನು ಬ್ರಿಟಿಷರಿಂದ ಪಡೆಯಲು ಯಶಸ್ವಿಯಾದೆವು.

ದುರ್ದೈವ ಏನಂದರೆ ಬ್ರಿಟಿಷರು ಸ್ವಾತಂತ್ರ್ಯವನ್ನು ನೀಡಿದರು ಸಹ ನಮ್ಮೊಳಗಿನ ರಾಜಕೀಯ ನಾಯಕರು ನಮಗೆ ನಿಜವಾದ ಸ್ವಾತಂತ್ರವನ್ನು ನೀಡಲಿಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ ಬ್ರಿಟಿಷರ ದಾಸ್ಯದ ಸಂಕೋಲೆಯನ್ನು ಕಳಚಿಕೊಂಡು ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಬಂಧಿತವಾಗಿದ್ದೇವೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂದು ಭಾಷಣದಲ್ಲಿ ಬಡಾಯಿ ಕೊಚ್ಚಿಕೊಂಡು, ಬಂದದ್ದೆಲ್ಲವನ್ನು ಪಂಗನಾಮ ಹಾಕಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಸರಕಾರ ಇರುವ ತನಕ ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗಲು ಸಾಧ್ಯವಿಲ್ಲ. ಅಂದರೆ ಭಾರತೀಯರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಗಲು ಸಾಧ್ಯವಿಲ್ಲ.

ಕೆಲವರಂತೂ ಸ್ವಾತಂತ್ರ್ಯ ಎಂಬ ಪದವನ್ನು ತಮಗೆ ಇಷ್ಟ ಬಂದಂತೆ ಬಳಸುತ್ತಾರೆ. ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರ ಎಂಬ ಅರ್ಥದಲ್ಲಿ ಬಳಸುತ್ತಾರೆ. ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅವೆರಡು ವಿರೋಧಭಾಸದ ಶಬ್ಧಗಳು. ಸ್ವಾತಂತ್ರ್ಯ ಸಂವಿಧಾನ ಬದ್ಧವಾದದ್ದು. ಅದಕ್ಕೆ ಕಾನೂನಿನ ಚೌಕಟ್ಟು ಇದೆ. ಅದರದ್ದೇ ಆದ ನಿಯಮಗಳಿವೆ. ಅದಕ್ಕೆ ಅನುಗುಣವಾಗಿ ಬದುಕಿದರೆ ನೆಮ್ಮದಿಯ ಜೀವನದೊಂದಿಗೆ ಸ್ವಾತಂತ್ರ್ಯದ ದಿನಗಳನ್ನು ಕಾಣಬಹುದು.

Advertisement

*ನಾಗರಾಜ ಶೇಟ್‌
ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next