Advertisement
ಬಾಲ್ಯದ ದಿನಗಳಲ್ಲಿ ಪರೀಕ್ಷೆ ಮುಗಿಸಿದ ಬಳಿಕ ರಜೆಯ ದಿನಗಳು ಬಂತೆಂದರೆ ಸಾಕು, ಬಾಲ್ಯದಿಂದ ಹುಟ್ಟಿ ಬೆಳೆದ ಅಜ್ಜನ ಊರಿನತ್ತ ನಮ್ಮ ಪ್ರಯಾಣ ಸಾಗುತ್ತಿತ್ತು. ರಜೆಯ ಕೊನೆಯ ದಿನದವರೆಗೂ ಮಜೆಯ ದಿನಗಳನ್ನು ಕಳೆಯುತ್ತ ಅಲ್ಲಿಯೇ ಠಿಕಾಣಿ ಹೂಡುತ್ತಿದ್ದೆವು.
Related Articles
Advertisement
ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡಿದರೆ ಸರಿಹೋದಾನೆಂದು ಬಸಣ್ಣನ ಅಪ್ಪ-ಅಮ್ಮ ಯೋಚಿಸುತ್ತಿರುವಾಗಲೇ ಅನಾರೋಗ್ಯದಿಂದ ಬಸಣ್ಣನ ಅಪ್ಪ ಕೊನೆಯುಸಿರೆಳೆದ. ಬದುಕಿನ ಅಷ್ಟು ವರ್ಷವೂ ಜೊತೆಗಿದ್ದ ಗಂಡನ ಸಾವು, ದುಡಿಯದೇ ಯಳ್ಳಷ್ಟೂ ಜವಾಬ್ದಾರಿ ಇಲ್ಲದಂತೆ ತಿರುಗಾಡುವ ಮಗನ ಚಿಂತೆಯಲ್ಲಿಯೇ ಅವನ ಅಮ್ಮನೂ ಹಾಸಿಗೆ ಹಿಡಿದು ಅಸು ನೀಗಿದಳು.
ಹೆತ್ತ ತಂದೆ ತಾಯಿಯನ್ನು ಕಳೆದುಕೊಂಡ ಬಸವಣ್ಣ ಅಕ್ಷರಶಃ ಅನಾಥವಾಗಿ ಬಿಟ್ಟ. ಆತನ ತಂದೆ ತಾಯಿ ತೀರಿಹೋದ ಬಳಿಕ ಊರಿನಲ್ಲಿ ಅವರಿವರು ಒಂದಷ್ಟು ಜನ ಅವನಿಗೆ ಅನ್ನ ನೀರು ಕೊಡುತ್ತ ಸಲಹುತ್ತಿದ್ದರು.
ಊರಿನ ಎಲ್ಲ ತಾಯಂದಿರು ಅಳುವ ತಮ್ಮ ಮಕ್ಕಳನ್ನು ಸಂತೈಸಲು ಹೇಳುವ ಒಂದೇ ಒಂದು ಹೆಸರೆಂದರೆ ಅದು ಬಸಣ್ಣನದು. “”ಸುಮ್ಕೀರ್ ನಮ್ಮಪ್ಪ, ಸುಮ್ಕೀರ್ ನಮ್ಮವ್ವ, ಈಗ ಅತ್ತೆಂದ್ರ ಬಸಣ್ಣನ ಕರಿತೇನಿ ನೋಡ್ ಮತ್” ಅಂದರೆ ಸಾಕು ಮಕ್ಕಳು ಆ ಕ್ಷಣವೇ ಅಳುವುದನ್ನು ನಿಲ್ಲಿಸಿ ಬಿಡುತ್ತಿದ್ದವು. ನಾವಿರುವ ಪಕ್ಕದ ಓಣಿಯವನಾದ ಬಸಣ್ಣ, ಅಣ್ಣ ಅನ್ನುವಷ್ಟೇನೂ ಸಣ್ಣಾತನಲ್ಲ. ಅಜ್ಜ ಅನ್ನುವಷ್ಟೇನು ವಯಸ್ಸಾಗಿರಲಿಲ್ಲ.
ನಾವೆಲ್ಲ ಪ್ರೈಮರಿಯಲ್ಲಿದ್ದಾಗ ಆತನನ್ನು ಪ್ರೀತಿಯಿಂದ ಬಸಜ್ಜ ಎಂದೇ ಕರೆಯುತ್ತಿದ್ದೆವು. ನೋಡಲು ಕಪ್ಪಗಿನ ಬಣ,¡ ತೆಳುವಾದ ದೇಹ, ಅಗಲವಾದ ಮುಖದ ಮೇಲಿರುವ ಕುರುಚಲು ಗಡ್ಡ, ಸದಾ ಹೊಲಸಾಗಿರುತ್ತಿದ್ದ ಬಟ್ಟೆ ಇವಿಷ್ಟು ಬಸಣ್ಣನ ವರ್ಣನೆಯನ್ನು ಸೂಚಿಸುತ್ತಿದ್ದವು.
ಯಾವಾಗಲೂ ಧೋತ್ರ, ಜುಬ್ಟಾದ ಜತೆಗೆ ಹೆಗಲ ಮೇಲೊಂದು ಟವೆಲ್ ಧರಿಸುತ್ತ, ಹಲ್ಲು ಕಿರಿಯುತ್ತ ಹನುಮಂತನ ಹಾಗೇ ಗಲ್ಲ ಉಬ್ಬಿಸಿ ಮಕ್ಕಳನ್ನು ತನ್ನ ಕಣ್ಣ ಸನ್ನೆಯಿಂದಲೇ ಹೆದರಿಸುತ್ತಿದ್ದ. ಹಾಗಾಗಿ ಬಸಜ್ಜನನ್ನು ಊರಿನ ಸುತ್ತ-ಮುತ್ತಲಿನ ನಾಲ್ಕಾರು ಓಣಿಯ ತಾಯಂದಿರು, ಅಳುತ್ತಿರುವ ತಮ್ಮ ಮಕ್ಕಳ ಬಾಯಿಯನ್ನು ಮುಚ್ಚಿಸುವ ಗುಮ್ಮನನ್ನಾಗಿಸಿಕೊಂಡಿದ್ದರು. ಇದಿಷ್ಟೆ ಅಲ್ಲದೇ ನಮ್ಮ ಊರಿನಲ್ಲಿ ಬಸಣ್ಣಜ್ಜ ಅಷ್ಟೆಲ್ಲ ಪ್ರಸಿದ್ಧಿಯಾಗಲು ಬಲವಾದ ಒಂದು ಕಾರಣವಿತ್ತು ಎಂದರೆ ತಪ್ಪಿಲ್ಲ.
ಊರಿನಲ್ಲಿ ಯಾವುದೇ ಮನೆಗಳಲ್ಲಿ ಮದುವೆ-ಮುಂಜಿವೆ ಶುಭ-ಸಮಾರಂಭಗಳಾಗಲಿ, ಸೀಮಂತ ಕಾರ್ಯವಾಗಲಿ, ಊರಿನ ಯಾರದೇ ಹುಟ್ಟು-ಹಬ್ಬವಾಗಲಿ, ಊರಿನ ಜಾತ್ರೆ ಇರಲಿ, ಏನೇ ಇದ್ದರೂ ಬಸಣ್ಣಜ್ಜನ ಡ್ಯಾನ್ಸು ಇರದೇ ಹೋದರೆ ಆ ಶುಭಕಾರ್ಯಗಳು ಒಂದು ರೀತಿಯಲ್ಲಿ ಯುವಕರ ಪಾಲಿಗೆ ಅಪೂರ್ಣವಾಗಿ ಬಿಡುತ್ತಿದ್ದವು. ಬಸಣ್ಣಜ್ಜ ತಾನೂ ಡ್ಯಾನ್ಸ್ ಮಾಡುತ್ತ ತನ್ನ ಸುತ್ತ ನಿಂತಿದ್ದ ಮಕ್ಕಳನ್ನೂ ಕೈ ಹಿಡಿದು ಎಳೆದು ಕುಣಿಸಿದಾಗಲೇ ಆ ಮೆರವಣಿಗೆಗೆ ಒಂದು ಮೆರಗು ಬರುತ್ತಿತ್ತು. ಆತನ ಡ್ಯಾನ್ಸು ನೋಡಲೆಂದೇ ನಾವೆಲ್ಲ ಮೆರವಣಿಗೆ ಹಿಂಬಾಲಿಸುತ್ತಿದ್ದೆವು.
ಭಜಂತ್ರಿಯವರು ಬಾರಿಸುವ ಹಾಡಿಗೂ ಬಸಣ್ಣಜ್ಜ ಹಾಕುತ್ತಿದ್ದ ಸ್ಟೆಪ್ಪಿಗೂ ಯಾವ ರೀತಿಯಿಂದಲೂ ಹೋಲಿಕೆ ಯಾಗುತ್ತಲಿರಲಿಲ್ಲ. ಆತ ಕುಣಿಯಲು ಆರಂಭಿಸಿದಾಗ ನಾವೂ ಅವನೊಟ್ಟಿಗೆ ಕುಣಿಯುತ್ತ ಹೋ ”………….” ಎಂದು ಕೂಗುತ್ತ ಸಂತಸ ಪಡುತ್ತಿದ್ದೆವು. ಒಂದು ಚೂರು ಎಣ್ಣೆ ಹಾಕದೇ ಕುಡುಕರಿಗಿಂತಲೂ ಹೆಚ್ಚು ಟೈಟಾದವನಂತೆ ವರ್ತಿಸುತ್ತಿದ್ದ. ಅದಕ್ಕೆಂದೆ ಬಸಣ್ಣಜ್ಜನು ಡ್ಯಾನ್ಸು ಮಾಡುತ್ತ ಕುಣಿದು ಕುಪ್ಪಳಿಸುವ ಕ್ಷಣಕ್ಕಾಗಿ ಜನ ನಿಂತು ಕಾಯುತ್ತಿದ್ದರು.
ಅವನ ಜೊತೆ ಕುಣಿಯಲೆಂದು ಒಂದೆಡೆ ಕುಡುಕರೂ ಜೊತೆ ಗೂಡುತ್ತಿದ್ದರು. ಇನ್ನೊಂದೆಡೆ ಮೆರವಣಿಗೆ ನೋಡಲು ಸೇರಿರುವ ಅವರಿವರು ಒಂದಷ್ಟು ನೋಟುಗಳನ್ನು ಸೇರಿಸಿ ನೋಟಿನ ಹಾರ ಮಾಡಿ ಬಸಣ್ಣನ ಕೊರಳಿಗೆ ಹಾಕಿ ತಮ್ಮ ಖುಷಿಯನ್ನು ವ್ಯಕ್ತ ಪಡಿಸುತ್ತಿದ್ದರು.
ಇದೆಲ್ಲವನ್ನೂ ನೋಡುತ್ತಲೆ ಇದ್ದ ನಾವೆಲ್ಲ “”ನಾವೂ ದೊಡ್ಡವರಾದ ಮೇಲೆ ಡ್ಯಾನ್ಸು ಮಾಡಬೇಕು ಕಣ್ರೋ….. ನಮಗೂ ನೋಟಿನ ಹಾರ ಹಾಕ್ತಾರೆ” ಅಂತ ಸ್ನೇಹಿತರೆಲ್ಲರೂ ಗುಂಪಾಗಿ ಸೇರಿ ನಮ್ಮ ನಮ್ಮಲ್ಲೆ ಮಾತನಾಡಿಕೊಳ್ಳುತ್ತಿದ್ದೆವು. ಬಸಣ್ಣಜ್ಜನೆಂದರೆ ನಮಗೆಲ್ಲ ಎಷ್ಟು ಹುಚ್ಚೆಂದರೆ ಒಮ್ಮೊಮ್ಮೆ ಊಟದ ಯೋಚನೆಯನ್ನೆ ಮರೆತು ಅಜ್ಜ ಅಜ್ಜಿಯ ಕಣ್ಣು ತಪ್ಪಿಸಿ ಬಸಣ್ಣನ ಡ್ಯಾನ್ಸು ನೊಡಲು ಹಾಜರಿರುತ್ತಿದ್ದೆವು.
ಹೀಗೆ ನಾವು ಬಸಣ್ಣನ ಬೆನ್ನತ್ತಿ ತಿರುಗುತ್ತಿದ್ದಾಗ ಮನೆಯ ಮುಂದೆ ಕಟ್ಟೆಯ ಮೇಲೆ ಕುಳಿತಿರುತ್ತಿದ್ದ ಅಜ್ಜಿ ದಾರಿಯಲ್ಲಿ ಹೋಗುವವರಿಗೆ, ಬರುವವರಿಗೆ “”ಏ ಯಪ್ಪಾ ನನ್ನ ಮೊಮ್ಮಗನ ನೋಡದ್ಯಾ? ನಿಮ್ಮೊಣಿ ಕಡೆ ಬಂದಿದೆ°ನನ್, ಒಂದ್… ಮುಂಜಾನೆ ಹೋಗ್ಯಾನ ಇನ್ನೂ ಬಂದಿಲ್ಲ” ಅಂತ ಕೇಳುತ್ತಿದ್ದಳು. ಬೆಳಗ್ಗೆ ಮನೆ ಬಿಟ್ಟು ಮದ್ಯಾಹ್ನದ ಊಟವನ್ನೇ ಮರೆತು ಸಂಜೆಯ ಹೊತ್ತಿಗೆ ಬಂದು ಮನೆ ಸೇರುತ್ತಿದ್ದ ನಾನು ಅಪ್ಪನ ಕಡೆಯಿಂದ ಸುಮಾರು ಬಾರಿ ಹೊಡೆಸಿಕೊಂಡದ್ದು ಮರೆಯದ ನೆನಪು.
ಒಂದಿನ ಊರಿನಲ್ಲಿ ವೀರಾಂಜನೇಯನ ಬಾರಿ ದೊಡ್ಡ ಜಾತ್ರೆಯ ಸಡಗರ. ಇಡೀ ಊರಿಗೆ ಊರೆ ಜಾತ್ರೆಯ ಸಂಭ್ರಮದಲ್ಲಿ ಮುಳುಗಿಹೋಗಿತ್ತು. ದೇಗುಲದ ಸುತ್ತ-ಮುತ್ತ ಅರ್ದಮೈಲು ಬೆಂಡು ಬೆತ್ತಾಸು, ಹೂಹಣ್ಣು, ಕರ್ಪೂರ, ಆಟದ ಸಾಮಾನು ಬಲೂನು ಹೀಗೆ ವಿವಿಧ ಅಂಗಡಿಗಳ ಸಾಲುಸಾಲು ತೆರೆದುಕೊಂಡಿದ್ದವು. ಸಂಜೆ ಹೊತ್ತಿಗೆ ಊರಿನ ಎಲ್ಲ ಹಿರಿಯರು ಮಾತೆಯರು ಸೇರಿಕೊಂಡು ತೇರನ್ನು ಎಳೆಯಲು ನಡೆಯುತ್ತಿದ್ದರೆ, ನಾವು ಗೆಳೆಯರೂ ಮತ್ತು ಸುತ್ತ-ಮುತ್ತಲ ಹತ್ತಾರೂ ಮನೆಯ ಚಿಕ್ಕ ಮಕ್ಕಳೆಲ್ಲರೂ ಬಸಣ್ಣನ ಡ್ಯಾನ್ಸು ನೊಡಲು ತೇರಿನ ಮುಂದೆ ಹೊರಹೊಮ್ಮುತ್ತಿದ್ದ ನಗಾರಿ,ಡೊಳ್ಳಿಯ ನಾದದತ್ತ ಹೆಜ್ಜೆ ಹಾಕುತ್ತಿದ್ದರು.
ಅಲ್ಲಿಯವರೆಗೆ ಎಲ್ಲಿಯೂ ಕಾಣದಾಗಿದ್ದ ಬಸಣ್ಣ ತಟ್ಟನೇ ನಾದ ಕೇಳುತ್ತಲೇ ಅಲ್ಲಿ ಪ್ರತ್ಯಕ್ಷನಾಗಿದ್ದ. ಬಸಣ್ಣ ಕುಣಿದು ಕುಪ್ಪಳಿಸುತ್ತಿದ್ದುದನ್ನ ನೋಡಿ ಸಂಭ್ರಮಿಸುತ್ತ ಅವನೊಟ್ಟಿಗೆ ನಾವೆಲ್ಲರೂ ಹೆಜ್ಜೆ ಹಾಕುತ್ತ ಜಾತ್ರೆಯು ಅಲ್ಲಿಗೆ ಸ್ತಬ್ಧಗೊಳ್ಳುತ್ತಿತ್ತು.
ಜಾತ್ರೆಯ ಬಳಿಕ ಒಂದೆರಡು ದಿನ ಕಳೆದಿರಲಿಲ್ಲ, ನಾವು ದಿನವೂ ಮೈದಾನದತ್ತ ಹೋಗುವ ಹಾಗೇ ಆಟವಾಡಲೂ ಹೋಗಿದ್ದೇವು. ಮದ್ಯಾನ ಉರಿ ಬಿಸಿಲು ನೆತ್ತಿಗೇರುತ್ತಲೇ ಆಟಮುಗಿಸಿ ಮನೆಯತ್ತ ನಡೆಯುತ್ತಿದ್ದ ನಾವು ನಮ್ಮ ನಮ್ಮಲೇ ಬಸಣ್ಣ ನಿಮ್ಮ ಮನೆಹತ್ತಿರ ಬಂದಿದ್ದಾನಾ? ನೀನು ಬರುವಾಗ ನಿನಗೇನಾದರೂ ಸಿಕ್ಕಿದ್ದನಾ, ಅವನು ಕಳೆದೆರಡು ದಿನಗಳಿಂದ ಕಾಣುತ್ತಿಲ್ಲ ಅಂತೆಲ್ಲ ಮಾತನಾಡಿಕೊಂಡೆವು.
ಬೆಳಗಾದರೆ ಸಾಕು ದಿನವೂ ಬಸ್‌ಸ್ಟಾಂಡ್ ಪಕ್ಕದಲ್ಲಿನ ದೊಡ್ಡ ಹುಣಸೆ ಮರದ ನೆರಳಿನಲ್ಲಿ ಬಂದು ಕುಳಿತಿರುತ್ತಿದ್ದ ಬಸಣ್ಣ, ಇದ್ದಕ್ಕಿದ್ದಂತೆ ಒಂದೆರಡು ದಿನ ಅಲ್ಲಿಯೂ ಇರದೇ, ಯಾವ ಓಣಿಯಲ್ಲಿಯೂ ಕಾಣದೇ ಇದ್ದಾಗ, ಸ್ನೇಹಿತರೆಲ್ಲ ಸೇರಿಕೊಂಡು ಆತನ ಗುಡಿಸಲಿನತ್ತ ಹೋಗಿ ಬರೋಣವೆಂದು ಮಾತನಾಡಿ ಕೊಂಡೆವು. ಹಾಗೇ ಮಾತನಾಡಿಕೊಂಡು ಒಂದಷ್ಟು ಹುಡುಗರು ಸೇರಿ ಆತನ ಗುಡಿಸಲಿನತ್ತ ಹೋದಾಗ ನಮಗೆ ಅಲ್ಲೊಂದು ಅಚ್ಚರಿ ಕಾದಿತ್ತು.
ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಸಣ್ಣಜ್ಜ ಉಸಿರಾಟ ನಿಲ್ಲಿಸಿ ಅಂಗಾತ ಮಲಗಿದ್ದ. ಹಿಂದಿನ ರಾತ್ರಿಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆನ್ನುವ ಸುದ್ದಿಯನ್ನು ಅಲ್ಲಿ ನೆರದಿದ್ದ ಜನ ಮಾತನಾಡಿ ಕೊಳ್ಳುತ್ತಿರುವುದನ್ನು ಕೇಳುತ್ತಲೇ, ನಾವೆಲ್ಲ ನಮ್ಮ ಸ್ವಂತ ತಾತನನ್ನೇ ಕಳೆದುಕೊಂಡವರಷ್ಟು ದುಃಖೀತರಾಗಿದ್ದೆವು. ಇಡೀ ಊರಿಗೆ ಊರೇ ಬಸಣ್ಣಜ್ಜನನ್ನು ನೆನಸಿಕೊಂಡು ಕಣ್ಣಿರಾಗಿತ್ತು.
ಈಗಲೂ ನಮಗೆ ಊರೆಂದರೆ ವಿಶಾಲವಾದ ಹುಣಸೆ ಮರದ ನೆರಳು, ಕುಡಿಯುವ ನೀರಿನ ಕೆರೆ, ಪಾಳುಬಿದ್ದ ಹಣುಮಂತ ದೇವರ ಗುಡಿ, ಅರಳಿಕಟ್ಟೆಗೆ ಕುಳಿತು ತಂಬಾಕು ಜಗಿಯುವ ಮುದಕರು, ಟೈಯರ್ ಗಾಲಿಗಳನ್ನು ಉರುಳಿಸುತ್ತ ತಿರುಗಾಡುವ ಮಕ್ಕಳು ಇವರೆಲ್ಲರ ನಡುವೆ ಬಸಣ್ಣ ಇಂದಿಗೂ ಊರಿನ ಓಣಿ ಓಣಿಗಳಲ್ಲಿ ಮನೆ-ಮನಸ್ಸುಗಳಲ್ಲಿ ಕುಣಿಯುತ್ತಲೇ ಇದ್ದಾನೆ.
ಅಕ್ಷಯಕುಮಾರ ಜೋಶಿ
ಹುಬ್ಬಳ್ಳಿ