Advertisement
ಚಿಕ್ಕ ಚಿಕ್ಕ ಗಾತ್ರದ ಮೀನುಗಳು ಒಂದೊಡೆಯಾದರೆ, ಗಜಗಾತ್ರದ ಮೀನುಗಳು ಮತ್ತೂಂದೆಡೆ. ನೂರರಿಂದ ಹಿಡಿದು ಸಾವಿರ ಸಾವಿರ ಬೆಲೆಬಾಳುವ, ವಿವಿಧ ರುಚಿಯ , ವಿಧವಿಧ ರೂಪದ ಮತ್ಸ್ಯ ಸಂತತಿಗಳಿಗೆ ಮಾರುಹೋಗದ ಮಾನವರುಂಟೇ! ಆದರೆ ನಾವು ಮಾರ್ಕೆಟ್ ಗಳಲ್ಲಿ ಕಾಣುವ ಈ ಮೀನುಗಳು ಹಿಂದೆ ನಾವು ಕಂಡು ಕೇಳರಿಯದ ನೋವು ನಲಿವಿನ ಕಥೆಯೊಂದಿದೆ. ಜೀವವನ್ನೇ ಪಣಕ್ಕಿಟ್ಟು ನಡೆಸುವ; ಸವಾಲಿನ ಜೀವನದ ಒಂದು ಚಿತ್ರಣವಿದೆ.
Related Articles
Advertisement
ಒಬ್ಬ ಕಡಲ ಕುವರನ ಸ್ನೇಹ ನನಗೂ ದೊರೆತಿದೆ. ಅನೇಕ ಬಾರಿ ಸಾಗರದ ವಿಷಯವೇ ನಮ್ಮಲ್ಲಿ ಚರ್ಚೆಗೆ ಬರುತ್ತಿತ್ತು. ತರಗತಿಯ ಮಧ್ಯದಲ್ಲಿಯೂ ಕೆಲವೊಮ್ಮೆ ನಮ್ಮ ಸಂಭಾಷಣೆಗಳು ಮುಂದುವರೆಯುತ್ತಲೇ ಇತ್ತು. ಜೊತೆಗೆ ನನ್ನಂತೆ ಇನ್ನಿಬ್ಬರು ಗೆಳೆಯರೂ ಕಥೆಯನ್ನು ಕೇಳಿಸಿಕೊಳ್ಳುತ್ತಿದ್ದರು.
ಯಾವ ಮೀನು ಸಿಕ್ಕಿತು? ಎಷ್ಟು ಗಾತ್ರದ್ದು? ಆ ಮೀನು ನಿಮ್ಮಲ್ಲಿ ಸಿಗುತ್ತದೆಯೇ? ಶಾರ್ಕ್ ಗಳಿವೆಯೇ? ಒಂದಲ್ಲಾ ಎರಡಲ್ಲ ಅನೇಕ ಪ್ರಶ್ನೆಗಳಿಗೆ ಮತ್ತು ನಮ್ಮ ಕೌತುಕಕ್ಕೆ ಅನುಸಾರವಾಗಿ ಗೆಳೆಯ ಉತ್ತರಿಸುತ್ತಲೇ ಇದ್ದ. ಉಳಿದವರೆಲ್ಲರೂ ಬೋರ್ಡ್ ನೋಡುತ್ತಿದ್ದರೆ, ನಾವು ಮಾತ್ರ ಕಥೆಗಾರ ಸ್ನೇಹಿತನ ಮುಖ ನೋಡುತ್ತಿದ್ದೆವು. ಮೀನು ಇನ್ನೇನು ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಅದೆಷ್ಟೋ ಬಾರಿ ಟೀಚರ್ ಕೈಗೆ ಸಿಕ್ಕಿ ಬೈಸಿಕೊಂಡದ್ದಿದೆ!
ಮೀನು ಗಾರರಿಗೆ ಕಡಲು ಎಂದರೆ ಅವರ ಪಾಲಿನ ಮನೆ, ಪ್ರತಿನಿತ್ಯ ತಾಯಿಯಂತೆ ಪೊರೆ ಯುವ ಮಮತೆಯ ಮಡಿಲು, ಕಡಲೇ ಅವರಿಗೆ ಆಸರೆ. ಕಡಲಿ ಲ್ಲದೆ ಅವರಿಲ್ಲ. ಕಡಲಿಗೂ ಅವರೆಂದರೆ ಅಷ್ಟೇ ಪ್ರೀತಿ. ಕೆಲವೊಮ್ಮೆ ಸನ್ನಿವೇಷಗಳು ತಾಯಿಯನ್ನೂ ಕೂಡ ರಾಕ್ಷಸಿಯನ್ನಾಗಿ ಪರಿವರ್ತಿಸುತ್ತವಂತೆ ಅಂತೆಯೇ ಕಡಲನ್ನೂ ಕೂಡ ಕೆಲವೊಂದು ಸನ್ನಿವೇಷಗಳು ರಾಕ್ಷಸಿಯನ್ನಾಗಿ ಬದಲಾಯಿಸುತ್ತದೆ.
ಆ ಕಾಲದಲ್ಲಿ ಕಡಲಿಗೆ ಯಾವ ಮಮತೆಯೂ ಇರುವುದಿಲ್ಲ, ಪ್ರತಿನಿತ್ಯ ಬರುವವನಾದರೂ ಸರಿ! ಒಮ್ಮೆ ದಡ ಸೇರಿದರೆ ಸಾಕು ಎಂದು ಏದುಸಿರು ಬಿಡುತ್ತಾನೆ. ಎಷ್ಟೋ ಸಾರಿ ನಾವು ಕೇಳಿರುತ್ತೇವಲ್ಲವೇ? ಮೀನು ಹಿಡಿಯಲು ಹೋದ ವ್ಯಕ್ತಿಗಳು ನಾಪತ್ತೆ ! ಎಂಬುದಾಗಿ ಅದೆಲ್ಲವೂ ಇಂತಹ ಸಂಧರ್ಭದಲ್ಲಿ ಘಟಿಸುವಂತಹ ಘಟನೆಗಳು. ಸುಲಭವಾಗಿ ಯಾವ ಸಂಕಷ್ಟಗಳಿಗೂ ಅವರು ತುತ್ತಾಗಲಾರರು!
ಎಂತಹ ಕಷ್ಟವಿದ್ದರೂ ಈಜಿ ದಡ ಸೇರುವ ಸಾಹಸಿಗಳು ಅವರು! ಆದರೂ ಪ್ರಕೃತಿಯ ಮುಂದೆ ನರ ಮಾನವನಿಗೆ ನಿಲ್ಲಲು ಸಾಧ್ಯವೇ ? ವಿಪರ್ಯಾಸವೆಂದರೆ, ಯಾರಿಗೂ ಕಡಿಮೆ ಇಲ್ಲದಂತೆ ಅವರು ಬದುಕಿದರೂ ಈ ಸಮಾಜ ಮೀನು ಹಿಡಿಯುವವ ಎಂದು ವ್ಯಂಗ್ಯವಾಡುವುದನ್ನು ಇಂದಿಗೂ ನಿಲ್ಲಿಸಿಲ್ಲ. ಅದೇ ಮೀನುಗಾರ ತಂದ ಮೀನನ್ನು ಚಪ್ಪರಿಸಿ ತಿನ್ನುವಾಗ ಯಾವ ಕೀಳರಿಮೆಯನ್ನೂ ತೋರದವರು, ಎಲ್ಲರಂತೆ ಅವರನ್ನ ನೋಡಲು ಇಚ್ಛಿಸದೆ ಇಂದಿಗೂ ನಿಂದಿಸುತ್ತಾರೆ.
ಅವರಿಗೆ ಬಡತನವಿರಬಹುದು, ಆದರೆ ಮನುಷತ್ವಕ್ಕೆ ಬಡತನವಿಲ್ಲ. ಎಲ್ಲರಿಗಿಂತಲೂ ಸ್ವಲ್ಪ ಜಾಸ್ತಿಯೇ ಮನುಷ್ಯತ್ವ ಅವರಲ್ಲಿದೆ. ಎಲ್ಲಿ ಜಲವಿಪತ್ತುಗಳು ಸಂಭವಿಸಿದರೂ ಮೀನುಗಾರ ಮಿತ್ರರು ಧಾವಿಸಿ ಬರುವುದುಂಟು, ಅನೇಕ ಸಮಾಜಮುಖೀ ಕಾರ್ಯಗಳಲ್ಲಿಯೂ ಅವರು ಇಂದು ತೊಡಗಿಸಿಕೊಂಡಿದ್ದಾರೆ. ಅವರು ನಮ್ಮವರೇ ! ಎಂದೆಂದಿಗೂ ನಮ್ಮವರು ! ಕಡಲ ಕುವರರೇನೀವು ಬಲೆ ಬೀಸಿ ಹಿಡಿದಿರುವುದು ಕೇವಲ ಮೀನನ್ನಷ್ಟೇ ಅಲ್ಲ ! ಎಲ್ಲಾ ಮತ್ಸ್ಯಪ್ರೇಮಿಗಳ ಹೃದಯವನ್ನು !
-ವಿಕಾಸ್ ರಾಜ್
ಪೆರುವಾಯಿ