Advertisement

ಬಿಜೆಪಿ ನಾಜೂಕಿಗೆ ಸಡ್ಡು ಹೊಡೆಯುತ್ತಾ ಕಾಂಗ್ರೆಸ್‌?

11:26 PM Jan 21, 2022 | Team Udayavani |

ಉತ್ತರಾಖಂಡ ಚುನಾವಣ ಅಖಾಡದಲ್ಲಿ ಕಣಕ್ಕಿಳಿಯಲಿರುವ ತನ್ನ ಹುರಿಯಾಳುಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಕಾಂಗ್ರೆಸ್‌ನಿಂದ ವಲಸೆ ಬಂದಿರುವ ಬಹುತೇಕರಿಗೆ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ನಿಂದ ಪಟ್ಟಿ ಬಿಡುಗಡೆಯಾಗಿಲ್ಲವಾದರೂ ಸೂಕ್ತ ಅಭ್ಯರ್ಥಿಗಳ ಹುಡುಕಾಟ ಮಾತ್ರ ಬಿರುಸಿನಿಂದ ಸಾಗಿದೆ. ಶುಕ್ರವಾರದಂದು ಕಾಂಗ್ರೆಸ್‌ ಕೇಂದ್ರೀಯ ಚುನಾವಣ ಸಮಿತಿ (ಸಿಇಸಿ) ಸಭೆಯೂ ಜರಗಿದೆ. ಇದರ ನಡುವೆಯೇ, ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ಮಾಜಿ ಸಚಿವ ಹರಾಕ್‌ ಸಿಂಗ್‌ ರಾವತ್‌, ಶುಕ್ರವಾರ ಕಾಂಗ್ರೆಸಿಗೆ ಸೇರ್ಪಡೆಗೊಂಡಿದ್ದಾರೆ. ಹಾಗಾಗಿ ಉತ್ತರಾಖಂಡ ಚುನಾವಣ ಕಣ ಕುತೂಹಲಕ್ಕೆ ಕಾರಣವಾಗಿದೆ.

Advertisement

ಬಿಜೆಪಿ ಲೆಕ್ಕಾಚಾರವೇನು?
ಒಟ್ಟು 59 ವ್ಯಕ್ತಿಗಳ ಹೆಸರಿರುವ ಬಿಜೆಪಿ ಪಟ್ಟಿಯಲ್ಲಿ ಕಾಂಗ್ರೆಸ್‌ನಿಂದ ಇತ್ತೀಚೆಗೆ ಬಿಜೆಪಿಗೆ ವಲಸೆ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಚ್ಚರಿಯೆಂಬಂತೆ, ಸುಮಾರು 10 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಇವರಲ್ಲಿ ಮಾಜಿ ಸಿಎಂ ಭುವನ್‌ ಚಂದ್ರ ಖಂಡೂರಿಯವರ ಪುತ್ರಿ ರಿತು ಭೂಷಣ್‌ ಖಂಡೂರಿ ಕೂಡ ಒಬ್ಬರು. ಮೇಲ್ನೋಟಕ್ಕೆ ಇದು ವಲಸಿಗರಿಗೆ ಮಣೆ ಹಾಕಿದಂತೆ ಕಂಡರೂ ಇಲ್ಲಿ ಜಾತಿ ಆಧಾರಿತ ಸಮತೋಲನ ಹಾಗೂ ಖಚಿತವಾಗಿ ಗೆಲ್ಲುವ ಕುದುರೆಗಳನ್ನು ಕಣಕ್ಕಿಳಿಸುವ ಬಿಜೆಪಿ ಇರಾದೆ ಎದ್ದು ಕಾಣುತ್ತಿದೆ. ಉತ್ತರಾಖಂಡದಲ್ಲಿ ಬ್ರಾಹ್ಮಣ ಮತದಾರರ ಪ್ರಮಾಣ ಶೇ. 25ರಷ್ಟಿದ್ದು, ಠಾಕೂರ್‌ ಸಮುದಾಯದ ಪ್ರಮಾಣ ಶೇ. 35ರಷ್ಟಿದೆ. ಹಾಗಾಗಿ, ಮೊದಲ ಪಟ್ಟಿಯಲ್ಲಿ 15 ಬ್ರಾಹ್ಮಣರಿಗೆ ಹಾಗೂ 19 ಠಾಕೂರ್‌ ಅಭ್ಯರ್ಥಿಗಳಿಗೆ (ಸಿಎಂ ಪುಷ್ಕರ್‌ ಸಿಂಗ್‌ ಧಮಿ ಸೇರಿ) ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು, ಮೀಸಲಾತಿ ಕಡ್ಡಾಯವಿರುವ ಕ್ಷೇತ್ರಗಳಲ್ಲಿ 12 ಎಸ್‌ಸಿ, 2 ಎಸ್‌ಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.

ಟಿಕೆಟ್‌ ವಂಚಿತ ಶಾಸಕರು
ರಘುನಾಥ್‌ ಚೌಹಾನ್‌ (ಉಪ ಸಭಾಪತಿ ಹಾಗೂ ಅಲ್ಮೋರಾ ಶಾಸಕ), ರಿತು ಭೂಷಣ್‌ ಖಂಡೂರಿ (ಯಮೆRàಶ್ವರ್‌ ಶಾಸಕಿ), ಮುನ್ನಿ ದೇವಿ (ಥಾರಾಲಿ), ಸುರೇಂದ್ರ ಸಿಂಗ್‌ ನೇಗಿ (ಕರ್ಣಪರಾಯಾಗ್‌), ಕುನ್ವಾರ್‌ ಪ್ರಣವ್‌ ಸಿಂಗ್‌ ಚಾಂಪಿಯನ್‌ (ಖಂಡೂರ್‌), ಮುಕೇಶ್‌ ಕೋಲಿ (ಪೌರಿ), ಮೀನಾ ಗಂಗೋಲಾ (ಗಂಗೋಲಿಹತ್‌), ಬಲವಂತ್‌ ಬೌರ್ಯಾಲ್‌ (ಕಾಪ್ಕೋಟ್‌), ಮಹೇಶ್‌ ನೇಗಿ (ದ್ವಾರ್ಹಾತ್‌), ಹರ್ಭಜನ್‌ ಸಿಂಗ್‌ ಚೀಮಾ (ಕಾಶೀಪುರ್‌).

ಬಿಜೆಪಿಯ ಹುಷಾರು ಹೆಜ್ಜೆ
ಬಿಜೆಪಿಯ ಮೊದಲ ಪಟ್ಟಿ ಒಂದೇ ಬಾಣದಲ್ಲಿ ಮೂರ್ನಾಲ್ಕು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ, 2016ರಲ್ಲಿ ಹರೀಶ್‌ ರಾವತ್‌ ಸರಕಾರದ ವಿರುದ್ಧ ಬಂಡೆದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಜತೆಗೆ ಜಾತಿ ಆಧಾರಿತ ಲೆಕ್ಕಾಚಾರದಲ್ಲಿಯೂ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಲಾಗಿದೆ. ಹತ್ತು ಹಾಲಿ ಶಾಸಕರಿಗೆ ಟಿಕೆಟ್‌ ನೀಡಿಲ್ಲದಿರುವುದು ಆಯಾ ಕ್ಷೇತ್ರಗಳಲ್ಲಿ ಅವರ ವಿರುದ್ಧ ಇರುವ ಆಡಳಿತ ವಿರೋಧಿ ಅಲೆಗೆ ಅನುಗುಣವಾಗಿಯೇ ಕೈಗೊಳ್ಳಲಾಗಿರುವ ಸಹಜ ನಿರ್ಧಾರವೆನಿಸುತ್ತದೆ.

ಕಾಂಗ್ರೆಸ್‌ಗೆ ಬಲ
ಪ್ರಮುಖ ವಿಪಕ್ಷವಾದ ಕಾಂಗ್ರೆಸ್‌ ಸುಮ್ಮನೇ ಕೈಕಟ್ಟಿ ಕುಳಿತಿಲ್ಲ. ತನ್ನ ಹಳೆಯ ಹುಲಿಯಾದ ಹರಾಕ್‌ ಸಿಂಗ್‌ ರಾವತ್‌ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. 2016ರಲ್ಲಿ ಕಾಂಗ್ರೆಸನ್ನು ತೊರೆದು ಬಿಜೆಪಿ ಸೇರಿದ್ದ 10 ನಾಯಕರ ಪೈಕಿ ಹರಾಕ್‌ ಸಿಂಗ್‌ ಕೂಡ ಒಬ್ಬರು. ಈಗ ಅವರು ಪುನಃ ಮಾತೃಪಕ್ಷಕ್ಕೆ ಮರಳಿರುವುದು ಆ ಪಕ್ಷಕ್ಕೆ ಹೆಚ್ಚಿನ ಆತ್ಮವಿಶ್ವಾಸ ತಂದಿದೆ.

Advertisement

ಕಾಂಗ್ರೆಸ್‌ನಿಂದ ಏನು ನಿರೀಕ್ಷಿಸಬಹುದು?
ಹೀಗಾಗಿ ಕಾಂಗ್ರೆಸ್‌ನ ಮೇಲೆ ಈಗ ಒತ್ತಡ ಹೆಚ್ಚಾಗಿದೆ. ಆ ಪಕ್ಷ ಕೂಡ ಜಾತಿ ಆಧಾರಿತ ಲೆಕ್ಕಾಚಾರದಡಿ, ಬಿಜೆಪಿ ಹುರಿಯಾಳುಗಳಿಗೆ ಸಡ್ಡು ಹೊಡೆಯುವಂಥ ನಾಯಕರನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆಯಿದೆ. ಇದರ ನಡುವೆಯೇ ಬಿಜೆಪಿಯ ಮೊದಲ ಪಟ್ಟಿಯಲ್ಲಿ ಟಿಕೆಟ್‌ ವಂಚಿತರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್‌ ಗಾಳ ಬೀಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next