Advertisement
ಪ್ರತಿ ದಿನ ಮನಸ್ಸಿನದ್ದು ಇದೇ ಪ್ರತಿಭಟನೆ. ನೀನು ಕಾಲೇಜಿಗೆ ಹೋಗಬೇಡ, ಥಿಯೇಟರ್‌ನಲ್ಲಿ ಹೊಸ ಸಿನೆಮಾ ಬಂದಿದೆ.
Related Articles
Advertisement
ಹಾಗಂತ ನಾನು ನನ್ನ ಜೀವನದಲ್ಲಿ ಇಷ್ಟೊಂದು ತತ್ವ ಶಾಸ್ತ್ರದ ಸಿದ್ಧಾಂತಗಳನ್ನು ಅಳವಡಿಸಿದ್ದೇನೆ ಎಂದು ಭಾವಿಸಬೇಡಿ. ನನ್ನ ಗುರಿಯನ್ನು ಇಲ್ಲಿ ಪ್ರಸ್ತುತ ಪಡಿಸಲೆಂದು ಈ ಉದಾಹರಣೆಯನ್ನು ಬಳಸಿದ್ದೇನೆ. ಒಂದೇ ಮಾತಿನಲ್ಲಿ ಹೇಳುವುದಾದರೇ ನನ್ನ ಗುರಿ ನಾನು ಬೆಳಗಬೇಕು. ನನ್ನ ಜತೆ ಇತರರೂ ಬೆಳಗಬೇಕು. ನನ್ನ ಗುರಿ ಎಂದಾಗ ನೆನಪಾಗುವುದು ಅಬ್ದುಲ್ ಕಲಾಂ ಹೇಳಿದ ಮಾತು “ನೀನು ಸೂರ್ಯನಂತೆ ಬೆಳಗಬೇಕಾದರೆ ಮೊದಲು ಸೂರ್ಯನಂತೆ ಉರಿಯಬೇಕು.’
ಅಬ್ದುಲ್ ಕಲಾಂ ಅವರ ಪ್ರಕಾರ ಕಷ್ಟಪಟ್ಟರೆ ಮಾತ್ರವೇ ಇಷ್ಟಾರ್ಥ ಈಡೇರುವುದು. ಇದೇ ಕಾರಣದಿಂದಾಗಿ ನಾನು ನನ್ನ ಗುರಿಯನ್ನು ಹೊಂದಲು ನನ್ನ ಎಲ್ಲಾ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ ಕಾಲೇಜು ಮೆಟ್ಟಿಲೇರಿ ನನ್ನ ಗುರಿಯನ್ನು ತಲುಪಬೇಕೆಂಬ ಛಲ. ನನ್ನ ಕಣ್ಣುಗಳು ಕನಸುಗಳಿಂದ ತುಂಬಿಕೊಂಡಿದ್ದು, ನಿದ್ರೆಯ ಮಂಪರಿನಲ್ಲಿ ಆವರಿಸುವ ಕನಸುಗಳನ್ನು ಮೀರಿಸುವಂತೆ ನನ್ನ ನಿಜ ಜೀವನದ ಕನಸುಗಳು ನನ್ನನ್ನು ಎಚ್ಚರಿಸುತ್ತಿವೆ.
ಸರಳವಾಗಿ ಹೇಳುವುದಾದರೆ ನನ್ನ ತಂದೆ- ತಾಯಿ ಪಕ್ಕದ ಮನೆಯ ಹುಡುಗನಿಗೆ ಕೆಲಸ ಸಿಕ್ಕಿದ ಸಂಭ್ರಮವನ್ನು ಕಂಡು ನನ್ನ ಮಗಳಿಗೂ ಯಾವುದಾದರೂ ಒಳ್ಳೆಯ ಉದ್ಯೋಗ ಸಿಗ ಬೇಕು, ಕೈ ತುಂಬಾ ಸಂಬಳ ಇರಬೇಕು ಎಂದು ಬಯಸುತ್ತಾರೆ. ಅವರ ಕನಸುಗಳನ್ನು ನಾನು ಯಾವತ್ತಿಗೂ ನುಚ್ಚು ನೂರು ಮಾಡಲಾರೆ. ನಾನೂ ಅದೇ ರೀತಿ ಕನಸು ಕಾಣುತ್ತಿದ್ದೇನೆ. ತಂದೆ ತಾಯಿಯ ಆಸೆಗಳನ್ನು ಈಡೇರಿಸುವುದೂ ನನ್ನ ಗುರಿಯ ಭಾಗ.
ಕೇವಲ ನನ್ನ ಕುಟುಂಬಕ್ಕೇ ಉಪಕರಿಸಿದರೆ ಸಾಲದು. ನನ್ನಿಂದ ಈ ಸಮಾಜಕ್ಕೂ ಏನಾದರೂ ಉಪಕಾರವಾಗಬೇಕು. ನನ್ನ ಕುಟುಂಬ ಹಾಗೂ ಸಮಾಜ ಸೇವೆ ಮಾಡಲು ನಾನು ಉತ್ತಮ ಪತ್ರಕರ್ತೆಯಾಗಬೇಕು. ಕೇವಲ ಸುದ್ದಿಗಳನ್ನು ವರದಿ ಮಾಡುವ ಪತ್ರಕರ್ತೆಯಲ್ಲ ಬದಲಾಗಿ ಸಮಾಜದ ನ್ಯೂನತೆಗಳನ್ನು ಮುಖ್ಯವಾಹಿನಿಯ ಗಮನಕ್ಕೆ ತರಬೇಕು. ಈ ಮೂಲಕ ಬಡ ಜನರ, ಮುಗ್ಧರ, ಹಿಂದುಳಿದ ವರ್ಗದವರ ಧ್ವನಿಯಾಗಬೇಕು.
ಇವೆಲ್ಲವೂ ಕೈಗೆಟಕದ ಆಕಾಶದ ನಕ್ಷತ್ರ ಎಂದು ಭಾವಿಸಬೇಡಿ. ಕಠಿನ ಪರಿಶ್ರಮ, ಉತ್ತಮ ಮಾರ್ಗದರ್ಶನ, ಏನೇ ಆದರೂ ಬದಲಾಯಿಸದ ಗುರಿ ಇದ್ದರೆ ಯಾವುದನ್ನೂ ಸಾಧಿಸಬಹುದು. ನಾನು ಸೂರ್ಯನಂತೆ ಹೊಳೆಯಬೇಕಾದರೇ ಸೂರ್ಯನಂತೆ ಉರಿಯಲೇಬೇಕು. ಈ ಗುರಿಯನ್ನು ಇಟ್ಟುಕೊಂಡು ಸಾಕಾರದತ್ತ ಹೊರಟಿದ್ದೇನೆ.– ಶ್ರೀ ನಿಧಿ ರಾವ್, ಅಂಡಾರು, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ