ಹರಿದ್ವಾರ : ಪವಿತ್ರ ಚಾರ್ ಧಾಮ್ ಯಾತ್ರೆಯ ಅಂಗವಾಗಿ ಉತ್ತಾರಖಂಡದ ರುದ್ರಪ್ರಯಾಗದಲ್ಲಿರುವ ಕೇದರಾನಾಥ ದೇಗುಲದ ಬಾಗಿಲನ್ನು ಬುಧವಾರ ಭಕ್ತರ ದರ್ಶನಕ್ಕಾಗಿ ತೆರಯಲಾಗಿದ್ದು, ಸಾವಿರಾರು ಮಂದಿ ದರ್ಶನ ಪಡೆದಿದ್ದಾರೆ.
ಬೆಳಗ್ಗೆ 5.33 ರ ವೇಳೆಗೆ ವೇದ, ಮಂತ್ರ ಘೋಷಗಳೊಂದಿಗೆ ಪುಷ್ಪಾಲಂಕೃತ ದೇಗುಲದ ಬಾಗಿಲನ್ನು ತೆರೆದು ವಿಶೇಷ ಪೂಜೆ ನೆರವೇರಿಸಲಾಗಿದೆ.
ಹಿಂದೂ ಯಾತ್ರಾ ಸ್ಥಳಗಳ ಚಾರ್‌ಧಾಮ್ ಯಾತ್ರೆ ಆಕ್ಷಯ ತೃತೀಯದ ಶುಭ ದಿನವಾದ ಮಂಗಳವಾರ ಆರಂಭವಾಗಿದೆ. ಗಂಗೋತ್ರಿಯ ದ್ವಾರವನ್ನು 11.30 ರ ವೇಳೆಗೆ , ಯಮುನೋತ್ರಿಯ ದ್ವಾರವನ್ನು 1.15 ರ ವೇಳೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ತೆರೆಯಲಾಯಿತು.
ಚಾರ್‌ಧಾಮ್ ಯಾತ್ರೆಗೆ ದೇಶದೆಲ್ಲೆಡೆಯ ಮಾತ್ರವಲ್ಲದೆ ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ಪ್ರತಿ ವರ್ಷ ಆಗಮಿಸುತ್ತಾರೆ. ಯಮುನೋತ್ರಿ , ಗಂಗೋತ್ರಿ, ಬದ್ರಿನಾಥ್ ಮತ್ತು ಕೇದಾರನಾಥ ಯಾತ್ರೆಯ ನಾಲ್ಕು ಧಾಮಗಳಾಗಿವೆ.
ಅಕ್ಟೋಬರ್ -ನವೆಂಬರ್ ತಿಂಗಳಿನಲ್ಲಿ ಭಾರೀ ಹಿಮಪಾತವಾಗುವ ಕಾರಣ ಬಾಗಿಲನ್ನು ಮುಚ್ಚಲಾಗುತ್ತದೆ ಮತ್ತು ಎಪ್ರಿಲ್ -ಮೇ ತಿಂಗಳಿನಲ್ಲಿ ತೆರೆಯಲಾಗುತ್ತದೆ.
11,755 ಮೀಟರ್ ಎತ್ತರದಲ್ಲಿ ಕೇದಾರನಾಥ ದೇಗುಲ ವಿದ್ದು, ಸರ್ಕಾರ ಯಾತ್ರಿಗಳಿಗಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿದೆ. 3000 ಮಂದಿ ಯಾತ್ರಿಕರು ದಿನವೊಂದಕ್ಕೆ ರಾತ್ರಿ ಉಳಿಕೊಳ್ಳುವಂತೆ ಟೆಂಟ್‌ಗಳನ್ನು ನಿರ್ಮಾಣ ಮಾಡಲಾಗಿದೆ.
ಈಗಲೂ ಹಿಮಪಾತವಾಗುತ್ತಿದೆ,ಆದರೆ ರಸ್ತೆಗಳನ್ನು ಸರ್ಕಾರದ ವತಿಯಿಂದ ಸಂಚಾರ ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.