ಇದು ಚಲನಚಿತ್ರರಂಗದ ಜಗತ್ತಿನಲ್ಲಿ ದೊಡ್ಡ ಕ್ರಾಂತಿ ಮಾಡಿದ ಸಿನಿಮಾ. ವಿಶ್ವದಲ್ಲೆ ವಾಸ್ತವಿಕ (ರಿಯಾಲಿಸ್ಟಿಕ್), ನೈಜ, ಸಮಕಾಲೀನ ಬದುಕಿನ ಸಂಗತಿಗಳಿಗೆ ಸಿನಿಮಾ ರೂಪ ನೀಡಬಹುದು ಹಾಗೂ ನೀಡಬೇಕು ಎಂದು ಪ್ರತಿಪಾದಿಸಿದ ಸಿನಿಮಾ. ಇಟಲಿಯ ವಿಕ್ಟೋರಿಯಾ ಡಿಸಿಕಾ ಈ ಸಿನಿಮಾವನ್ನು ನಿರ್ದೇಶಿಸಿದ್ದ.
1948 ರಲ್ಲಿ ರೂಪುಗೊಂಡ ಸಿನಿಮಾ. ಎರಡನೇ ವಿಶ್ವ ಮಹಾ ಯುದ್ಧದ ನೆರಳು ಇದ್ದ ಕಾಲ. ಇದು ಒಬ್ಬ ಅಪ್ಪ, ಮಗ ಹಾಗೂ ಬದುಕಿನ ಸಂದರ್ಭದ ಕಥೆ. ಆ ಸಂದರ್ಭಕ್ಕೆ ಇಡೀ ಸಮಾಜದ ಸಹಜನರು ಹೇಗೆ ಪ್ರತಿಕ್ರಿಯಿಸುತ್ತಾರೆ, ಪ್ರತಿಕ್ರಿಯಿಸುತ್ತದೆ ಎನ್ನುವುದೇ ಕಥಾವಸ್ತು.
ಆಂಟೋನಿ (ಲಾಂಬೆರೊ ಮಾಂಗಿ ರೊನಿ) ರಿಸಿ ಕಷ್ಟ ಪಟ್ಟು ದಿನವೂ ಪೋಸ್ಟರ್ ಗಳನ್ನು ಅಂಟಿಸುವ ನೌಕರಿ ಗಿಟ್ಟಿಸಿಕೊಳ್ಳುತ್ತಾನೆ. ಆದರೆ ನೌಕರಿ ನಿರ್ವಹಣೆಗೆ ಬೈಸಿಕಲ್ ಬೇಕೇ ಬೇಕು. ಪತ್ನಿ ಮಾರಿಯಾಳ ಸಹಾಯದಿಂದ ಎಲ್ಲವನ್ನೂ ಹೊಂದಿಸಿ ಬೈಸಿಕಲ್ ಹೊಂದಿಸುವ ಆ್ಯಂಟೋನಿ ನೌಕರಿಯ ಮೊದಲ ದಿನ ಆರಂಭಿಸುತ್ತಾನೆ. ರಸ್ತೆಯ ಬದಿಯಲ್ಲಿ ಸೈಕಲ್ ನಿಲ್ಲಿಸಿ ಕೆಲಸದಲ್ಲಿ ತೊಡಗಿದ್ದಾಗ ಕಳ್ಳನೊಬ್ಬ ಸೈಕಲ್ ಅನ್ನು ಕದ್ದುಕೊಂಡು ಪರಾರಿಯಾಗುತ್ತಾನೆ. ಕೂಡಲೇ ಕಳ್ಳನನ್ನು ಆ್ಯಂಟೋನಿ ಬೆನ್ನು ಹತ್ತಿದರೂ ಗುಂಪಿನಲ್ಲಿ ಕಳ್ಳ ಕರಗಿ ಹೋಗುತ್ತಾನೆ. ಏನು ಮಾಡಬೇಕೆಂದು ತೋಚದಿದ್ದಾಗ ಕದ್ದ ವಸ್ತುಗಳು ಮಾರುವ ಮಾರುಕಟ್ಟೆಗೆ ಹೋಗಿ ಹುಡುಕುವಂತೆ ಸಲಹೆ ಕೇಳಿಬರುತ್ತದೆ. ಅದರಂತೆ ಅಲ್ಲಿಗೆ ಹೋಗಿ ಹುಡುಕುವಾಗ ಸೈಕಲ್‌ನ ಫ್ರೆàಮ್ ನ ಸಾಮ್ಯತೆ ಕಂಡು ಬಂದರೂ ಪರಿಶೀಲಿಸಲು ಆ ಅಂಗಡಿಯವರು ಅವಕಾಶ ನೀಡುವುದಿಲ್ಲ. ಬೇಸರದಿಂದ ಮತ್ತೂಂದು ಮಾರುಕಟ್ಟೆಗೆ ಹೋದಾಗ, ಅಲ್ಲಿ ಕಳ್ಳನನ್ನು ಕಾಣುತ್ತಾನೆ. ಅವನನ್ನು ಬೆನ್ನಟ್ಟುವಷ್ಟರಲ್ಲಿ ಅಲ್ಲಿಂದಲೂ ಕಾಣೆಯಾಗುತ್ತಾನೆ.
ನಿರಾಶೆಯಿಂದ ಮನೆಗೆ ಮಗ ಬ್ರೂನೋ (ಎಂಝೊ ಸ್ಟೊಯಿಲೊ) ವಾಪಸಾಗಲು ಬಸ್ಸಿಗೆ ಕಾಯುತ್ತಿದ್ದಾಗ ಎದುರಿನ ಕಟ್ಟಡದ ಬಳಿ ಅನಾಥವಾಗಿದ್ದ ಒಂದು ಸೈಕಲ್ ಕಾಣುತ್ತದೆ. ಅತ್ತ ಇತ್ತ ನೋಡಿ ಅದನ್ನು ತೆಗೆದುಕೊಂಡು ಹೊರಡುವಾಗ ಅದರ ಮಾಲಕ ಕಟ್ಟಡದ ಹೊರಗಿನಿಂದ ಬಂದು ಕಳ್ಳ ಕಳ್ಳ ಎಂದು ಕೂಗತೊಡಗುತ್ತಾನೆ. ಕೆಲವು ಸಾರ್ವಜನಿಕರು ಸೇರಿ ಆ್ಯಂಟೋನಿಯನ್ನು ಹಿಡಿದು, ಥಳಿಸಿ ಪೊಲೀಸರಿಗೆ ನೀಡಲು ಸಜ್ಜಾಗುತ್ತಾರೆ. ಅಷ್ಟರಲ್ಲಿ ಅಪ್ಪನ ಸ್ಥಿತಿ ಕಂಡು ಅಳುತ್ತಾ ಅಲ್ಲಿಗೆ ಬರುವ ಬ್ರೂನೋವನ್ನು ಕಂಡು ಆ ಸೈಕಲ್ ಮಾಲಕ ಆ್ಯಂಟೋನಿಯನ್ನು ಪೊಲೀಸರಿಗೆ ಒಪ್ಪಿಸುವ ನಿರ್ಧಾರ ಕೈ ಬಿಡುತ್ತಾನೆ. ಅಪ್ಪ-ಮಗ ಭಾರವಾದ ನಡೆಯಿಂದ ಮನೆಯತ್ತ ಹಿಂತಿರುಗಲು ದಾರಿ ಹಿಡಿಯುತ್ತಾರೆ.
ಈ ಸಿನಿಮಾ ಹಲವು ದೇಶಗಳ ಹೊಸ ಅಲೆಯ ಸಿನಿಮಾ ನಿರ್ದೇಶಕರನ್ನು ಪ್ರಭಾವಿಸಿದೆ. ಮುಖ್ಯವಾಗಿ ಭಾರತೀಯ ಚಿತ್ರರಂಗದ ಸತ್ಯಜಿತ್ ರೇ, ಬಿಮಲ್ ರಾಯ್ ಸೇರಿದಂತೆ ಹಲವಾರು ಮಂದಿ ನಿರ್ದೇಶಕರು ಈ ಚಿತ್ರದಿಂದ ಪ್ರೇರಿತರಾಗಿದ್ದರು. ಹಲವು ನಾಟಕಗಳೂ ರೂಪುಗೊಂಡಿವೆ.
ಬದುಕಿನ ಅನಿವಾರ್ಯತೆಗಳನ್ನು ಕಟ್ಟಿಕೊಟ್ಟಿದ್ದ ಸಿನಿಮಾವದು. ಈ ಕಾದಂಬರಿ ಲೂಗಿ ಬರೊಲಿನಿಯವರದ್ದು. 1950ರಲ್ಲಿ ವಿದೇಶಿ ಚಿತ್ರಕ್ಕೆ ನೀಡುವ ಆಸ್ಕರ್ ಪ್ರಶಸ್ತಿ ಇದಕ್ಕೆ ಲಭಿಸಿತ್ತು. ಇದಲ್ಲದೇ ಹಲವಾರು ಪ್ರಶಸ್ತಿಗಳು ಲಭಿಸಿರುವುದಲ್ಲದೇ, ಇಂದಿಗೂ ಜಗತ್ತಿನ ನೋಡಲೇಬೇಕಾದ ನೂರು ಸಿನಿಮಾಗಳ ಪಟ್ಟಿಯಲ್ಲಿ ಒಂದಾಗಿ ಸೇರಿದೆ. ಈ ಮೂಲಕ ವಿಕ್ಟೋರಿಯಾ ಡಿಸಿಕಾ ಒಂದು ರೀತಿಯಲ್ಲಿ ಹೊಸ ಅಲೆಯ ಸಿನಿಮಾದ ಪ್ರವರ್ತಕನಾಗಿ ಗುರುತಿಸಿಕೊಂಡ.
– ಅಪ್ರಮೇಯ