ಇವರು ನಮ್ಮೂರಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. 1905ರಲ್ಲಿ ಭಾಗೀರಥಿ ಮತ್ತು ವೆಂಕಟ್ರಮಣ ಭಟ್ಟರ ಮಗನಾಗಿ ನಾರಾಯಣ ಭಟ್ಟರು ಜನಿಸಿದರು. ಇವರದು ಅವಿಭಕ್ತ ಕುಟುಂಬ ವಾಗಿತ್ತು. ಕೇವಲ ಹೋರಾಟಗಾರರಾಗಿರದೇ ಚಿಂತಕ, ಹಾಡುಗಾರ, ಭಾಗವತ, ಯಕ್ಷಗಾನ ಕಲಾವಿದ, ಉತ್ತಮ ಕೃಷಿಕರು ಆಗಿದ್ದರು. ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಇವರು ವಿಶಾಲ ಸಹೃದಯಿಗಳು ಆಗಿದ್ದರು.
ಅಪ್ಪನನ್ನು ಕಳೆದುಕೊಂಡ ನಂತರ ನಾರಾಯಣ ಭಟ್ಟರು, ಅಮ್ಮನ ಜೊತೆ ಕಲ್ಲೇಶ್ವರಕ್ಕೆ ಹೋಗಿ ಗಾಂವ್ಕರ್ ಶಾಲೆಗೆ ಸೇರಿಕೊಂಡರು. ಒಂದು ಹೊತ್ತು ಶಾಲೆ. ಒಂದು ಹೊತ್ತು ದನ ಕಾಯುತ್ತಿದ್ದರು. ಗಾಂವ್ಕರ್ ಮನೆಯಲ್ಲಿ ತರುತ್ತಿದ್ದ ತಿಲಕರ “ಕೇಸರಿ’ ಪತ್ರಿಕೆ ಹಾಗೂ ಕನ್ನಡ ಪತ್ರಿಕೆ “ಕಾನಡಾ ವೃತ್ತ’ವನ್ನು ಓದುತ್ತಿದ್ದ ಇವರಿಗೆ ಹೊರ ಜಗತ್ತಿನ ಸನ್ನಿವೇಶಗಳ ಅರಿವಾಯಿತು. ಇದೇ ಮುಂದೆ ಹೋರಾಟಕ್ಕೂ ಪ್ರೇರಣೆ ನೀಡಿತ್ತು.
ಕ್ರಮೇಣವಾಗಿ ಭಟ್ಟರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಕಾರವಾರದ ಗಾಂಧಿ ಎಂದೇ ಹೆಸರಾಗಿದ್ದ ತಿಮ್ಮಪ್ಪ ನಾಯಕರ ಮಾರ್ಗದರ್ಶನದಲ್ಲಿ ಇವರ ಹೋರಾಟ ಶುರುವಾಯಿತು. ಬ್ರಿಟಿಷರು ಇವರನ್ನು ಹತ್ತಿಕ್ಕಿ ಸಾವಿರಾರು ಕಾರ್ಯಕರ್ತರನ್ನು ಸೆರೆಮನೆಗೆ ಹಾಕಿದರು. ನಾರಾಯಣ ಭಟ್ಟರಿಗೆ ಆರು ತಿಂಗಳು ಜೈಲು ಶಿಕ್ಷೆಯಾಯಿತು. ಎರಡು ತಿಂಗಳು ಕಾರವಾರ ಜೈಲು, ನಾಲ್ಕು ತಿಂಗಳು ಇಸಾಪುರ ಜೈಲಿನಲ್ಲಿ ಇದ್ದರು. ಬಿಡುಗಡೆಯ ಅನಂತರ ಮತ್ತೆ ಹೋರಾಟದಲ್ಲಿ ಪಾಲ್ಗೊಂಡರು. ಹಲವು ಸಂದೇಶಗಳನ್ನು ಪ್ರಚಾರ ಮಾಡಿ 15 – 20 ಯುವಕರನ್ನು ಸೇರಿಸಿಕೊಂಡು ಹೋರಾಟಕ್ಕೆ ಮುಂದಾದರು.
1946ರಂದು ಹಲವು ಜನರ ಸಹಕಾರದೊಂದಿಗೆ ಕಾನಮುಸ್ಕಿಯಲ್ಲಿ ಶಾಲೆಯನ್ನು ತೆರೆದರು. ತಮ್ಮ ಮನೆಯಲ್ಲಿಯೇ ಶಿಕ್ಷಕರಿಗೆ ಊಟ, ವಸತಿಯನ್ನು ಕಲ್ಪಿಸಿದರು. ಶಾಲೆಗಳ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಭಟ್ಟರು 1994ರಲ್ಲಿ ಧ್ವಜ ಕಟ್ಟೆ ಕಟ್ಟಿಸಿಕೊಟ್ಟರು. ಅವರು ದೇವರ ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದರು. ಪೌರೋಹಿತ್ಯ ಹಾಗೂ ಹರಿ ಕತೆಯನ್ನು ಮಾಡುತ್ತಿದ್ದರು. ತಮ್ಮ ಮನೆಯಲ್ಲಿಯೇ ಒಂದು ಗ್ರಂಥಾಲಯವನ್ನು ನಿರ್ಮಿಸಿದ್ದ ಇವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.
ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಭಟ್ಟರು ಜೂನ್ 3, 2000ರಲ್ಲಿ ದಿವಂಗತರಾದರು. ಹೀಗೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಎಲ್ಲಾ ಯೋಧರಿಗೂ ಸೆಲ್ಯೂಟ್.
ಸ್ವಾತಂತ್ರ್ಯ ದಿನದ ಶುಭಾಶಯಗಳು.
ಕಾವ್ಯಾ ರಮೇಶ ಹೆಗಡೆ ವಾನಳ್ಳಿ
ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ