ಬಹಳ ಮನಸ್ಸಿಗೆ ತಟ್ಟುವಂಥ ಸಿನಿಮಾ. ಜಪಾನಿ ಭಾಷೆಯದ್ದು. 2008ರಲ್ಲಿ ನಿರ್ಮಾಣವಾದ ಚಿತ್ರ. ಯೋಜಿರೋ ತಕಿತ ಇದರ ನಿರ್ದೇಶಕ. ಅತ್ಯಂತ ಸರಳ ಎನ್ನಿಸುವ ಕಥೆಯ ಎಳೆಯನ್ನು ಹಿಡಿದು ಬದುಕಿನ ಕಥೆಯನ್ನು ಹೇಳುವ ನಿರ್ದೇಶಕ, ಎಲ್ಲಿಯೂ ಅದನ್ನು ಹಿಂಜಿ ಎಳೆಯುವು ದಿಲ್ಲ.
ನೂಲಿನ ಎಳೆಯನ್ನು ಹೇಗೆ ನಾಜೂಕಾಗಿ ನಿರ್ವಹಿಸುತ್ತೇವೆಯೋ ಅದೇ ತೆರನಾಗಿ ನಿರ್ದೇಶಕ ಈ ಸಿನಿಮಾವನ್ನೂ ನಿರ್ವಹಿಸಿದ್ದಾನೆ. ಅದಕ್ಕೆ ಒಪ್ಪುವ ಸಂಗೀತವೂ ಪ್ರೇಕ್ಷಕನಲ್ಲಿ ಹೊರ ಹೊಮ್ಮುವ ಭಾವನೆಗಳನ್ನು ನಯವಾಗಿ ನಿರ್ವಹಿಸುತ್ತದೆ.
ಕಥೆಯ ಎಳೆ ಇಷ್ಟೇ. ಕಥಾನಾಯಕ ಟೋಕಿಯೊದ ಒಂದು ಸಂಗೀತ ಬ್ಯಾಂಡ್ ನಲ್ಲಿ ಸಂಗೀತಗಾರನಾಗಿರುತ್ತಾನೆ. ಅದು ಅವನ
ವೃತ್ತಿ-ಪ್ರವೃತ್ತಿ. ತನ್ನ ಬದುಕಿನ ಭಾಗವಾಗಿ ಸಂಗೀತವನ್ನು ಸ್ವೀಕರಿಸಲು ಒಂದು ಸಂಗೀತ ಉಪಕರಣವನ್ನು ಕೊಳ್ಳುತ್ತಾನೆ. ಅವನ
ಸಂಭ್ರಮ ಹೇಳತೀರದು. ಇದಾದ ಮರು ದಿನ ಆಘಾತವೆಂಬಂತೆ ಅವನಿದ್ದ ಬ್ಯಾಂಡ್ ಮುಚ್ಚಲ್ಪಡುತ್ತದೆ. ಅಂದರೆ ಅಂದಿನಿಂದ ಅವನಿಗೆ ಕೆಲಸವಿಲ್ಲ. ಜತೆಗೆ ಪ್ರವೃತ್ತಿಗೂ ಖೋತಾ.
ವಿಧಿಯಿಲ್ಲದೇ ಕಥಾನಾಯಕ ತನ್ನ ಪತ್ನಿಯೊಂದಿಗೆ ಟೋಕಿಯೊ ಮಹಾನಗರದಿಂದ ತನ್ನ ಊರಾದ ಹಳ್ಳಿಗೆ ವಾಪಸಾಗುತ್ತಾನೆ. ಸಣ್ಣ ಪಟ್ಟಣ. ತನ್ನ ಹಿರಿಯರ ಮನೆಯಲ್ಲಿದ್ದರೂ ಉದ್ಯೋಗವೆಂದು ಬೇಕಲ್ಲ. ಅದರ ಹುಡುಕಾಟದಲ್ಲಿರುತ್ತಾನೆ. ಈ ಮಧ್ಯೆ ಮಾಧ್ಯಮದಲ್ಲಿ ಒಂದು ಜಾಹೀರಾತು ಬರುತ್ತದೆ. “ಪ್ರಯಾಣಕ್ಕೆ ಸಹಕರಿಸುವವರು ಬೇಕು’ ಎಂಬ ಜಾಹೀರಾತು ಕಂಡು ಕಥಾನಾಯಕ ಯಾವುದೋ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸವಿರಬೇಕು ಎಂದು ಕೊಳ್ಳುತ್ತಾನೆ. ಹಾಗೆಯೇ ಅರ್ಜಿ ಹಾಕುತ್ತಾನೆ.
ಕೆಲಸಕ್ಕೆ ಆಯ್ಕೆಯಾದ ಬಳಿಕ ಮೊದಲ ದಿನದ ಕಾರ್ಯ ಕಂಡಾಗ ಆಘಾತಕ್ಕೊಳಗಾಗುತ್ತಾನೆ. ಅವನು ಸೇರಿಕೊಂಡ ಕಂಪೆನಿ ಲೌಕಿಕ ಜಗತ್ತಿನ ಟ್ರಾವೆಲ್ ಏಜೆನ್ಸಿಯ ಬದಲು ಮರಣ ಅನಂತರದ ಪ್ರಯಾಣಕ್ಕೆ ಸಜ್ಜುಗೊಳಿಸುವ ಏಜೆನ್ಸಿಯದ್ದಾಗಿರುತ್ತದೆ.
ಅನಿವಾರ್ಯತೆಯಿಂದ ಆ ಉದ್ಯೋಗವನ್ನು ಒಪ್ಪಿಕೊಳ್ಳುವ ಕಥಾನಾಯಕ, ತನಗರಿವಿಲ್ಲದೇ ಆ ವೃತ್ತಿಯನ್ನು ಒಳಗೊಳ್ಳತೊಡಗುತ್ತಾನೆ. ಶವವನ್ನು ಶುಚೀಕರಿಸಿ, ಮುಂದಿನ ಪ್ರಯಾಣಕ್ಕೆ ಸಿದ್ಧಪಡಿಸುವುದು ಅವನ ವೃತ್ತಿಯ ಹೊಣೆಗಾರಿಕೆ. ಆದರೆ ಸಮಾಜದಲ್ಲಿ ಆತ ಸಾಮಾಜಿಕ ಬಹಿಷ್ಕಾರವನ್ನೂ ಎದುರಿಸುವ ಸ್ಥಿತಿ ನಿರ್ಮಾಣವಾಗುತ್ತದೆ.
ಇದನ್ನೆಲ್ಲ ಕಂಡು ಪತ್ನಿ ಉದ್ಯೋಗ ಬದಲಿಸುವಂತೆ ತಿಳಿಸುತ್ತಾಳೆ. ಆದರೂ ಆತ ತನ್ನ ವೃತ್ತಿಯನ್ನು ಮುಂದುವರಿಸುತ್ತಾನೆ. ಸಿನಿಮಾದ ಒಂದು ತಿರುವಿನಲ್ಲಿ ತನ್ನ ತಂದೆಯ ಶವವನ್ನೇ ನಿರ್ವಹಿಸಬೇಕಾದ ಸಂದರ್ಭ ಎದುರಾಗುತ್ತದೆ. ತನ್ನನ್ನು ಹೊರಹಾಕಿದ ಅಪ್ಪನ ಶವವನ್ನು ನಿರ್ವಹಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿ ತೊಡಗುವ ಕಥಾನಾಯಕನಿಗೆ ಬಾಲ್ಯ, ಅಪ್ಪನ ಸಂಬಂಧ ಎಲ್ಲವೂ ಕಣ್ಣೆದುರು ಬಂದು ಮರು ವ್ಯಾಖ್ಯಾನಗೊಳಿಸಿಕೊಳ್ಳುತ್ತಾನೆ.
ತೀರಾ ಭಾವುಕ ಮಯವಾದ ಚಲನಚಿತ್ರ. ಜಪಾನಿನ ಸಂಸ್ಕೃತಿ, ಸಮಾಜದಲ್ಲಿನ ಸ್ಥಿತಿಗತಿ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವಂಥ ಚಿತ್ರವಿದು. ಕಥಾ ನಾಯಕನಾಗಿ ಮಸಾಹಿರೊ ಮೊತೊಕಿ ಸಮರ್ಥವಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಮನುಷ್ಯ ಸಂಬಂಧಗಳ ಬಗ್ಗೆ ಗಟ್ಟಿಯಾದ ಅನುಭವ ನೀಡುವಂಥ ಚಿತ್ರಕ್ಕೆ 40 ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ. ಜಪಾನ್ ಅಕಾಡೆಮಿ ಪ್ರಶಸ್ತಿಯಲ್ಲಿ ಹಲವು ವಿಭಾಗಗಳಲ್ಲಿ ಪುರಸ್ಕಾರ ಗಳಿಸಿದೆ.
*ಅಪ್ರಮೇಯ