Advertisement

ನೀರ್ಗಲ್ಲುಗಳ ಸ್ಫೋಟ ಇನ್ನೂ ಸಿಗುತ್ತಿಲ್ಲ ಸರಿಯಾದ ಕಾರಣ

02:02 AM Feb 09, 2021 | Team Udayavani |

ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿ ಮಠದಲ್ಲಿ ಸಂಭವಿಸಿದ ನೀರ್ಗಲ್ಲುಗಳ ಸ್ಫೋಟ 20ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿರುವುದು, ಹಾಗೆಯೇ ಇನ್ನೂ 200ಕ್ಕೂ ಹೆಚ್ಚು ಮಂದಿ ಕಾಣೆಯಾಗಿರುವುದು ದುಃಖಕರ ಸಂಗತಿ. ಪರಿಸರ ಮತ್ತು ಮಾನವನ ನಡುವಿನ ಘರ್ಷಣೆ, ಹಾಗೆಯೇ ಜಾಗತಿಕ ತಾಪಮಾನ ಏರಿಕೆಯ ಪರಿಣಾಮದಿಂದಾಗಿ ಈ ಘಟನೆ ನಡೆದಿದೆ ಎಂಬುದು ಕಟು ಸತ್ಯ.

Advertisement

2013ರಲ್ಲಿ ರುದ್ರಪ್ರಯಾಗ್‌ನಲ್ಲಿ ನಡೆದಿದ್ದ ಭಾರೀ ಪ್ರವಾಹದ ಕಹಿ ನೆನಪು ಇನ್ನೂ ಜನರ ಮನಸ್ಸಲ್ಲಿ ಹಾಗೆಯೇ ಇದೆ. ಅಂದು ಕೂಡ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಅದೇ ರೀತಿ ರವಿವಾರ‌ ಜೋಶಿ ಮಠದಲ್ಲಿ ಸಂಭವಿಸಿದ ಘಟನೆ ಕೂಡ ಭಾರೀ ಸಾವು ನೋವಿಗೂ ಕಾರಣವಾಗಿದೆ. ಸದ್ಯಕ್ಕೆ 20 ಮಂದಿಯ ಶವಗಳಷ್ಟೇ ಸಿಕ್ಕಿದ್ದು, ಇನ್ನೂ 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳುತ್ತಿದೆ ಉತ್ತರಾಖಂಡ ಸರಕಾರದ ವರದಿಗಳು.

ಹವಾಮಾನ ತಜ್ಞರು ಘಟನೆಗೆ ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಬದಲಾವಣೆಯೇ ಕಾರಣ ಎಂದು ಹೇಳಿದ್ದಾರೆ. ಆದರೆ, ಚಳಿಗಾಲದಲ್ಲಿ ನೀರ್ಗಲ್ಲುಗಳು ಕರಗಿದ್ದೇಗೆ ಎಂಬ ಬಗ್ಗೆ ಯಾರ ಬಳಿಯೂ ಉತ್ತರವಿಲ್ಲ. ಒಂದು ಮೂಲಗಳ ಪ್ರಕಾರ, ಭೂಕುಸಿತ ಮತ್ತು ಹಿಮಪಾತದಿಂದಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅಂದರೆ, ತಾತ್ಕಾಲಿಕವಾಗಿ ಕೆರೆಯೊಂದು ರೂಪಿತವಾಗಿದ್ದು, ಒಂದೇ ಬಾರಿಗೆ ಸ್ಫೋಟಗೊಂಡ ಕಾರಣದಿಂದಾಗಿ ಈ ಘಟನೆ ನಡೆದಿರಬಹುದು ಎಂಬುದೂ ವಿಜ್ಞಾನಿಗಳ ಅಭಿಪ್ರಾಯ.

ಆದರೂ ಹವಾಮಾನ ಇಲಾಖೆಗೂ ಕಿಂಚಿತ್ತೂ ಮುನ್ಸೂಚನೆ ಸಿಗದೇ ಆಗಿರುವ ಈ ಘಟನೆ ಎಂಥವರ ಎದೆಯನ್ನೂ ನಡುಗಿಸುವುದು ಸಹಜ. ಹೀಗಾಗಿಯೇ ಉತ್ತರಾಖಂಡ ಸರಕಾರ, ಘಟನೆಗೆ ನಿಜವಾದ ಕಾರಣವೇನು ಎಂಬ ಬಗ್ಗೆ ತಿಳಿಯಲು ಅಧ್ಯಯನ ನಡೆಸಲು ಮುಂದಾಗಿದೆ. ಇದಕ್ಕಾಗಿ ಇಸ್ರೋ, ಡಿಆರ್‌ಡಿಒದ ಸಹಾಯ ಪಡೆಯಲು ಮುಂದಾಗಿರುವುದು ಉತ್ತಮ ಸಂಗತಿ. ಇದರಿಂದ ಮುಂದಿನ ದಿನಗಳಲ್ಲಿ ಇಂಥ ಪ್ರಕೃತಿ ವಿಕೋಪಗಳು ನಡೆಯದಂತೆ ಅಥವಾ ಮೊದಲೇ ಮುನ್ಸೂಚನೆ ಸಿಕ್ಕರೆ ಅಪಾರ ಹಾನಿ ತಪ್ಪಿಸಬಹುದು ಎಂಬುದು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್‌ ಅವರ ಅಭಿಪ್ರಾಯ.

ಈಗಾಗಲೇ ಡಿಆರ್‌ಡಿಒ ಘಟನೆಗೆ ಕಾರಣವೇನಿರಬಹುದು ಎಂಬ ಅಧ್ಯಯನ ಶುರು ಮಾಡಿದೆ. ಇಸ್ರೋ ವಿಜ್ಞಾನಿಗಳನ್ನೂ ಸಂಪರ್ಕಿಸಿದ್ದು, ಈ ಕುರಿತಂತೆ ಅವರೂ ಅಧ್ಯಯನ ನಡೆಸಲಿದ್ದಾರೆ. ಈ ಎರಡೂ ಸಂಸ್ಥೆಗಳ ವರದಿ ಬಂದ ಬಳಿಕ ಅಧ್ಯಯನ ನಡೆಸಿ ಘಟನೆಗೆ ಕಾರಣವೇನಿರಬಹುದು ಎಂಬ ನಿರ್ಧಾರಕ್ಕೆ ಬರುತ್ತೇವೆ ಎಂದೂ ಸಿಂಗ್‌ ಹೇಳಿದ್ದಾರೆ.

Advertisement

ಇನ್ನೂ ಕೆಲವು ತಜ್ಞರು ಸರಕಾರ ಇಂಥ ಘಟನೆಗಳ ಬಗ್ಗೆ ಅಧ್ಯಯ ನಕ್ಕೆ ಹೆಚ್ಚು ಅನುದಾನ ನೀಡಬೇಕು. ಈ ಪ್ರದೇಶದ ಬಗ್ಗೆ ಸಂಪೂರ್ಣವಾಗಿ ನಿಗಾ ಇಡುವ ಸಲುವಾಗಿಯೂ ಅಧ್ಯಯನ ನಡೆಯಬೇಕು. ಇದರಿಂದಾಗಿ ತಾಪಮಾನ ಬದಲಾವಣೆಯ ಪ್ರಭಾವ ಅಥವಾ ನೀರ್ಗಲ್ಲುಗಳ ಸರಿದಾಟದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಆಗ ಹೆಚ್ಚಿನ ಹಾನಿ ತಪ್ಪಿಸಬಹುದು ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next