ಡೆಹ್ರಾಡೂನ್: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು 800 ಮೀ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಚಕ್ರತಾ ಪ್ರದೇಶದಲ್ಲಿ ಬುಧವಾರ(ಫೆ.28 ರಂದು) ನಡೆದಿರುವುದು ವರದಿಯಾಗಿದೆ.
ಆಲ್ಟೊ ಕಾರಿನಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರು. ಪಂದ್ರಾನುದಿಂದ ಹಿಮಾಚಲ ಪ್ರದೇಶದ ತ್ಯುನಿಗೆ ಪ್ರಯಾಣಿಸುತ್ತಿದ್ದರು. ಕಾರು ತ್ಯುನಿ ಅಟಲ್ ಮೋಟಾರು ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ 800ಮೀ ಆಳದ ಕಂದಕಕ್ಕೆ ಬಿದ್ದಿದೆ. ಪರಿಣಾಮ 2 ಮಹಿಳೆಯರು ಮತ್ತು 2 ಮಕ್ಕಳು ಸೇರಿದಂತೆ 6 ಮೃತಪಟ್ಟಿದ್ದಾರೆ. ಓರ್ವ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಸಂಜು (35), ಸೂರಜ್ (35), ಇವರ ಪತ್ನಿ ಶೀತಲ್ (25), ಸಂಜನಾ (21), ದಿವ್ಯಾಂಶ್ (10), ಯಶ್(5) ಮೃತರು. ಮೃತರು ಹಿಮಾಚಲ ಪ್ರದೇಶದವರು ಎಂದು ತಿಳಿದು ಬಂದಿದೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಎಸ್‌ಡಿಆರ್‌ಎಫ್ ತಂಡವು ತ್ಯುನಿ ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಹಲವಾರು ಗಂಟೆಗಳ ಪರಿಶ್ರಮದ ನಂತರ ರಕ್ಷಣಾ ತಂಡವು ಆಳವಾದ ಕಂದಕದಿಂದ 2 ಮಹಿಳೆಯರು ಮತ್ತು 2 ಮಕ್ಕಳು ಸೇರಿದಂತೆ 6 ಜನರ ಮೃತದೇಹಗಳನ್ನು ಹೊರತೆಗೆದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ರಕ್ಷಣಾ ತಂಡ ಕಂದಕದಿಂದ ಹೊರತೆಗೆದು ಡೆಹ್ರಾಡೂನ್ ಹೈಯರ್ ಸೆಂಟರ್‌ಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಘಟನೆ ಬಗ್ಗೆಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಂತಾಪ ಸೂಚಿಸಿದ್ದಾರೆ.