ಕಾಲೇಜಿಗೆ ತಡವಾಗಿತ್ತು. ಬಸ್ ನಿಲ್ದಾಣಕ್ಕೆ ಬಂದ ಕೂಡಲೇ ಹಿಂದುಮುಂದು ನೋಡದೆ ಸಿಕ್ಕಿದ ಬಸ್ ಹತ್ತಿಬಿಟ್ಟೆ. ಬಸ್ಸಿನಲ್ಲಿ ನಿಲ್ಲಲೂ ಆಗದಷ್ಟು ಜನ ಕಿಕ್ಕಿರಿದು ತುಂಬಿಕೊಂಡಿದ್ದರು. ಹಾಗಾಗಿ ಬಸ್ಸಿನ ಮೆಟ್ಟಿಲಿನಲ್ಲೇ ನಿಲ್ಲುವುದು ಅನಿವಾರ್ಯವಾಯಿತು.
ಬಸ್ ಮುಂದಕ್ಕೆ ಚಲಿಸಿದಂತೆ ಒಬ್ಬೊಬ್ಬರೇ ಪ್ರಯಾಣಿಕರು ತಮ್ಮ ಇಳಿಯುವ ಸ್ಥಳ ಬಂದ ಕೂಡಲೇ ಇಳಿದು ಹೋಗುತ್ತಿದ್ದರು. ಹಾಗಾಗಿ ಬಸ್ನಲ್ಲಿ ಸ್ವಲ್ಪ ಜಾಗ ಸಿಕ್ಕದ್ದರಿಂದ ಒಳಗೆ ಹೋಗಿ ನಿಂತೆ. ಅಂತೂ ಇಂತೂ ಬಸ್ ಕಂಡಕ್ಟರ್ ಸದ್ದು ಮಾಡುತ್ತಾ ಎಲ್ಲರನ್ನು ಗುದ್ದಿಕೊಂಡು, ನೂಕಿಕೊಂಡು ಟಿಕೆಟ್ ಟಿಕೆಟ್ ಎಂದು ಹೇಳುತ್ತಾ ನನ್ನ ಕಡೆಯೇ ಬಂದರು.
ಆಗಲೇ ನನಗೆ ನೆನಪಾಗಿದ್ದು ನಾನು ಕಾಲೇಜಿಗೆ ಹೊಟುವ ಆತುರದಲ್ಲಿ ಬಸ್ಸಿಗೆ ಹಣ ನೀಡಲು ಹಣವೇ ತಂದಿರಲಿಲ್ಲ ಎಂದು. ಬ್ಯಾಗಿನಲ್ಲಿ ಎಲ್ಲಿಯಾದರೂ ಹಣ ಇರಬಹುದೇ ಎಂದು ಬಿಟ್ಟೂ ಬಿಡದೇ ಹುಡುಕಾಡಿದೆ. ಆದರೆ ಹಣ ಮಾತ್ರ ಸಿಗಲೇ ಇಲ್ಲ. ಆ ಕ್ಷಣಕ್ಕೆ ಗಾಬರಿಯಾಗಿ ಏನು ಮಾಡುವುದೆಂದು ಯೋಚಿಸುತ್ತಾ ಸುತ್ತಮುತ್ತ ನೋಡಿದಾಗ ಕಾಲೇಜಿನ ಗೆಳತಿಯೊಬ್ಬಳು ಕಂಡಳು.ಅಬ್ಟಾ! ಎಂದು ನಿಟ್ಟುಸಿರುವ ಬಿಟ್ಟೆ.
ಸ್ವಲ್ಪ ಹಿಂಜರಿಕೆಯಿಂದಲೇ ಅವಳ ಬಳಿ ತೆರಳಿ ನಿನ್ನಲ್ಲಿ 10 ರೂಪಾಯಿ ಇದೆಯಾ ನಾಳೆ ಹಿಂದಿರುಗಿಸುವೆ, ಎಂದಾಗ ತಕ್ಷಣವೇ ತೆಗೆದು ಕೊಟ್ಟಳು. ನಾನು ಟಿಕೆಟು ಪಡೆಯಲು ಹಣ ನೀಡಲು ಮುಂದಾದೆ. ಅಷ್ಟರ ವೇಳೆಗಾಗಲೇ, ಕಂಡಕ್ಟರ್ ನನ್ನ ಪೆಚ್ಚು ಮೋರೆ ನೋಡಿ ಎಲ್ಲವನ್ನೂ ಅರ್ಥ ಮಾಡಿಕೊಂಡಿದ್ದ. ಆತನೇ, ಮುಖ ಸಣ್ಣಗೆ ಮಾಡಿಕೊಳ್ಳದೇ ಬಹಳ ಕಾಳಜಿಯಿಂದಲೇ ಕಾಲೇಜಿನಿಂದ ಪುನಃ ಮನೆಗೆ ತೆರಳಲು ನನ್ನಲ್ಲಿ ಹಣವಿದೆಯೇ ಎಂದು ವಿಚಾರಿಸಿದ.
ಆ ಕ್ಷಣಕ್ಕೆ ಏನು ಹೇಳಬೇಕೆಂದು ತಿಳಿಯದ ನಾನು ಇಲ್ಲ ಎಂದು ಕತ್ತು ಆಡಿಸಿದೆ. ಗೊಂದಲ, ಭಯ ಎಲ್ಲವೂ ಮನಸ್ಸಿನಲ್ಲಿ ಮೂಡಿತ್ತಾದರೂ ಕಾಲೇಜಿಗೆ ಹೋದ ಮೇಲೆ ಏನಾದರೂ ಮಾಡಬಹುದು ಎಂಬ ಆಲೋಚನೆಯಲ್ಲೇ ಪ್ರಯಾಣ ಮುಂದುವರೆಸಿದೆ.
ಆದರೆ ಕಂಡಕ್ಟರ್ ಆ ಕ್ಷಣಕ್ಕೆ ಅಷ್ಟೊಂದು ಕಾಳಜಿಯಿಂದ ಮಾತನಾಡಿಸುತ್ತಾರೆ ಎಂದು ಭಾವಿಸಿರಲಿಲ್ಲ. ಬಹುಶಃ ಇದೇ ಕಾರಣಕ್ಕೆ ಇರಬೇಕು ಆ ಕ್ಷಣಕ್ಕೆ ಏನು ಮಾತನಾಡಬೇಕು ಎಂಬುದೇ ತಿಳಿಯದೇ ಸುಮ್ಮನೇ ಇಲ್ಲ ಎಂದು ಕತ್ತು ಆಡಿಸಿದೆ. ಕಂಡಕ್ಟರ್ ನನ್ನ ಪಚೀತಿಯನ್ನು ನೋಡಲಾಗದೇ ಟಿಕೆಟ್ ಹಣ ಪಡೆಯದೇ ಕಾಲೇಜಿನ ಬಳಿ ಸುರಕ್ಷಿತವಾಗಿ ನನ್ನನ್ನು ಬಿಟ್ಟರು. ಅದೂ ಕೂಡ ಯಾವುದೇ ಹಣ ತೆಗೆದುಕೊಳ್ಳದೇ!
ಆಗಲೇ ಅನಿಸಿದ್ದು ಕಂಡಕ್ಟರ್ ಅಂದರೆ ಯಾವಾಗಲೂ ಟಿಕೆಟ್ ಟಿಕೆಟ್ ಎಂದು ಗುರì ಎನ್ನುವವರಲ್ಲ, ಅವರೊಳಗೂ ಮಾನವೀಯತೆ ಸೆಲೆ ಅಡಗಿದೆ ಎಂದು. ಅಂದಿನಿಂದ ಕಂಡಕ್ಟರ್ ಬಗೆಗಿನ ನನ್ನ ಭಾವನೆಯೂ ಬದಲಾಯಿತು.
-ಪ್ರತೀಕ್ಷಾ
ಮಂಗಳೂರು