ನವದೆಹಲಿ: ಉತ್ತರಾಖಂಡ್ ನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆ, ಪ್ರವಾಹ ಹಾಗೂ ಭೂಕುಸಿತದ ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ನೈನಿತಾಲ್, ಅಲ್ಮೋರಾ ಮತ್ತು ಚಂಪಾವತ್ ಜಿಲ್ಲೆಗಳಲ್ಲಿ ಹೆಚ್ಚಿನ ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ.
ರಾಜ್ಯ ನೈಸರ್ಗಿಕ ವಿಪತ್ತು ಘಟನೆಗಳ ವರದಿಯ ಪ್ರಕಾರ, ಭೂಕುಸಿತ, ಪ್ರವಾಹ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಭಾರೀ ಮಳೆಯಿಂದಾಗಿ ಚಂಪಾವತ್ ಬನ್ ಬಾಸಾ ಪ್ರದೇಶದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಪುರಿಯಲ್ಲಿ ಮೂವರು, ಚಂಪಾವತ್ ನಲ್ಲಿ ಇಬ್ಬರು ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿರುವುದಾಗಿ ವರದಿ
ಹೇಳಿದೆ.
ಅಕ್ಟೋಬರ್ 19ರಂದು ಉತ್ತರಾಖಂಡ್ ನಲ್ಲಿ 39 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ನೈನಿತಾಲ್ ಪ್ರದೇಶವೊಂದರಲ್ಲಿಯೇ 28 ಮಂದಿ ಸಾವನ್ನಪ್ಪಿದ್ದರು. ಅಲ್ಮೋರಾದಲ್ಲಿ ಆರು ಮಂದಿ, ಚಂಪಾವತ್ ಮತ್ತು ಉದಾಂ ಸಿಂಗ್ ನಗರದಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದರು ಎಂದು ವರದಿ ವಿವರಿಸಿದೆ.
ವರದಿಯ ಪ್ರಕಾರ, ಇನ್ನೂ 11 ಮಂದಿ ನಾಪತ್ತೆಯಾಗಿದ್ದಾರೆ. ಬುಧವಾರ ಬೆಳಗ್ಗೆ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಳೆಪೀಡಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಈಗಾಗಲೇ ರುದ್ರಪ್ರಯಾಗ್, ನೈನಿತಾಲ್ ಮತ್ತು ಉದಾಂ ಸಿಂಗ್ ನಗರದ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.