Advertisement

UV Fusion: ಕ್ಷೀಣಿಸುತ್ತಿದೆ ಸಂಬಂಧಗಳ ನಂಟು

03:46 PM Aug 25, 2023 | Team Udayavani |

ಸಂಬಂಧಗಳು ಎಂದಾಗ ನೆನಪಾಗುವುದು ಹಳೆಯ ಸಿನೆಮಾದ ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಜೇನಿಲ್ಲ ಎಂಬ ಹಾಡು ಮನಸಿಗೆ ಮಿಂಚಿನಂತೆ ಬಂದು ಹೋಗುತ್ತದೆ. ಆ ಹಾಡು ಅಂದಿನ ಕಾಲಕ್ಕೆ ಚೆಂದ ಎಂದು ನನಗೆ ಅನಿಸುತ್ತಿದೆ. ಬಾಲ್ಯದಲ್ಲಿ ಇರುವಾಗ ಇದ್ದಂತಹ ಸಂಬಂಧಗಳು ಇಂದಿಗೆ ಅದು ಕೇವಲ ಪದಗಳಿಗೆ ಮಾತ್ರ ಸೀಮಿತವಾಗಿದೆ ಎಂದೆನಿಸುತ್ತದೆ. ಅಂದು ಇದ್ದಂತಹ ಬಾಂಧವ್ಯಗಳು ಇಂದು ಬಂಡೆಕಲ್ಲಿನಂತೆ ಕಾಣುತ್ತಿದೆ. ಬಾಲ್ಯದ ದಿನಗಳಲ್ಲಿ ಆಡುತ್ತಿದ್ದ ಆಟಗಳು ಅದರಲ್ಲಿ ಇದ್ದಂತಹ ಪ್ರೀತಿ ವಾತ್ಸಲ್ಯದೊಂದಿಗೆ ಪುಟ್ಟ ಸಂಬಂಧಗಳು ಗಟ್ಟಿಯಾಗಿರುತ್ತಿದ್ದವು. ಒಟ್ಟಿಗೆ ಸೇರಿಕೊಂಡು ಕೈ ಕೈ ಹಿಡಿದುಕೊಂಡು ಜೋಕಾಲಿ, ಕುಂಟೆಬಿಲ್ಲೆ, ಮರ ಕೋತಿ ಆಟಗಳನ್ನು ಅಡಿಕೊಂಡು ಅದರಲ್ಲಿ ಇರುವ ವ್ಯಕ್ತಿಗಳು ಬೇರೆ ಬೇರೆಯಾಗಿದ್ದರೂ ಮನಸ್ಸುಗಳು ಮಾತ್ರ ಒಂದೇ ಆಗಿತ್ತು.

Advertisement

ಯಾವುದೇ ಕೋಪವಾಗಲಿ ಅಥವಾ ಹೊಟ್ಟೆಕಿಚ್ಚಿ ನಂತಹ ವಿಷಯಗಳೇ ಇಲ್ಲ. ಮನೆಯ ಸದಸ್ಯರು ಎಲ್ಲರೂ ಒಂದೇ ಕೊನೆಯಲ್ಲಿ ಒಟ್ಟಿಗೆ ಕುಳಿತುಕೊಂಡು ಊಟ, ಮಾತುಕತೆ ಹರಟೆ ಟಿವಿ ನೋಡುವುದು ಎಲ್ಲವೂ ಒಂದೇ ಚೌಕಟ್ಟಿನಲ್ಲಿ ನಡೆಯುತ್ತಿತ್ತು. ಆಗ ಯಾವುದೇ ಕೋಪಗಳು ಆಗಲಿ ನನಗೆ ಅದು ಇಷ್ಟ ಇಲ್ಲ ಇದು ಆಹಾರ ಹಿಡಿಸುವುದಿಲ್ಲ ಎಂಬ ಸನ್ನಿವೇಶಗಳು ಇರುತ್ತಿರಲಿಲ್ಲ. ಆಹಾರ ಯಾವುದೇ ಆಗಿರಲಿ ಆದರೆ ಎಲ್ಲರೂ ಸಂತೋಷದಿಂದ ಒಟ್ಟಿಗೆ ಕುಳಿತುಕೊಂಡು ಊಟ ಮಾಡುತ್ತಿದ್ದರು. ಅಜ್ಜಿ, ಅಮ್ಮ ಇವರೆಲ್ಲರೂ ತನ್ನ ಮಕ್ಕಳಿಗೆ ಕೈ ತುತ್ತು ನೀಡಿ ಬೆಳೆಸುತಿದ್ದರು. ಆದರೆ ಅವು ಆ ಕಾಲಕ್ಕೆ ನಿಂತು ಹೋಗಿದೆ. ಇಂದು ಕೈ ತುತ್ತು ಎನ್ನುವ ಮಾತೇ ಕೇಳಿ ಬರುವುದು ಕಡಿಮೆಯಾಗುತ್ತಿದೆ ಅಂದು ಒಂದು ಪುಟ್ಟ ಮನೆಯಲ್ಲಿ ಮನೆ ತುಂಬಾ ಜನರು ತುಂಬಿ ತುಳುಕುತ್ತಿದರು. ಆದರೆ ಇಂದು ಆ ಮನೆಯಲ್ಲಿ ಕೇವಲ ಮೌನವೇ ಆವರಿಸಿಕೊಂಡಿದೆ. ಅಳತೆಯಲ್ಲಿ ಮನೆ ಏನು ದೊಡ್ಡದಾಗಿದೆ ಆದರೆ ಅದರೊಳಗೆ ಇರುವಂತಹ ಜನರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಆದರೆ ಅದರಲ್ಲಿ ಕೂಡ ನೆಮ್ಮದಿ ಎಂಬುದು ಇಲ್ಲ. ಅಂದು ಭೂಮಿಯ ಆಸ್ತಿಪಾಸ್ತಿಗಳು ಮನೆಯ ಹಿರಿಯ ಸದಸ್ಯನ ಹೆಸರಲ್ಲಿ ಇದ್ದರು ಮನೆಯವರು ಎಲ್ಲರೂ ಸೇರಿಕೊಂಡು ಆ ಜಮೀನಿನಲ್ಲಿ ದುಡಿಯುತ್ತಿದ್ದರು. ಆದರೆ ಇಂದು ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯನ ಹೆಸರಿನಲ್ಲಿ ಆಸ್ತಿಯನ್ನು ವಿಭಾಗ ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದಾರೆ..

ಅದು ಕೂಡ ನೆಮ್ಮದಿಯಿಂದ ನಡೆಸುತ್ತಿಲ್ಲ ಯಾರೋ ಒಬ್ಬರು ಕಷ್ಟಪಟ್ಟು ಬೆಳೆಸಿದ ಜಮೀನನ್ನು ಒಳಗಿನಿಂದ ಒಳಗೆ ಕುತಂತ್ರವನ್ನು ಮಾಡಿಕೊಂಡು ಯಾರಿಗೂ ತಿಳಿಯದ ಹಾಗೆ ಯಾವುದೇ ಕಷ್ಟವನ್ನು ಪಡದೇ ಇರುವ ವ್ಯಕ್ತಿ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಂಡ ಸನ್ನಿವೇಶವನ್ನು ಕಂಡದ್ದು ಇದೆ. ಒಬ್ಬ ವ್ಯಕ್ತಿಯ ಮೇಲೆ ಇಟ್ಟಂತಹ ನಂಬಿಕೆಯು ಇಂದು ನುಚ್ಚುನೂರಾಗುತ್ತಿದೆ. ಅಂದು ಮನೆಯ ಸದಸ್ಯರು ಕುಟುಂಬ ಸಮೇತವಾಗಿ ಸಂಬಂಧಿಕರ ಮನೆಗೆ ಹೋಗಿ ಅವರೊಂದಿಗೆ ಬೆರೆತು ಪ್ರೀತಿ ವಾತ್ಸಲ್ಯಗಳು ಕಟ್ಟಿಯಾಗಿ ಇರುತಿದ್ದವು. ಆದರೆ ಇಂದು ಕುಟುಂಬ ಸಮೇತವಾಗಿ ಬಿಡಿ ಒಬ್ಬರೇ ಹೋಗಲು ನಮಗೆ ಬಿಡುವು ಇಲ್ಲವಾಗಿ ಹೋಗಿದೆ. ಒಂದು ವೇಳೆ ಬಿಡುವು ಇದ್ದರೂ ತನ್ನ ಕುಟುಂಬದ ಸದಸ್ಯರು ಯಾರು? ಸಂಬಂಧಿಕರು ಯಾರು?ಎನ್ನುವ ವಿಷಯವೇ ಇವತ್ತು ತಿಳಿಯದೆ ಹೋಗಿದೆ. ಇಂದು ಆಸ್ತಿ -ಪಾಸ್ತಿ ಎಂಬ ವಿಚಾರದಿಂದ ಸಂಬಂಧಗಳು ದೂರವಾಗುತ್ತಿವೆ. ಯಾವುದೋ ಒಂದು ಹಣದ ಆಸೆಗೆ ಅಥವಾ ತನ್ನ ಬಯಕೆಯನ್ನು ಈಡೇರಿಸುವ ನೆಪದಲ್ಲಿ ಬಾಂಧವ್ಯಗಳು ಹಾಳಾಗಿ ಕಳಚಿ ಬೀಳುತ್ತಿವೆ. ಏನೇ ಆಗಲಿ ಅಂದು ಇದ್ದಂತಹ ಸಂಬಂಧಗಳಂತೂ ಇಂದು ದುಡ್ಡು ಕೊಟ್ಟರೂ ಸಿಗಲು ಸಾಧ್ಯವೇ ಇಲ್ಲ. ಯಾವುದೇ ಸನ್ನಿವೇಶ ಬರಲಿ ಇಂದು ಬೊಗಸೆಯಷ್ಟು ಇರುವಂತಹ ಬಾಂಧವ್ಯವಾದರೂ ಸಂತೋಷದಿಂದ ಇರಲು ಪ್ರಯತ್ನಿಸೋಣ.

ವೆನಿತ್‌ ಮುಕ್ಕೂರು

ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು

Advertisement

 

Advertisement

Udayavani is now on Telegram. Click here to join our channel and stay updated with the latest news.

Next