Advertisement

UV Fusion: ಮರಳಿ ಶಾಲೆಗೆ

03:00 PM Jun 22, 2024 | Team Udayavani |

ಬಾನೆತ್ತರಕ್ಕೆ ಹಾರುವ ಗಾಳಿಪಟ, ಜೋಕಾಲಿಯಲ್ಲಿ ಜೀಕುವ ಹುಡುಗಿ, ಜಾರುಬಂಡಿಯಲ್ಲಿ ಜಾರುವ ಹುಡುಗ, ಹೊಳೆಯಲ್ಲಿ ಸಮಯದ ಪರಿವೇ ಇಲ್ಲದೆ ಈಜಿ ದಡಕ್ಕೆ ಬಂದು ಮೈ ಕಾಸಿಕೊಳ್ಳುವ ಪೋರರು, ಅಮ್ಮನೊಂದಿಗೆ ಹಪ್ಪಳ, ಸಂಡಿಗೆಯಲ್ಲಿ ಕೈ ಜೋಡಿಸುವ ಬೆರಗು ಕಣ್ಣಿನ ಮಗಳು, ಅಜ್ಜಿಯೊಂದಿಗೆ ಮದುವೆ ಮನೆ ಊಟ ಮುಗಿಸಿ ದಾರಿಯುದ್ದಕ್ಕೂ ಕತೆ ಕೇಳುತ್ತಾ, ಹೇಳುತ್ತಾ ಅರಳು ಹುರಿದಂತೆ ಮಾತಾಡುವ ಮಗ, ನಾಲ್ಕು ಕೋಣೆಗಳ ಮಧ್ಯ ಮೊಬೈಲ್‌ ಅಲ್ಲೇ ಪ್ರಪಂಚವನ್ನು ಜಾಲಾಡುತ್ತಿರುವ ನಮ್ಮ ಪೇಟೆಯ ಮುದ್ದು ಮಕ್ಕಳು ಎಲ್ಲರೂ ತಮ್ಮ ತಮ್ಮ ಶಾಲಾ ಬ್ಯಾಗ್‌, ಪುಸ್ತಕ ಜೋಡಿಸಿ ಕೊಳ್ಳುತ್ತಿದ್ದಾರೆ.

Advertisement

ಹೊಸ ಪುಸ್ತಕದ ಘಮದೊಳಗೆ ರಜೆಯ ಮಜದ ಬೆಚ್ಚನೆಯ ನೆನಪುಗಳನ್ನು ಬಚ್ಚಿಡುತ್ತಿದ್ದಾರೆ. ಇನ್ನು ಕೆಲವರು ಪುಸ್ತಕ ಎಲ್ಲಿದೆ ಎಂದು ಹುಡುಕುತ್ತಿದ್ದಾರೆ. ಟೀಚರ್‌ ಕೊಟ್ಟ ಹೋಂವರ್ಕ್‌ ಎರಡೇ ದಿನದಲ್ಲಿ ಮುಗಿಸಿ ಟೀಚರ್‌ಗೆ ಒಪ್ಪಿಸುವ ಧಾವಂತದಲ್ಲಿದ್ದಾರೆ. ಕೆಲವರು ಅಕ್ಕ ಅಣ್ಣನಿಗೆ ಪೂಸಿ ಹೊಡೆದು ಬರೆದುಕೊಡುವಂತೆ ಗೋಗೆರೆಯುತ್ತಿದ್ದಾರೆ.

ಹೌದು! ಶಾಲೆ ಪುನರಾರಂಭ ಆಗುತ್ತಿದೆ. ಎರಡು ತಿಂಗಳುಗಳ ಕಾಲ ರಜೆಯ ಮಜದಲ್ಲಿ ಕಳೆದು ಹೋದ ಮಕ್ಕಳು ಶಾಲೆ ಕಡೆ ಮುಖ ಮಾಡುತ್ತಿದ್ದಾರೆ. ಅಜ್ಜಿಯ ಮನೆಯಲ್ಲಿ ಕಾಡು-ಮೇಡು, ತೋಟ-ಗದ್ದೆ, ಮಾಲ್, ಸಿನೆಮಾ, ಬೀಚ್‌ ಮದುವೆ ಮುಂಜಿ ಎಂದೆಲ್ಲಾ ತಿರುಗಿ ಕಳೆದು ಹೋದ ಮಕ್ಕಳಿಗೆ ಶಾಲೆಯ ಆರಂಭ ನೂರಾರು ಕನಸುಗಳನ್ನು ಕಟ್ಟಿಕೊಡುತ್ತಿವೆ. ಗೆಳೆಯರೊಂದಿಗೆ ಮತ್ತೆ ಕೂಡಿಕೊಳ್ಳುವ ಕಾತರವಿದೆ. ಕಳೆದ ವರ್ಷದಂತೆ ಈ ವರ್ಷವೂ ಅದೇ ಟೀಚರ್‌ ನಮ್ಮ ಶಾಲೆಯಲ್ಲಿ ಇದ್ದರೆ ಸಾಕೆಂಬ ಪ್ರಾರ್ಥನೆಯೂ ಜತೆಗಿದೆ.

ಪಕ್ಕದಲ್ಲೇ ಕುಳಿತುಕೊಳ್ಳುವ ಗೆಳೆಯ/ಗೆಳತಿ ಈ ವರ್ಷವೂ ತನ್ನೊಂದಿಗೇ ಕುಳಿತುಕೊಳ್ಳಬೇಕೆಂಬ ಹಂಬಲವಿದೆ. ರಜೆಯಲ್ಲಿ ತಾವು ಮಾಡಿದ ಘನಂದಾರಿ ಕೆಲಸಗಳ ಬಗ್ಗೆ, ಎಲ್ಲೆಲ್ಲಾ ಓಡಾಡಿದೆ ಎಂಬ ವರದಿಯನ್ನು ಒಪ್ಪಿಸುವಾಗ ಕಿವಿಯಾಗುವ ಟೀಚರ್‌, ಅಡುಗೆ ಆಂಟಿಯನ್ನು ಮಾತಾಡಿಸಿ ಎಲ್ಲ ಹೇಳಿ ಬಿಡಬೇಕು ಎಂಬ ಅದಮ್ಯ ಉತ್ಸಾಹವಿದೆ.

ಶಾಲೆಗೆ ಹೊಸದಾಗಿ ಸೇರುವ ಮಗುವಿನ ಮನದಲ್ಲೊಂದು ಅವ್ಯಕ್ತ ಭಯವಿದೆ. ಅಮ್ಮ ಶಾಲೆಗೆ ಸೇರಿಸಿ ಇಡೀ ದಿನ ನೀ ಅಲ್ಲಿಯೇ ಇರಬೇಕು ಎಂದು ಅಮ್ಮನಿಗೆ ಮಗು ತಾಕೀತು ಮಾಡುತ್ತಿದೆ. ಶಾಲೆಯ ಸೀನಿಯರ್‌ ಮಕ್ಕಳ ಮನದಲ್ಲಿ ಕನಸುಗಳು ಗರಿಗೆದರಿವೆ. ಈ ಸಲ ನಾವೇ ಎಲ್ಲ ಮಂತ್ರಿ ಸ್ಥಾನ ಪಡೆಯಬೇಕು, ಚೆಂದ ಕೆಲಸ ಮಾಡಿ ಟೀಚರ್‌ ಹತ್ರ ಶಹಬ್ಟಾಸ್‌ ಅನಿಸಿಕೊಳ್ಳಬೇಕೆಂಬ ಕನಸುಗಳೊಂದಿಗೆ ಶಾಲೆಕಡೆಗೆ ಮುಖ ಮಾಡುತ್ತಿ¨ªಾರೆ. ಹೊಸಪುಸ್ತಕದ ಘಮದೊಳಗೆ ಅಕ್ಷರ ತಪೋವನದಲ್ಲಿ ಚಿಣ್ಣರ ಚಿಲಿಪಿಲಿಯ ಕಂಪು ಹರಡಲಿದೆ.

Advertisement

ಮಕ್ಕಳು ಮಾತ್ರವಲ್ಲ ಶಿಕ್ಷಕರೂ ಸಹ ಚುನಾವಣ ಕರ್ತವ್ಯ ಮುಗಿಸಿ ವೈಯಕ್ತಿಕ ಜೀವನಕ್ಕೆ ಒಂದಿಷ್ಟು ಸಮಯ ಮೀಸಲಿರಿಸಿ, ರಜೆ ಮುಗಿಸಿಕೊಂಡು ಹತ್ತು ಕೈಗಳು ಮಾಡುವ ಕೆಲಸವನ್ನು ಎರಡೇ ಕೈಯಲ್ಲಿ ಮಾಡಿ ಮುಗಿಸುವಷ್ಟು ಸೂಪರ್‌ ಮ್ಯಾನ್‌ಗಳಂತೆ ಸಿದ್ಧರಾಗಿ ಮಕ್ಕಳ ಬರುವಿಕೆಗೆ ಕಾಯುತ್ತಿದ್ದಾರೆ.‌

ಮತ್ತದೇ ಬಸ್‌, ಅದೇ ಓಡಾಟ, ಅದೇ ಕ್ಲಸ್ಟರ್‌ನ ಶಿಕ್ಷಕರುಗಳು, ಸ್ಯಾಟ್ಸ್‌ ಆನ್ಲೈನ್‌ ಎಂಟ್ರಿಗಳ ತಂತ್ರಜ್ಞಾನ, ಗ್ರಂಥಪಾಲಕ, ಲೆಕ್ಕಪರಿ ಶೋಧಕ, ಬಿ.ಎಲ್.ಒ, ಗಣತಿದಾರ, ಹೆಡ್‌ ಮಾಸ್ಟರ್‌, ಅಸಿಸ್ಟೆಂಟ್‌ ಟೀಚರ್‌, ಪಿ.ಟಿ. ಮೇಷ್ಟ್ರು ಹೀಗೆ ಹತ್ತು ಹಲವಾರು ಹುದ್ದೆಗಳ ಕೆಲಸಗಳನ್ನು ಒಬ್ಬರೇ ನಿರ್ವಹಿಸುವ ಶಕ್ತಿ ಹೊಂದಿರುವ ಶಿಕ್ಷಕರು ಕರ್ಮಭೂಮಿಯೆಡೆಗೆ ಮುಖ ಮಾಡಿ ಮಕ್ಕಳಿಗಾಗಿ ಕಾಯುತ್ತಿದ್ದಾರೆ.

ಅವರಲ್ಲೂ ಹತ್ತು ಹಲವು ನಿರೀಕ್ಷೆಗಳಿವೆ. ಶಾಲೆಗೆ ಈ ವರ್ಷ ಆದರೂ ಹೊಸ ಶಿಕ್ಷಕರು ಬರಲಿ, ಮಕ್ಕಳ ಸಂಖ್ಯೆ ಜಾಸ್ತಿಯಾಗಲಿ, ಒಂದಿಷ್ಟು ಹೊಸ ಯೋಜನೆಗಳಿಂದ ಶಾಲೆಯ ಅಭಿವೃದ್ಧಿ ಮಾಡಲು ದಾನಿಗಳು ಸಹಕಾರ ಮಾಡಲಿ ಎಂಬ ನಿರೀಕ್ಷೆಗಳನ್ನು ಹೊತ್ತು ಹೊಸ ಶೈಕ್ಷಣಿಕ ವರ್ಷಕ್ಕೆ ಕಾಲಿಡುತ್ತಿ¨ªಾರೆ.

ಇಲ್ಲಿ ಮಕ್ಕಳು ಮತ್ತು ಶಿಕ್ಷಕರು ಇಬ್ಬರೂ ಹತ್ತು ಹಲವು ಕನಸುಗಳು, ನಿರೀಕ್ಷೆಗಳೊಂದಿಗೆ ಶಾಲೆಯಂಗಳಕ್ಕೆ ಹೆಜ್ಜೆ ಇಡುತ್ತಿದ್ದಾರೆ.

ಹಲವು ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು, ಒಗ್ಗಿಕೊಳ್ಳಲು,ಪ್ರಯೋಗಕ್ಕೆ ಒಳಗಾಗಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಎಲ್ಲರಿಗೂ ಈ 2024-25ರ ಶೈಕ್ಷಣಿಕ ಬಲವರ್ಧನ ವರ್ಷ ಒಳಿತೇ ಮಾಡಲಿ. ಆಲ್‌ ದಿ ಬೆಸ್ಟ್‌….

-ರೇಖಾ ಪ್ರಭಾಕರ್‌

Advertisement

Udayavani is now on Telegram. Click here to join our channel and stay updated with the latest news.

Next