ಡೆಹ್ರಾಡೂನ್:ಹಿಮಾಲಯದಲ್ಲಿರುವ ಪ್ರಸಿದ್ಧ ಬದರಿನಾಥ್ ದೇವಾಲಯ ನಿಗದಿಯಂತೆ ಏಪ್ರಿಲ್ 30ರಂದು ತೆರೆಯಬೇಕಾಗಿತ್ತು. ಆದರೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಇದೀಗ ಮೇ 15ರಂದು ದೇವಾಲಯ ತೆರೆಯಲಿದೆ ಎಂದು ವರದಿ ತಿಳಿಸಿದೆ. ಅದೇ ರೀತಿ ಕೇದಾರನಾಥ್ ದೇವಸ್ಥಾನ ಕೂಡ ಯಾತ್ರಾರ್ಥಿಗಳು ಮೇ 14ರಂದು ಭೇಟಿ ನೀಡಬಹುದಾಗಿದೆ ಎಂದು ಹೇಳಿದೆ.
ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನದ ಬಾಗಿಲು ತೆರೆಯುವ ದಿನಾಂಕವನ್ನು ಮರು ನಿಗದಿಗೊಳಿಸಲಾಗಿದೆ ಎಂದು ಬದರಿನಾಥ್ ದೇವಾಲಯದ ಧರ್ಮಾಧಿಕಾರಿ ಭುವನ್ ಚಂದ್ರ ಉನಿಯಾಲ್ ತಿಳಿಸಿದ್ದಾರೆ.
ಉಭಯ ಧಾಮ(ಬದರಿನಾಥ್, ಕೇದಾರನಾಥ)ಗಳ ಮುಖ್ಯ ಪುರೋಹಿತರು ರಾಜ್ಯಕ್ಕೆ ಆಗಮಿಸಿದ ಮೇಲೆ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ದೇವಸ್ಥಾನ ಬಾಗಿಲು ತೆರೆಯಲು ನಂತರ ಹೊಸ ದಿನಾಂಕ ನಿಗದಿಪಡಿಲಾಯಿತು. ಈ ಮೊದಲು ಬದರಿನಾಥ್ ದೇವಾಲಯ ಏಪ್ರಿಲ್ 30ರಂದು ತೆರೆಯಲು ನಿರ್ಧರಿಸಲಾಗಿತ್ತು. ಇದೀಗ ಮೇ 15ರಂದು ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ ಎಂದು ಹೇಳಿದೆ.
ಸಾಮಾನ್ಯವಾಗಿ ಶಿವರಾತ್ರಿಯಂದು ಧಾಮವನ್ನು ತೆರೆಯುವ ದಿನಾಂಕವನ್ನು ನಿರ್ಧರಿಸಲಾಗುತ್ತಿತ್ತು. ಸಾಂಪ್ರದಾಯಿಕವಾಗಿ ಹಿಂದೂ ಪಂಚಾಂಗದ ಅನ್ವಯ ಓಂಕಾರೇಶ್ವರ ದೇವಸ್ಥಾನದ ಪುರೋಹಿತರ ಸಮ್ಮುಖದಲ್ಲಿ ದಿನಾಂಕ ನಿರ್ಧರಿಸಲಾಗುತ್ತಿತ್ತು ಎಂದು ವರದಿ ವಿವರಿಸಿದೆ.
ಕೇದಾರನಾಥ್ ಮತ್ತು ಬದರಿನಾಥ್ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಸ್ಥಳವಾಗಿದೆ. 12 ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥ ಕೂಡಾ ಒಂದಾಗಿದ್ದು, ಚಾರ್ ಧಾಮಗಳಲ್ಲಿ ಕೇದಾರನಾಥ್ ಸೇರಿದೆ.