ಎಂದಿನಂತೆ ಕಾಲೇಜು ಮುಗಿಸಿ ರೈಲಿಗೆ ತಡವಾಯಿತೆಂದು ಆತುರಾತುರವಾಗಿ ರೈಲು ನಿಲ್ದಾಣದೆಡೆಗೆ ಹೆಜ್ಜೆಹಾಕುತ್ತಿದ್ದೆ. ಪುಣ್ಯಕ್ಕೆ, ಆ ದಿನ ನಾನು ಪ್ರಯಾಣ ಮಾಡುವ ರೈಲು ತಡವಾಗಿ ಹೊರಟದ್ದರಿಂದ ರೈಲು ತಪ್ಪಲಿಲ್ಲ.
ರೈಲಿನಲ್ಲಿ ಒಟ್ಟಿಗೆ ಪ್ರಯಾಣ ಮಾಡುವ ಗೆಳೆಯ ಕಿಟಕಿ ಬದಿಯ ಸೀಟನ್ನು ಕಾಯ್ದಿರಿಸಿದ್ದರಿಂದ ಅಲ್ಲೇ ಕುಳಿತೆ. ರೈಲು ಹೊರಡಲು ಅನುವಾಯಿತು. ಓಡಿ ಬಂದದ್ದರಿಂದ ಬೆವರಿದ್ದ ಮುಖಕ್ಕೆ ತಣ್ಣನೆಯ ಗಾಳಿ ಆಹ್ಲಾದಕರವೆನಿಸಿತ್ತು.
2 ಘಂಟೆಗಳ ಪ್ರಯಾಣದ ಅನಂತರ ಬೇಕಲಕೋಟೆ ರೈಲು ನಿಲ್ದಾಣಕ್ಕೆ ರೈಲು ತಲುಪಿತು. ತಂಗಾಳಿಗೆ ಸುಮಧುರ ಹಾಡೂ ಜೊತೆಯಾದದ್ದರಿಂದ, ಬೇಕಲಕೋಟೆಗೆ ತಲುಪಿದ್ದೇ ತಿಳಿಯಲಿಲ್ಲ. ಎಂದಿನಂತೆ ರೈಲಿನಿಂದ ಇಳಿದು ಗೆಳೆಯ ನೊಂದಿಗೆ ಹರಟೆ ಹೊಡೆಯುತ್ತಾ ಮುಂದೆ ಸಾಗುತ್ತಿದ್ದಾಗ, ಒಬ್ಬ ವ್ಯಕ್ತಿ ತಾನಿದ್ದ ಬೋಗಿಯಿಂದ ಮತ್ತೂಂದು ಬೋಗಿಗೆ ಹತ್ತಲೆಂದು ಇಳಿದ. ಆದರೆ ಕೂಡಲೆ ಬೋಗಿಗೆ ಹತ್ತದೇ ನಿಧಾನ ಮಾಡಿದ್ದರಿಂದ ರೈಲು ಹೊರಟಿತು.
ಓಡಿಕೊಂಡು ಹತ್ತಲು ಮುಂದಾದ. ಆದರೆ ಓಡುವ ಬರದಲ್ಲಿ ಆಯತಪ್ಪಿ ರೈಲಿನ ಟ್ರಾಕ್ ಮೇಲೆ ಬೀಳುವಪರಿಸ್ಥಿತಿ ಬಂತು. ಆಗ ರೈಲಿನಲ್ಲಿದ್ದ ಇತರ ಪ್ರಯಾಣಿಕರು ಸಮಯ ಪ್ರಜ್ಞೆ ಮೆರೆದು ತುರ್ತು ಸರಪಳಿ ಎಳೆದರು. ರೈಲು ತಕ್ಷಣವೇ ನಿಂತಿತು. ಎಲ್ಲರೂ ಅವನತ್ತ ಓಡಿ ಬಂದರು. ನಾನೂ ಗೆಳೆಯನೊಂದಿಗೆ ಓಡಿಹೋದೆ. ಆ ವ್ಯಕ್ತಿ ಅಷ್ಟರಲ್ಲಾಗಲೇ ಪ್ರಾಣಭಯದಿಂದ ಹೆದರಿಹೋಗಿದ್ದ. ಅಲ್ಲಿ ನೆರೆದವರು ಆಗಲೇಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಾತಿನ ಮಳೆಗೆರೆಯ ಲಾರಂಭಿಸಿದ್ದರು. ಇದರಿಂದ ಆತ ಮತ್ತಷ್ಟು ಕಂಗಾಲಾಗಿದ್ದ. ಅದೃಷ್ಟವಶಾತ್ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಅವನ ಜೀವ ಉಳಿದದ್ದು ಮಾತ್ರ ಸುಳ್ಳಲ್ಲ.
ಇಂತಹ ತುರ್ತು ಸಂದರ್ಭಗಳಲ್ಲಿ ಸುಖಾಸುಮ್ಮನೆ ಬೇರೆಯವರನ್ನು ದೂರುವುದಕ್ಕಿಂತ ಕಾರ್ಯ ರೂಪಕ್ಕೆ ಇಳಿಯುವುದು ಅತ್ಯಂತ ಜರೂರಾಗಿರುತ್ತದೆ, ಎಂಬುದನ್ನು ಅರಿಯಬೇಕಿದೆ. ಹಾಗೆಂದು ಆತ ಬೋಗಿ ಹತ್ತುವಾಗ ತಡ ಮಾಡಿದ್ದು ಸರಿಯೆಂದು ಅರ್ಥವಲ್ಲ. ಆತನದ್ದೂ ತಪ್ಪಿದೆ ಇಲ್ಲಿ. ಆದರೆ ಆ ಸಮಯದಲ್ಲಿ ಜೀವ ಉಳಿಸಿದ ಆ ಪುಣ್ಯಾತ್ಮನ ಕಾರ್ಯವನ್ನು ನಿಜಕ್ಕೂ ಮೆಚ್ಚುವಂತಹದ್ದು. ಇಲ್ಲವಾಗಿದ್ದಲ್ಲಿ ಕಣ್ಣಮುಂದೆಯೇ ಆ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗುತ್ತಿತ್ತು.
- ಶ್ರೀಜಿತ್
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು