Advertisement

UV Fusion: Independence Day-ಕನಸಿನಲ್ಲಿ ಬಂದ ಚೆನ್ನಮ್ಮ, ರಾಯಣ್ಣ

03:30 PM Aug 15, 2023 | Team Udayavani |

ಅದು ನಿತ್ಯ ನಿರ್ಮಲವಾದ ಪ್ರಕೃತಿ ಮಡಿಲು, ಸೂರ್ಯ ಬೆಳಕು ನೀಡುತ್ತಿದ್ದರೆ ಚಂದ್ರ ತಂಪೆರೆಯುತ್ತಿದ್ದಾನೆ. ಆ ರಮಣೀಯ ಸಮಯದಲ್ಲಿ ನನಗೆ ಕೇಳುತ್ತಿತ್ತು ತಾಯಿ ಮಗನ ಸಂಭಾಷಣೆ, ಮುಂದೆ ಹೋಗಿ ನೋಡಿದರೆ ಪರಮಾಶ್ಚರ್ಯ ಅಲ್ಲಿರುವುದು ಸ್ವಾತಂತ್ರ ಹೋರಾಟದ ಬೆಳ್ಳಿ ಚುಕ್ಕಿ ಎನಿಸಿಕೊಂಡ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ.

Advertisement

ರಾಯಣ್ಣ: ಅವ್ವ.. ಚೆನ್ನಮ್ಮ ಬ್ರಿಟಿಷರು ಭಾರತ ದೇಶ ಬಿಟ್ಟು ಹೋದ್ರಂತ ನನ್ನವ್ವ. ನಮ್ಮ ನಾಡು ಸ್ವತಂತ್ರ ಆಯ್ತಂತ ತಾಯಿ.

ಚೆನ್ನಮ್ಮ: ಹೌದಾ ರಾಯಾ.. ನಾವು ಕಷ್ಟ ಪಟ್ಟಿದ್ದು ಸಾರ್ಥಕ ಆಯ್ತು ಬಿಡು. ಹಂಗಂದ್ರ ನಮ್ಮ ದೇಶ ಗುಲಾಮಗಿರಿ ಮಾಡೋದು ಮುಗೀತು ಅನ್ನು.

ರಾಯಣ್ಣ: ಹೌದು ತಾಯಿ ಈಗ ನಮ್ಮನ್ನೇ ನಾವೇ ಆಳುವಂತ ಪ್ರಜಾಪ್ರಭುತ್ವ ತಂದಾರಂತ. ನಮ್ಮೊಳಗೆ ಒಬ್ಬನ್ನ ಚುನಾವಣೆ ಮೂಲಕ ಆರಿಸಿ ನಮ್ಮ ದೇಶದ ಆಡಳಿತ ಮಾಡಾಕ ಹಚ್ತಾರಂತ ಅವ್ವ.

ಚೆನ್ನಮ್ಮ: ಹೌದಾ ಮಗನೇ ಒಳ್ಳೇದಾಯ್ತು, ನಮ್ಮ ರಾಜ್ಯಗಳು ಸಂಸ್ಥಾನಗಳು ಏನ ಆದುವು ?

Advertisement

ರಾಯಣ್ಣ: ಅವನ್ನೆಲ್ಲ ಭವ್ಯ ಭಾರತ ದೇಶದೊಳಗ ಸೇರಿಸಿ ಭಾಷಾ ಪ್ರಕಾರ ಪ್ರಾಂತ್ಯ ವಿಂಗಡನೆ ಮಾಡಿ ರಾಜ್ಯ ಸೃಷ್ಟಿ ಮಾಡ್ಯಾರ ತಾಯಿ.

ಚೆನ್ನಮ್ಮ: ಹೌದಾ ರಾಯಾ, ತಿಳಿದವರು ಮಾಡಿರ್ತಾರಂದ್ರ ಚಲೋನ ಮಾಡಿರ್ತಾರ ಬಿಡು, ಪ್ರಜಾಪ್ರಭುತ್ವದಿಂದ ಒಳ್ಳೇದಾಗ್ತೀತಿ ಅಂದ್ರ ಆಗ್ಲಿ ಮಗನ.

ರಾಯಣ್ಣ: ಆದ್ರ ಅವ್ವಾ, ಪ್ರಜಾಪ್ರಭುತ್ವದಾಗ ಯಾರ ಬೇಕಾದ್ರು ಅಧಿಕಾರ ಹಿಡಿಬೋದು ಅಂತಾರ, ಹಂಗಂದ್ರ ಕೆಲವರು ಸುಳ್ಳು ಕತೆ ಹೇಳಿ ಚುನಾವಣೆ ಗೆಲ್ಲಬಹುದು, ಬರೀ ಆಶ್ವಾಸನೆ ಕೊಟ್ಟು ಕೆಲಸ ಮಾಡಲ್ಲ ತಾಯಿ.

ಚೆನ್ನಮ್ಮ: ಏನು? ಆಡಳಿತ ಮಾಡೋರು ಸುಳ್ಳು ಮಾತಾಡ್ತಾರಾ? ಕೆಲಸ ಮಾಡಲ್ಲ ಅಂತೀಯಾ?

ರಾಯಣ್ಣ: ಹೌದು ಅವ್ವ. ಈಗಾಗ್ಲೆ ಬರೀ ಹಣದ ಆಸೆ, ಜಾತಿ ತಾರತಮ್ಯ ಮಾಡಾಕತ್ತಾರಂತ. ಆ ಕೆಂಪು ಮೂತಿ ಬ್ರಿಟಿಷರು ಹೋದ್ರಂತ ಖುಷಿ ಆಗ್ತೀತಿ, ಆದ್ರ ನಮ್ಮ ಜನಾನ ಹಿಂಗೆಲ್ಲಾ ಮಾಡಕತ್ತಾರಂತ ದುಃಖ ಆಗ್ತೀತಿ ತಾಯಿ.

ಚೆನ್ನಮ್ಮ: ರಾಯಾ ಹಂಗಾದ್ರ ಏನ ಮಾಡ್ಬೇಕ ಅಂತಿ? ನಮ್ಮ ರಾಜ್ಯ ದೇಶದ ಗತಿ ಏನು ಮಗನೇ?

ರಾಯಣ್ಣ: ತಾಯಿ ಅಪ್ಪಣೆ ಕೊಡು, ಈ ನರಿ ಬುದ್ಧಿ ಇಟ್ಟುಕೊಂಡು ಆಡಳಿತ ಮಾಡೋರನ್ನ ಸಂಹಾರ ಮಾಡಿ ಬರ್ತೇನಿ. ಆಶೀರ್ವಾದ ಮಾಡು ತಾಯಿ.

ಚೆನ್ನಮ್ಮ: ಮಗನೇ ನೀನೇ ಅಂದೀಯಲ್ಲಾ ಎಲ್ಲ ರಾಜ್ಯ ಏಕೀಕರಣ ಮಾಡಿ ಭಾರತ ದೇಶ ಮಾಡ್ಯಾರು, ಪ್ರಜಾಪ್ರಭುತ್ವ ಬಂದೇತಿ ಅಂತಾ ಈಗ ನಾನು ನೀನು ಏನ್‌ ಮಾಡಾಕ ಬರ್ತೇತಿ ರಾಯಾ.

ರಾಯಣ್ಣ: ಹಂಗಂದ್ರ ಈ ಅನ್ಯಾಯ ಹಿಂಗಾ ಮುಂದವರೀತೇತಿ ಏನ್‌ ತಾಯಿ?

ಚೆನ್ನಮ್ಮ: ಜನಾ ಬುದ್ಧಿವಂತರಾಗೋ ತನಕ ಹಿಂಗ ಇರತೇತಿ ಮಗನೇ.

ರಾಯಣ್ಣ: ಹಂಗಂದ್ರ ಪ್ರಜಾಪ್ರಭುತ್ವದ ನಿಜವಾದ ಅರ್ಥ ಅವರಿಗೆ ತಿಳಿಯೋ ತನಕ ಬುದ್ಧಿ.

ಚೆನ್ನಮ್ಮ: ರಾಯಾ ನಮ್ಮ ಕಾಲಾ ಮುಗದೇತಿ, ನಮ್ಮ ದೇಶ ಎಷ್ಟೋ ವೀರಪುತ್ರರನ್ನ ಬೆಳೆಸೇತಿ, ಈಗ ಇಧ್ದೋರು ಭಾರತಮಾತೆ ಸೇವಾ ಮಾಡ್ಲಿ ಬಿಡು.

ರಾಯಣ್ಣ: ಸರಿ ತಾಯಿ, ಬರ್ರೀ ನೀವು ವಿಶ್ರಾಂತಿ ತಗೋ ಹೊತ್ತ ಆಗೇತಿ.

ಚೆನ್ನಮ್ಮ: ಹೌದು ನಡಿ ರಾಯಾ, ಆ ತಾಯಿ ಭಾರತಮಾತೆ ಮಡಿಲಾಗ ನಾವೆಲ್ಲ ಸುರಕ್ಷಿತ ಇರ್ತೀವಿ.

ಇಷ್ಟು ಹೇಳಿದ ಕೂಡಲೇ ಆ ಇಬ್ಬರೂ ದೈವಸ್ವರೂಪಿ ಪುಣ್ಯಾತ್ಮರು ಅದೃಶ್ಯರಾದರು. ನಾನು ಕೆಲಕಾಲ ದಿಗ್ಭ್ರಾಂತನಾಗಿ ಆ ರಮಣೀಯ ಪ್ರಕೃತಿಯಲ್ಲಿ ಅವರನ್ನು ಹುಡುಕಿದೆ ಆದರೆ ಸಿಗಲಿಲ್ಲ. ಅಷ್ಟರಲ್ಲಿ ಚಿಕ್ಕ ಮಕ್ಕಳು ಆಡೋ ಶಬ್ದ ಕೇಳಿತು, ನಿದ್ರೆಯಿಂದ ಎಚ್ಚರವಾಯಿತು. ಇಷ್ಟೊತ್ತು ಕಂಡಿದ್ದು ಕನಸು. ಏನೇ ಆಗಲಿ ಆ ಮುದ್ದು ಮಕ್ಕಳಲ್ಲಿಯೇ ಯಾರಾದರೂ ಚೆನ್ನಮ್ಮ, ರಾಯಣ್ಣನಂತಾಗಲೀ ಎಂಬುದೇ ನನ್ನ ಆಸೆ.

ಗಿರೀಶ ಮುಕ್ಕಲ್ಲ ಕಲಘಟಗಿ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next