Advertisement

UV Fusion: ಸಸ್ಯಗಳಿಗೂ ಬೇಕು ಜೇನಿನ ಸಿಹಿ ಸ್ಪರ್ಶ

03:01 PM Feb 03, 2024 | Team Udayavani |

ಭೂಮಿ ಸೌರಮಂಡಲದಲ್ಲೇ ಅತ್ಯಂತ ವಿಶೇಷವಾದ ಗ್ರಹ. ಉಳಿದ ಯಾವ ಗ್ರಹಗಳಲ್ಲೂ ಇಲ್ಲದ ಜೀವಮಂಡಲ ಭೂಮಿಯಲ್ಲಿದೆ. ಜೀವಿಗಳಿಗೆ ಆವಶ್ಯಕವಾದ ಸೂರ್ಯ, ಕಿರಣ, ಗಾಳಿ, ನೀರು ಇತ್ಯಾದಿಗಳು ಭೂಮಿಯ ಮೇಲೆ ಜೀವಿಸಲು ಯೋಗ್ಯ ಪರಿಸರ ಸೃಷ್ಟಿಸಿವೆ. ವಿಶೇಷವೆಂದರೆ ಜೀವಸಂಕುಲಕ್ಕೆ ಅತ್ಯಂತ ಉಪಯೋಗಕಾರಿಯಾದ ಒಂದು ಜೀವದ ಬಗ್ಗೆ ಈ ಅಂಕಣ.

Advertisement

ಈ ಜೇನುನೊಣಕ್ಕೆ ಇಷ್ಟೆಲ್ಲಾ ಪ್ರಾಮುಖ್ಯತೆಯ ಆವಶ್ಯಕತೆ ಇದೆಯೇ? ಎಂದು ಪ್ರಶ್ನಿಸಿದರೆ ಹೌದು. ಖಂಡಿತ ಇದು ಅತ್ಯಂತ ಅಗತ್ಯವಾಗಿದೆ.  ಅಲ್ಬರ್ಟ್‌ ಐನ್‌ಸ್ಟಿನ್‌ ಪ್ರಕಾರ, ಜೇನುಸಂಕುಲದ ಅವನತಿಯಾದ ಬಳಿಕ ಕೇವಲ 4ರಿಂದ 5 ವರ್ಷಗಳ ಕಾಲ ಮಾತ್ರ ಮನುಷ್ಯ ಭೂಮಿ ಮೇಲೆ ಇರಬಹುದು. ಯಾಕೆಂದರೆ ಜೇನುನೊಣಗಳಿಲ್ಲದೆ ಇದ್ದರೆ ಪರಾಗಸ್ಪರ್ಶವಿರುವುದಿಲ್ಲ, ಇದರಿಂದ ಗಿಡಗಳು ಇರುವುದಿಲ್ಲ, ಪ್ರಾಣಿಗಳಿರುವುದಿಲ್ಲ, ಕೊನೆಗೆ ಮನುಷ್ಯನೂ ಇರುವುದಿಲ್ಲ.  ಆದ್ದರಿಂದ ಜೇನುನೊಣಗಳು ಸೃಷ್ಟಿಯ ವಿಶೇಷ ಜೀವಿ.

ವಿಜ್ಞಾನದ ಪ್ರಕಾರ ಜೇನುನೊಣಗಳು ಒಳ್ಳೆಯ ಅಭಿಯಂತರರು.  ಕಾರಣ ಕೇವಲ ಶೇ.  40-50 ಮೇಣದಿಂದ ಜೇನುಗೂಡನ್ನು ನಿರ್ಮಿಸಿಕೊಳ್ಳುತ್ತವೆ.

ಜೇನುನೊಣಗಳಲ್ಲಿ ಮೂರು ವಿಧಗಳಿವೆ. ರಾಣಿ ಜೇನು, ಗಂಡು ಜೇನು ಮತ್ತು ಸೈನಿಕ ಜೇನು.  ಎಲ್ಲ ಜೇನುನೊಣಗಳು ಜೇನನ್ನು ತಯಾರಿಸುವುದಿಲ್ಲ. ಅವುಗಳಲ್ಲಿ ಕೆಲ ನೊಣಗಳು ಅದಕ್ಕಾಗಿಯೇ ನೇಮಕಗೊಂಡಿರುತ್ತವೆ.

ಮಾಹಿತಿ ಪ್ರಕಾರ, ಒಂದು ನೊಣ ತನ್ನ ಜೀವಿತಾವಧಿಯಲ್ಲಿ ಒಂದು ಟೀ ಸ್ಪೂನ್‌ನಷ್ಟು ಜೇನುತುಪ್ಪವನ್ನು ಉತ್ಪಾದಿಸಬಲ್ಲದು. ಅದಕ್ಕಾಗಿ 400ರಿಂದ 500 ಹೂಗಳನ್ನು ಹುಡುಕಬೇಕಾಗುತ್ತದೆ.  ಒಂದು ದೊಡ್ಡ ಜೇನುನೊಣಗಳ ಗೂಡಿನಲ್ಲಿ 50 ಸಾವಿರ ನೊಣಗಳು ವಾಸಿಸಬಲ್ಲವು. ಗೂಡಿನಲ್ಲಿ ಎರಡು ರಾಣಿಗಳು ಹುಟ್ಟಿಕೊಂಡರೆ ಗುಂಪು ಎರಡು ಪಾಲುಗಳಾಗಿ ವಿಂಗಡಣೆಗೊಂಡು ತೆರಳುತ್ತವೆ.

Advertisement

ಜೇನುನೊಣಗಳು 2 ಹೊಟ್ಟೆಗಳನ್ನು ಹೊಂದಿದೆ. ಒಂದು ಜೇನು ಸಂಗ್ರಹಿಸಲು ಮತ್ತು ಇನ್ನೊಂದು ತಿಂದ ಆಹಾರಕ್ಕಾಗಿ.  ನೊಣ ಹೂವಿನ ಮಕರಂದ ಹೀರಿದ ಬಳಿಕ ಅದು ಹೊಟ್ಟೆಯಲ್ಲಿ ಜೇನುತುಪ್ಪವಾಗಿ ಪರಿವರ್ತನೆಗೊಳ್ಳಲಿದೆ. ಜೇನುನೊಣಗಳು ಕಚ್ಚುತ್ತವೆ, ತೊಂದರೆ ಕೊಡುತ್ತವೆ ಎನ್ನುವುದು ಎಲ್ಲರಲ್ಲಿರುವ ಭಯ. ಆದರೆ ಅದು ಸುಮ್ಮನೆ ಯಾರನ್ನೂ ಕಚ್ಚುವುದಿಲ್ಲ. ನೊಣಗಳಿಗೆ ತೊಂದರೆ ಕೊಟ್ಟರೆ ತನ್ನನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕಚ್ಚುತ್ತದೆ. ನೊಣ ಒಮ್ಮೆ ಕಚ್ಚಿದರೆ ಅದು ತತ್‌ಕ್ಷಣ ಸಾವನ್ನಪ್ಪುತ್ತದೆ.

ಜೇನು ಹೂವಿನಿಂದ ಹೂವಿಗೆ ಗಿಡದಿಂದ ಗಿಡಕ್ಕೆ ಹಾರಿ ಪರಾಗಸ್ಪರ್ಶದ ಮೂಲಕ ಮನುಕುಲಕ್ಕೆ ಉಪಯುಕ್ತ ಕಾರ್ಯ ಮಾಡುತ್ತಿವೆ. ಪರಾಗಸ್ಪರ್ಶವು ಪರಾಗಧಾನ್ಯಗಳನ್ನು ಹೂವಿನ ಗಂಡು ಪರಾಗದಿಂದ ಹೆಣ್ಣಿಗೆ ವರ್ಗಾಯಿಸುವ ಕ್ರಿಯೆಯಾಗಿದೆ. ಪರಾಗಸ್ಪರ್ಶಕ ಅವಲಂಬಿತ ಬೆಳೆಗಳ ಉತ್ಪಾದನ ಪ್ರಮಾಣವು ಕಳೆದ ಐದು ದಶಕಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದರಿಂದಾಗಿ ಪೋಲಿನೇಟರ್‌ಗಳನ್ನು ಹೆಚ್ಚು ಅವಲಂಬಿತವಾಗಿದೆ. ಈ ಬೆಳೆಗಳು ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರುತ್ತವೆ ಮತ್ತು ಅವು ಮಾನವನ ಆಹಾರ ಮತ್ತು ಪೋಷಣೆಗೆ ಆವಶ್ಯಕವಾಗಿವೆ.

ಸಣ್ಣ ನೊಣ ಭೂಮಿಗೆ ನೀಡುತ್ತಿರುವ ಕೊಡುಗೆ ಅತೀ ದೊಡ್ಡದು. ಇಲ್ಲಿ ಮನುಷ್ಯನನ್ನು ಹೊರತುಪಡಿಸಿ ಉಳಿದ ಸರ್ವಜೀವಸಂಕುಲವೂ ಭೂಮಿತಾಯಿಗೆ ತನ್ನದೇ ಆದ ಕೊಡುಗೆ ನೀಡುತ್ತಿವೆ.  ಆದರೆ ಇವುಗಳ ಪ್ರತಿಫ‌ಲವಾಗಿ ಬದುಕುತ್ತಿರುವ ಮನುಷ್ಯನ ದುರ್ನಡತೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತನ್ನ ಧನದಾಹದಿಂದ ಭೂಮಿಯ ಒಡಲು ಬಗಿಯುತ್ತಿದ್ದಾನೆ.

ಭೂಮಿ ಮನುಷ್ಯನ ಸ್ವತ್ತಲ್ಲ, ನಾವು ಕೇವಲ ಸಣ್ಣ ಜೀವಿ ಮಾತ್ರ. ಪ್ರಕೃತಿ ಎಲ್ಲ ಜೀವಿಗಳಿಗೂ ವಿಶೇಷ ಆದ್ಯತೆ ನೀಡಿದೆ.  ಪ್ರಕೃತಿಯ ಮುಂದೆ ಮಾನವ ಕೇವಲ ತೃಣಕ್ಕೆ ಸಮ. ತಾಯಿ ಭೂಮಿಯ ಕೋಪಕ್ಕೆ ಗುರಿಯಾಗುವ ಮೊದಲು ಎಚ್ಚೆತ್ತುಕೊಳ್ಳೋಣ…!

ಬದಲಾಗೋಣ, ನಮ್ಮ ಪರಿಸರವನ್ನು ಸಂರಕ್ಷಿಸುವ ಮೂಲಕ ಅಳಿಲುಸೇವೆ ಮಾಡೋಣ. ನಮ್ಮ ಪ್ರಕೃತಿಗೆ ಕೃತಜ್ಞರಾಗಿ ಬಾಳ್ಳೋಣ.

-ಮಂಜುನಾಥ್‌ ಕೆ.ಆರ್‌.

ದಾವಣಗೆರೆ  

Advertisement

Udayavani is now on Telegram. Click here to join our channel and stay updated with the latest news.

Next