ನವದೆಹಲಿ: ತೆಹ್ರಿ ಗಡ್ವಾಲ್ ಜಿಲ್ಲೆಯ ತೋಟಘಾಟಿ ಪ್ರದೇಶದಲ್ಲಿನ ಪರ್ವತದಲ್ಲಿ ಭಾರೀ ಭೂಕುಸಿತ ಸಂಭವಿಸಿದ ಪರಿಣಾಮ ರಿಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ 58ರಲ್ಲಿನ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ (ಆಗಸ್ಟ್ 19) ತಿಳಿಸಿದ್ದಾರೆ.
ಇದನ್ನೂ ಓದಿ:Kerala:ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ:ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ
ಭಾರೀ ಭೂಕುಸಿತ ಸಂಭವಿಸಿದ್ದರಿಂದ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಈ ನಿಟ್ಟಿನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತೆಹ್ರಿ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಎಎನ್ ಐಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಹೆದ್ದಾರಿಯಲ್ಲಿ ಬಿದ್ದಿದ್ದ ಕಲ್ಲು, ಮಣ್ಣನ್ನು ತೆಗೆಯುವ ಕೆಲಸ ನಡೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದ್ದರಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಕೆಲವು ಗಂಟೆಗಳ ಸಮಯದ ಅಗತ್ಯವಿದೆ ಎಂದು ದೀಕ್ಷಿತ್ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿದಿದ್ದು, ಇದರಿಂದಾಗಿ ಪ್ರಣ್ಮತಿ ನದಿಯ ನೀರಿನ ಮಟ್ಟ ಅಪಾಯದ ಮಿತಿ ಮೀರಿ ಹರಿಯಲಾರಂಭಿಸಿತ್ತು. ನದಿಯ ನೀರಿನ ಮಟ್ಟ ಅಪಾಯದ ಮಿತಿ ಮೀರಿ ಹರಿದಿದ್ದರಿಂದ ಜನರಲ್ಲಿ ಭೀತಿ ಮೂಡಿಸಿತ್ತು. ಹಲವು ಮನೆಗಳು, ಕೃಷಿ ಜಮೀನು ಹಾನಿಗೊಂಡಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.