Advertisement

UV Fusion: ಮೂಕಪ್ರಾಣಿಗಳ ವೇದನೆಗೆ ದನಿಯಾಗುವಿರಾ!

08:32 AM May 11, 2024 | Team Udayavani |

ರಾತ್ರಿ ಹೊತ್ತು ಬೀದಿನಾಯಿಗಳಿಗೆ ಊಟ ಹಾಕಲು ಸ್ನೇಹಿತರ ಜತೆಗೆ ಹೊರಗಡೆ ಹೋದಾಗ ಜನರು ವಿಚಿತ್ರವಾಗಿ ನಮ್ಮನ್ನು ನೋಡುವರು. ನಮ್ಮನ್ನು ಅಪಹಾಸ್ಯದ ನಗುವಿನ ಜತೆಗೆ ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ಲವೇ? ಎಂಬ ಪ್ರಶ್ನೆ ಕೇಳುವರು. ಅಂತಹ ದಡ್ಡರನ್ನು ನೋಡಿದಾಗ ನನಗೆ ಅವರ ಮೇಲೆ ಕರುಣೆ ಬಿಟ್ಟು ಬೇರೇನೂ ತೋಚುವುದಿಲ್ಲ.

Advertisement

ಪ್ರಾಣಿಯ ಮೇಲೆ ಪ್ರೀತಿ ಕರುಣೆ ತೋರಿಸಬೇಕು. ಪ್ರಾಣಿಗಳ ಬದುಕು ಹುಟ್ಟುತ್ತಲೇ ಹೋರಾಟದಿಂದ ಕೂಡಿದೆ. ಅವುಗಳ ಕಷ್ಟಗಳನ್ನು ಯಾರು ಕೇಳುವುದಿಲ್ಲ. ನೀವು ಎಂದಾದರೂ ಪ್ರಾಣಿಗಳ ವೇದನೆಗೆ ದನಿಯಾಗಿದ್ದೀರಾ? ನಮ್ಮ ಹಾಗೆ ಮೂಕ ಪ್ರಾಣಿಗಳಿಗೂ ಬದುಕಿದೆ ಎಂದು ಜನರು ಯಾಕೆ ಯೋಚಿಸುವುದಿಲ್ಲ? ಸ್ವಲ್ಪ ಹವಾಮಾನ ಬದಲಾದರೂ ನಮ್ಮಿಂದ ತಡೆಯಲು ಸಾಧ್ಯವಾಗುವುದಿಲ್ಲ. ನಾವು ಮನುಷ್ಯರು ಬಾಯಿ ಬಿಟ್ಟು ನಮಗೆ ಆಗುವ ತೊಂದರೆಯನ್ನು ಹೇಳಿಕೊಳ್ಳುತ್ತೇವೆ, ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತೇವೆ. ಆದರೆ ಪ್ರಾಣಿಗಳಿಗೆ ಮಾತನಾಡಲು ಬರುವುದಿಲ್ಲ, ಇಂತಹ ಸಂದರ್ಭದಲ್ಲಿ ಪ್ರಾಣಿಗಳ ಗತಿ ಏನು? ಎಂದು ಸ್ವಲ್ಪ ಯೋಚಿಸಿ.

ನಮ್ಮಲ್ಲಿ ಮನೆ ಮಠ ಇಲ್ಲದವರು ಆಶ್ರಮ ಸೇರುತ್ತಾರೆ, ಏನಾದರೂ ತಿನ್ನುವ ಬಯಕೆ ಇದ್ದಲ್ಲಿ ಒಂದು ಸ್ವಲ್ಪವೂ ಯೋಚನೆ ಮಾಡದೆ ಪೋಷಕರಲ್ಲಿ, ನಮ್ಮವರಲ್ಲಿ ಕೇಳಿ ಪಡೆಯುತ್ತಾರೆ. ಇನ್ನು ಚಳಿಗಾಲ ಬಂತು ಎಂದರೇ ಸಾಕು ಒಂದು ವಾರ ಮೊದಲೇ ಹೊದಿಕೆಯನ್ನು ತಯಾರಿಡುವ ಬಗ್ಗೆ ಯೋಚಿಸುತ್ತೇವೆ. ನಮ್ಮ ಪ್ರೀತಿಗೆ ಸ್ಪಂದಿಸಲು ನಮ್ಮವರು ಅಂತ ನಮ್ಮ ಜತೆಯಲ್ಲಿ ಯಾವತ್ತೂ ಇರುತ್ತಾರೆ. ಆದರೆ ಪಾಪ ಪ್ರಾಣಿಗಳದು ಹುಟ್ಟುತ್ತಲೇ ಹೋರಾಟದ ಬದುಕು. ಬಿಸಿಲು, ಚಳಿ, ಮಳೆಗೆ ಅಸಹಾಯಕರಾಗಿ ರಸ್ತೆ ಬದಿಯಲ್ಲಿ, ಹೋಟೆಲು, ಮನೆಯ ಹತ್ತಿರ ಬಂದಾಗ ಶೇ. 60% ಜನರು ಒಳ್ಳೆಯ ಮನಸ್ಸಿನಿಂದ ನೋಡುವುದು ಬಹಳ ವಿರಳ. ಕಲ್ಲು ಬಿಸಾಕಿ, ಬೈದು ಓಡಿಸುವ ಜನರೇ ಹೆಚ್ಚು.

ನಮ್ಮ ಹಲವಾರು ಕೆಲಸಕ್ಕೆ ದೂಷಿಸುವವರು ಬಹಳಷ್ಟು ಮಂದಿ ಇರುತ್ತಾರೆ. ಅದು ಅವರ ಹಕ್ಕು ಎಂದು ಕಡೆಗಣಿಸಿ ನಾವು ಮುಂದೆ ಸಾಗಬೇಕು ಅಷ್ಟೇ! ಪ್ರತಿಯೊಂದಕ್ಕೂ ನಮ್ಮ ಪೋಷಕರು ಕಲಿಸಿದ ಸಂಸ್ಕೃತಿ ಎಂದು ಎಲ್ಲ ವಿಚಾರಗಳನ್ನು ಪ್ರಶ್ನಿಸಲಾಗುವುದಿಲ್ಲ. ನಾವು ಕಲಿಯುವ ಕಲಿಕೆ, ಕಲಿಸುವ ವಿದ್ಯಾ ಸಂಸ್ಥೆ, ನಮ್ಮ ಗೆಳೆಯರು ಎಲ್ಲವೂ ಕೂಡ ಉತ್ತಮ ಮೌಲ್ಯವನ್ನು ಜೀವನದಲ್ಲಿ ಅಳವಡಿಸುವ ರೂಪುರೇಷೆಯನ್ನು ನಾವು ಬೆಳೆಸಲು ಸಹಕಾರಿಯಾಗುತ್ತದೆ. ಎಷ್ಟು ದುಡಿದರೇನು ಪ್ರಯೋಜನ ಮೌಲ್ಯ ಇಲ್ಲದ ಬದುಕು ನಿಜಕ್ಕೂ ವ್ಯರ್ಥ.

ಹಸಿವು ತಾಳಲಾರದೆ ಪ್ಲಾಸ್ಟಿಕ್‌ ತಿಂದ ಹಸುವಿನ ಘಟನೆ ಬಹಳಷ್ಟು ಬಾರಿ ನಾವು ಕೇಳಿದ್ದೇವೆ. ಅನಾಥವಾಗಿ ಸತ್ತ ಪ್ರಾಣಿಗಳನ್ನು ಕಂಡೂ ಸುಮ್ಮನಾಗುತ್ತೇವೆ. ಜನರಲ್ಲಿ ನಮ್ಮ ಹಾಗೆ ಅದಕ್ಕೂ ಒಂದು ಜೀವ ಇದೆ ಎನ್ನುವ ಮನೋಭಾವನೆ ನಮ್ಮಲ್ಲಿ ಬೆಳೆಯಬೇಕು. ಪ್ರಾಣಿಗಳಿಗೆ ಸಹಾಯ ಮಾಡುವ ಎಲ್ಲ ಸಂಸ್ಥೆ ಹಾಗು ಪ್ರಾಣಿ ಪ್ರಿಯರಿಗೆ ಪೋತ್ಸಾಹ ನೀಡಬೇಕು. ಸಮಯವಿದ್ದಾಗ ನಿಮ್ಮ ಮನೆಯಲ್ಲಿರುವ ಕಂಬಳಿ, ಆಹಾರ, ಪ್ರಾಣಿಗೆ ಬೇಕಾಗುವ ಔಷಧಿಯನ್ನು ನೀಡಿ ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳಿ.

Advertisement

ಆದರೆ ನಿಮ್ಮಿಂದ ಇಂತಹ ಕಾರ್ಯ ಮಾಡಲು ಸಾಧ್ಯವಿಲ್ಲ ಎಂದಲ್ಲಿ ನೀವೇ ನಿಮ್ಮ ಮನೆಯಲ್ಲಿ ಮಾಡಿದ ಆಹಾರವನ್ನು ಪ್ರಾಣಿಗಳಿಗೆ ನೀಡಬಹುದು. ನಿಮಗೆ ನಡೆದು ವ್ಯಾಯಾಮ ಮಾಡುವ ಅಭ್ಯಾಸವಿದ್ದಲ್ಲಿ, ವಸ್ತು ಖರೀದಿಸಲು ಹಾಗೆ ಕೆಲಸದ ನಿಮಿತ್ತ ಹೊರಗೆ ನಡೆದು ಹೋಗುವ ಸಂದರ್ಭದಲ್ಲಿ ಕೈಯಲ್ಲಿ ಮೂಕಪ್ರಾಣಿಗಳಿಗೆ ತಿಂಡಿ ಹಾಕುವ ಯೋಚನೆಯನ್ನು ಬೆಳೆಸಿಕೊಳ್ಳಿ. ಈ ಕೆಲಸಕ್ಕೆ ನಿಮಗೆ ಯಾರು ಕೈ ಜೋಡಿಸುವ ಅಗತ್ಯವಿಲ್ಲ. ನೀವು ಮಾಡುವ ಈ ಪುಣ್ಯ ಕಾರ್ಯ ನೋಡಿ ಜನರು ಪ್ರೇರಣೆಯನ್ನು ಪಡೆಯಬಹುದು. ಜತೆಗೆ ಮನಸ್ಸಿಗೆ ಆಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಒಮ್ಮೆ ಪ್ರಯತ್ನಿಸಿ ನೋಡಿ.

ವಾಟ್ಸ್‌ಅಪ್‌, ಫೇಸ್‌ ಬುಕ್‌ನಲ್ಲಿ ಪ್ರಾಣಿಯ ಜತೆ ಫೊಟೋ ಹಾಕುವುದು ಪ್ರೀತಿಯಲ್ಲ, ಅದರ ಕಷ್ಟಕ್ಕೆ ಸ್ಪಂದಿಸುವುದು ನಿಜವಾದ ಪ್ರೀತಿ. ರಾಜಕಾರಣಿಗಳು, ಸಮಾಜ ಸೇವಕರು, ಹಣವಂತರು ಮನಸ್ಸು ಮಾಡಿದರೆ ಪ್ರಾಣಿಗಳ ಕಷ್ಟಕ್ಕೆ ನ್ಯಾಯ ದೊರಕಿಸಬಹುದು. ಪಶುವೈದ್ಯರು, ಪ್ರಾಣಿಗಳಿಗೆ ನೀಡಬೇಕಾದ ಆಹಾರ, ಚಿಕಿತ್ಸೆ ಕುರಿತಾಗಿ ಶಿಬಿರ ನಡೆಸಲುಸರಕಾರ ಹೆಚ್ಚಿನ ಒತ್ತು ನೀಡಬೇಕು. ಪ್ರಾಣಿಗಳು ನ್ಯಾಯ ಕೇಳಲುಯಾವ ಕೋರ್ಟ್‌, ಪೊಲೀಸ್‌ ಸ್ಟೇಷನ್‌ಗೆ ಹೋಗಲು ಸಾಧ್ಯವಿಲ್ಲ. ನಾವು ಪ್ರಾಮಾಣಿಕತೆ ಯಿಂದ ಮನಸ್ಸು ಮಾಡಿದರೆ ನಮ್ಮಿಂದಾಗದ ಕೆಲಸ ಯಾವುದು ಇಲ್ಲ. ಸ್ವಲ್ಪ ಹೃದಯದಿಂದ ಯೋಚಿಸಿನೋಡಿ. ಬದಲಾವಣೆ ಎಂಬುದು ಮೊದಲು ನಮ್ಮಿಂದ ಆಗಬೇಕು. ನಾವು ಬದಲಾದರೆ ಪ್ರಪಂಚ ತಾನಾಗಿಯೇ ಬದಲಾಗುತ್ತದೆ.

- ಶೃತಿ ಬೆಳ್ಳುಂಡಗಿ

ವಿ.ವಿ. ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next