ಮಣಿಪಾಲ:ದೇಶಾದ್ಯಂತ ಕೋವಿಡ್ ಎರಡನೇ ಅಲೆ ಕ್ಷಿಪ್ರವಾಗಿ ಹರಡುತ್ತಿದ್ದು, ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1.5 ಕೋಟಿಗೆ ಹೆಚ್ಚಳವಾಗಿದೆ. ಅಷ್ಟೇ ಅಲ್ಲ ಬೆಂಗಳೂರಿನಲ್ಲಿಯೂ ಕೋವಿಡ್ ಸೋಂಕು ಅಟ್ಟಹಾಸ ಮುಂದುವರಿದಿದ್ದು, ಆಕ್ಸಿಜನ್, ಬೆಡ್, ವೆಂಟಿಲೇಟರ್ ಸಮಸ್ಯೆ ಉಂಟಾಗಿದೆ. ಏತನ್ಮಧ್ಯೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಆಪರೇಷನ್ ಥಿಯೇಟರ್ ಗಳಲ್ಲಿ ವೆಂಟಿಲೇಟರ್ ಅನ್ನು ಆಪರೇಟ್ ಮಾಡುವ ನುರಿತ ತಜ್ಞರ ಕೊರತೆ ಇದೆ ಎಂಬುದು ಬಹಿರಂಗವಾಗಿದೆ.
ಹೌದು ದಾವಣಗೆರೆಯ ಎಂಜಿ ಶಿವಪ್ರಕಾಶ್ ಎಂಬವರು ಆಪರೇಷನ್ ಥಿಯೇಟರ್ ಹಾಗೂ ವೆಂಟಿಲೇಟರ್ ನಿರ್ವಹಣಾಕಾರರ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿದ ಪ್ರಶ್ನೆಗೆ ದೊರೆತ ಉತ್ತರ ಗಾಬರಿಪಡಿಸುವಂತಿದೆ. ಯಾಕೆಂದರೆ ಕೋವಿಡ್ ಸೋಂಕಿತರಿಗೆ ಮುಖ್ಯವಾಗಿ ಅಗತ್ಯವಾಗಿರುವುದು ಆಮ್ಲಜನಕ ಮತ್ತು ವೆಂಟಿಲೇಟರ್. ಆದರೆ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಆಪರೇಟರ್ ಇಲ್ಲ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ:ಕೋವಿಡ್ ಪ್ರಕರಣಗಳು ಹೆಚ್ಚಾದರೆ ಆಕ್ಸಿಜನ್ ಬಹಳಷ್ಟು ಬೇಕಾಗುತ್ತದೆ : ಡಾ.ಕೆ ಸುಧಾಕರ್
ಈಗಾಗಲೇ ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರವಾಗುತ್ತಿದ್ದು, ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್ ಹಾಗೂ ಅನಸ್ತೇಶಿಯಾ ತಜ್ಞರನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಏನೂ ಪ್ರಯೋಜನವಾಗಿಲ್ಲ. ಸದ್ಯ ಆರ್ಥಿಕ ಇಲಾಖೆಯಲ್ಲಿ ನೇಮಕಾತಿಯ ಪ್ರಸ್ತಾವನೆ ಇದ್ದು, ಇದು ಯಾವಾಗ ಅನುಷ್ಠಾನವಾಗಲಿದೆ ಎಂದು ಕಾಯುತ್ತಿದ್ದೇವೆ ಎಂದು ಯೂನಿಯನ್ ಉಪಾಧ್ಯಕ್ಷ ಬಸವರಾಜ್ ತಿಳಿಸಿದ್ದಾರೆ.
ವೆಂಟಿಲೇಟರ್ ಆಪರೇಟರ್ಸ್ ಬಗ್ಗೆ ಸರ್ಕಾರದ ನಿರ್ಲಕ್ಷ್ಯವೇಕೆ?
ಇಡೀ ಕರ್ನಾಟಕದಲ್ಲಿ ಪ್ರತಿ ಜಿಲ್ಲೆಗೆ 28ರಿಂದ 30 ಮಂದಿ ವೆಂಟಿಲೇಟರ್ ಆಪರೇಟರ್ಸ್ ಇದ್ದೇವೆ. ನಾವು ಯಾವುದೇ ಸಂದರ್ಭದಲ್ಲಿಯೂ ಕೋವಿಡ್ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಲು ಸಿದ್ದರಿದ್ದೇವೆ. ಆದರೆ ಕಳೆದ 23 ವರ್ಷಗಳಿಂದ ಆಪರೇಷನ್ ಥಿಯೇಟರ್ ಗಳಲ್ಲಿ ಟೆಕ್ನಿಶಿಯನ್ ಗಳನ್ನು ನೇಮಕಾತಿ ಮಾಡಿಕೊಳ್ಳದೆ ಸರ್ಕಾರ ಜನರನ್ನು ವಂಚಿಸುತ್ತಿದೆ ಎಂದು ಬಸವರಾಜು ಎಂಬವರು ಅಳಲು ತೋಡಿಕೊಂಡಿದ್ದಾರೆ. ನಾವು ಈಗ ಖಾಸಗಿಯಲ್ಲಿ ಕೆಲಸ ಮಾಡುತ್ತಿದ್ದರೂ ಕೂಡಾ, ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ತಜ್ಞರ ಕೊರತೆ ಇದೆ. ಅದಕ್ಕಾಗಿ ನಮ್ಮನ್ನು ನೇಮಕಾತಿ ಮಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದೇವೆ.
ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇದೆ, ಆದರೆ ಅದನ್ನು ಆಪರೇಟ್ ಮಾಡುವವರು ಇಲ್ಲ. ಆರೋಗ್ಯ ಸಚಿವರಿಗೂ ಮನವಿ ನೀಡಿದ್ದೇವೆ. ರಾಜ್ಯಾದ್ಯಂತ ನಾವು ವೆಂಟಿಲೇಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸಲು ಸಿದ್ಧ ಎಂದು ತಿಳಿಸಿದ್ದರೂ ಈವರೆಗೂ ನಮ್ಮನ್ನು ನೇಮಕಾತಿ ಮಾಡಿಕೊಂಡಿಲ್ಲ. ಕಳೆದ 24 ವರ್ಷಗಳಿಂದ ನಮ್ಮ ಕೋರ್ಸ್ ಗೆ(ವೆಂಟಿಲೇಟರ್, ಲ್ಯಾಬ್ ಟೆಕ್ನಿಶಿಯನ್) ಯಾವುದೇ ಮಾನ್ಯತೆ ಸಿಕ್ಕಿಲ್ಲ. ಹಾಗಾಗಿ ಈ ಕೋರ್ಸ್ ಅನ್ನು ಇನ್ಮುಂದೆ ಮುಂದುವರಿಸಬೇಡಿ ಅಂತ ಮನವಿ ಮಾಡುತ್ತೇವೆ. ಯಾಕೆಂದರೆ ನಮಗೆ ನ್ಯಾಯ ಸಿಕ್ಕಿಲ್ಲ, ಇನ್ನು ಮತ್ತೆ ಆ ಕೋರ್ಸ್ ಕಲಿತು ಬಂದವರಿಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಇಲ್ಲ ಎಂದು ಕರ್ನಾಟಕ ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್ ಯೂನಿಯನ್ ನ ಅಬ್ದುಲ್ ಕರೂಲ್ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ವೆಂಟಿಲೇಟರ್ ತರಿಸಿದೆ. ಆದರೆ ಅದರ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ಯಾಕೆಂದರೆ ವೆಂಟಿಲೇಟರ್ ಆಪರೇಟ್ ಮಾಡುವ ಟೆಕ್ನಿಶಿಯನ್ ಗಳು ಇಲ್ಲ. ಆಪರೇಶನ್ ಥಿಯೇಟರ್ ಗಳಲ್ಲಿ ಅನಸ್ತೇಶಿಯ ಅಸಿಸ್ಟೆಂಟ್ ಗಳಾಗಿ ಕೆಲಸ ಮಾಡುವವರು ನಾವೇ. ರಾಜ್ಯದಲ್ಲಿ ಎಷ್ಟು ಜಿಲ್ಲಾಸ್ಪತ್ರೆಗಳಲ್ಲಿ ಆಪರೇಷನ್ ಥಿಯೇಟರ್ ಇದೆ, ಅಲ್ಲಿ ಎಷ್ಟು ಮಂದಿ ಟೆಕ್ನಿಶಿಯನ್ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿದ್ದೇವೆ. ಅದರಲ್ಲಿ ಡಿ ಗ್ರೂಪ್ ನವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉತ್ತರ ನೀಡಿದ್ದಾರೆ. ಹಾಗಾದರೆ ವೆಂಟಿಲೇಟರ್ ಟೆಕ್ನಿಶಿಯನ್ ಗಳನ್ನು ಯಾಕೆ ನೇಮಕಾತಿ ಮಾಡಿಕೊಳ್ಳುತ್ತಿಲ್ಲ? ಜನರಿಗೆ ಉತ್ತಮ ದರ್ಜೆಯ ಸೇವೆ ನೀಡಲು ಇದರಿಂದ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
“ಆರೋಗ್ಯ ಇಲಾಖೆಯಲ್ಲಿ ವೈದ್ಯರು, ಸಿಬಂದಿಗಳ ಕೊರತೆ ಇತ್ತು. ಈ ಬಾರಿ ನಾವು 2,100 ವೈದ್ಯರನ್ನು ನೇಮಕಾತಿ ಮಾಡಿಕೊಂಡಿದ್ದೇವೆ. ಅದೇ ರೀತಿ ಲ್ಯಾಬ್ ಟೆಕ್ನಿಶಿಯನ್ಸ್ ಸೇರಿದಂತೆ ಸುಮಾರು 800 ಮಂದಿಯನ್ನು ನೇರ ನೇಮಕಾತಿ ಮಾಡಿಕೊಂಡಿದ್ದೇವೆ. ಖಂಡಿತ ನಮಗೆ ವೆಂಟಿಲೇಟರ್ ಟೆಕ್ನಿಶಿಯನ್ ಗಳ ಅಗತ್ಯವಿದೆ. ನಾವು ಯಾವ ರೀತಿ ಅವರನ್ನು ನೇಮಕಾತಿ ಮಾಡಿಕೊಳ್ಳಲು ಸಾಧ್ಯತೆ ಇದೆ ಎಂಬುದನ್ನು ಪರಿಶೀಲಿಸಿ ನೇಮಕಾತಿ ಮಾಡಿಕೊಳ್ಳುತ್ತೇವೆ. ಸದ್ಯ ಗುತ್ತಿಗೆ ಆಧಾರದಲ್ಲಾದರೂ ನೇಮಕಾತಿ ಮಾಡಿಕೊಳ್ಳುತ್ತೇವೆ.”
ಆರೋಗ್ಯ ಸಚಿವ ಡಾ.ಸುಧಾಕರ್